ಹೊಸದಿಲ್ಲಿ: ಲೋಕಸಭಾ ಚುನಾವಣೆಯಲ್ಲಿ ಸಮಾನ ಮಟ್ಟದ ಮೈದಾನ ಕಾಯ್ದುಕೊಳ್ಳಲು ಚುನಾವಣ ಆಯೋಗವನ್ನು ಪ್ರತಿಪಕ್ಷ ಇಂಡಿಯಾ ಮೈತ್ರಿಕೂಟ ಭಾನುವಾರ ಒತ್ತಾಯಿಸಿದೆ. ಬಿಜೆಪಿಯು ಪ್ರಜಾಸತ್ತಾತ್ಮಕವಲ್ಲದ ಅಡೆತಡೆಗಳನ್ನು ಸೃಷ್ಟಿಸುತ್ತಿದ್ದರೂ, ದೇಶದ ಪ್ರಜಾಪ್ರಭುತ್ವವನ್ನು ಉಳಿಸಲು ಹೋರಾಡಿ ಗೆಲ್ಲಲು ಮೈತ್ರಿ ಬದ್ಧವಾಗಿದೆ ಎಂದು ಪ್ರತಿಪಾದಿಸಿದೆ.
ರಾಮಲೀಲಾ ಮೈದಾನದಲ್ಲಿ ನಡೆದ ‘ಲೋಕತಂತ್ರ ಬಚಾವೋ ರ್‍ಯಾಲಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರತಿಪಕ್ಷಗಳ ಒಕ್ಕೂಟದ ಬೇಡಿಕೆಗಳನ್ನು ಓದಿದರು.
ವಿಪಕ್ಷಗಳ ವಿರುದ್ಧ ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಯ ಕ್ರಮಗಳನ್ನು ಚುನಾವಣಾ ಸಮಿತಿ ತಡೆಯಬೇಕು, ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ತತ್ ಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಚುನಾವಣೆಯ ಸಮಯದಲ್ಲಿ, ವಿಪಕ್ಷಗಳ ಆರ್ಥಿಕತೆಯನ್ನು ಬಲವಂತವಾಗಿ ಹಾಳುಮಾಡುವ ಕ್ರಮವನ್ನು ತತ್ ಕ್ಷಣವೇ ನಿಲ್ಲಿಸಬೇಕು ಎಂಬ ಬೇಡಿಕೆಗಳನ್ನು ಓದಿದರು.
ಚುನಾವಣ ಬಾಂಡ್‌ಗಳ ಯೋಜನೆಯ ಮೂಲಕ ಬಿಜೆಪಿಯ ಸುಲಿಗೆ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯ ಎಸ್‌ಐಟಿಯನ್ನು ಸ್ಥಾಪಿಸಬೇಕು ಎಂದು ಪ್ರತಿಪಕ್ಷ ಮೈತ್ರಿಕೂಟ ಒತ್ತಾಯಿಸಿದೆ.
ಕಳೆದ ತಿಂಗಳು, ಸುಪ್ರೀಂ ಕೋರ್ಟ್ ರಾಜಕೀಯ ನಿಧಿಗಾಗಿ ಚುನಾವಣ ಬಾಂಡ್‌ಗಳ ಯೋಜನೆಯನ್ನು ರದ್ದುಗೊಳಿಸಿತು, ಇದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕು ಮತ್ತು ಮಾಹಿತಿಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ.
ಅಧಿಕಾರವು ಶಾಶ್ವತವಲ್ಲ ಮತ್ತು ದುರಹಂಕಾರವು ಛಿದ್ರವಾಗುತ್ತದೆ ಎಂಬುದು ಶ್ರೀರಾಮನ ಜೀವನದ ಸಂದೇಶ ಎಂದು ಅಧಿಕಾರದಲ್ಲಿರುವವರಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಹೇಳಲು ಬಯಸುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.