Advertisement

ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕಾ ವಾದ್ರಾ

12:30 AM Jan 24, 2019 | |

ಹೊಸದಿಲ್ಲಿ /ಅಮೇಠಿ: ಸಕ್ರಿಯ ರಾಜಕಾರಣಕ್ಕೆ ಗಾಂಧಿ-ನೆಹರೂ ಕುಟುಂಬದ ಮತ್ತೂಂದು ಕುಡಿ ಪ್ರವೇಶವಾಗಿದ್ದು, ರಾಜೀವ್‌ ಗಾಂಧಿ- ಸೋನಿಯಾ ಗಾಂಧಿ ಪುತ್ರಿ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ವಾದ್ರಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. 

Advertisement

ಮುಂಬರುವ ಲೋಕಸಭೆ ಚುನಾವಣೆ ಹೊತ್ತಿನಲ್ಲೇ ಎಐಸಿಸಿ ಕಡೆ ಯಿಂದ ಮಹತ್ವದ ಘೋಷಣೆಯಾಗಿದೆ. ಅದೂ ಅಲ್ಲದೆ ಪ್ರಿಯಾಂಕಾ ವಾದ್ರಾ ರಾಜಕೀಯ ಪ್ರವೇಶಕ್ಕಾಗಿ ಒತ್ತಾಯಿಸುತ್ತಲೇ ಬಂದಿದ್ದ ಕಾರ್ಯಕರ್ತರ ಆಶಯಕ್ಕೂ ಒತ್ತು ನೀಡಲಾಗಿದೆ. ಪ್ರಿಯಾಂಕಾಗೆ ಉತ್ತರ ಪ್ರದೇಶದ ಪೂರ್ವ ವಲಯದ ಜವಾಬ್ದಾರಿ ನೀಡಲಾಗಿದೆ. ಇದಷ್ಟೇ ಅಲ್ಲ, ಸೋನಿಯಾ ಕ್ಷೇತ್ರವಾದ ರಾಯ್‌ಬರೇಲಿ ಯಿಂದ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿದೆ. 

ರಾಜಕೀಯ ವಿಶ್ಲೇಷಕರ ಪಾಲಿಗೆ ಪ್ರಿಯಾಂಕಾ ವಾದ್ರಾ ಅವರ ರಾಜಕೀಯ ಪ್ರವೇಶ, ರಾಹುಲ್‌ ಗಾಂಧಿ ಅವರ ಒಂದು “ಮಾಸ್ಟರ್‌ ಸ್ಟ್ರೋಕ್‌’ ನಡೆ. ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಎರಡು ಪ್ರಾದೇಶಿಕ ಪಕ್ಷಗಳಾದ ಅಖೀಲೇಶ್‌ ಯಾದವ್‌ ಅವರ ಸಮಾಜವಾದಿ ಮತ್ತು ಮಾಯಾವತಿ ಅವರ ಬಹುಜನ ಸಮಾಜವಾದಿ ಪಕ್ಷಗಳು ಕಾಂಗ್ರೆಸ್‌ ಅನ್ನು ಮೈತ್ರಿಕೂಟದಿಂದ ಹೊರಗಿಟ್ಟು ಸೀಟು ಹಂಚಿಕೆ ಮಾಡಿಕೊಳ್ಳುವ ಮೂಲಕ ರಾಹುಲ್‌ಗೆ ಅವಮಾನ ಮಾಡಿದ್ದವು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡಿದ್ದ ರಾಹುಲ್‌, ಈಗ ಪ್ರಿಯಾಂಕಾ ವಾದ್ರಾ ಅವರನ್ನು ಉತ್ತರ ಪ್ರದೇಶ ರಾಜಕಾರಣಕ್ಕೆ ಕಳುಹಿಸಿ, ಎಸ್ಪಿ ಮತ್ತು ಬಿಎಸ್‌ಪಿ ಪಕ್ಷಗಳಿಗೆ ಪೆಟ್ಟು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. 

ಜ್ಯೋತಿರಾದಿತ್ಯಗೂ ಹೊಣೆ
ಉತ್ತರ ಪ್ರದೇಶದ ಸ್ವಕ್ಷೇತ್ರ ಅಮೇಠಿಗೆ ಭೇಟಿ ನೀಡಿದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿಯವರ ನೇಮಕಾತಿಯನ್ನು ಸಮರ್ಥಿಸಿಕೊಂಡರು. ಜತೆಗೆ ಕಾಂಗ್ರೆಸ್‌ನ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಉತ್ತರ ಪ್ರದೇಶದ ಪಶ್ಚಿಮ ಭಾಗದ ಉಸ್ತುವಾರಿ ನೀಡಲಾಗಿದೆ. ಸದ್ಯಕ್ಕೆ ನ್ಯೂಯಾರ್ಕ್‌ನಲ್ಲಿರುವ ಪ್ರಿಯಾಂಕಾ ಗಾಂಧಿ, ಭಾರತಕ್ಕೆ ಫೆ. 1ರಂದು ಮರಳ ಲಿದ್ದು, ಅನಂತರ ತಮಗೆ ನೀಡಿರುವ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆಂದು ಕಾಂಗ್ರೆಸ್‌ ತಿಳಿಸಿದೆ. ಪ್ರಿಯಾಂಕಾ ಅವರ ನೇಮಕಾತಿ ಅಧಿಕೃತವಾಗಿ ಘೋಷಣೆಯಾಗುತ್ತಿದ್ದಂತೆ, ಉತ್ತರ ಪ್ರದೇಶದ ಕಾಂಗ್ರೆಸ್‌ ಕಾರ್ಯಕರ್ತರು “ಇಂದಿರಾ ಮರು ಕಳಿಸಿದ್ದಾರೆ’ ಎಂಬ ಪೋಸ್ಟರ್‌ಗಳನ್ನು ಹಿಡಿದು ಕುಣಿ ದಾಡಿದ್ದಲ್ಲದೆ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. 

ಇಂದಿರಾ ಆಕರ್ಷಣೆ
ಪ್ರಿಯಾಂಕಾ ವಾದ್ರಾ ಅವರನ್ನು ನೋಡಿದರೆ ಥೇಟ್‌ ಅಜ್ಜಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಂತೆಯೇ ಕಾಣಿಸುತ್ತಾರೆ…! ಇದು ಕಾಂಗ್ರೆಸ್‌ ಕಾರ್ಯಕರ್ತರಲ್ಲಿನ ಮಾತು. ವಿಶೇಷವೆಂದರೆ ಇಂದಿರೆಯ ಹಾಗೆ ಕಾಣಿಸುತ್ತಾರೆ, ಇಂದಿರೆಯ ಉತ್ತರಾಧಿಕಾರಿಯಂತಿದ್ದಾರೆ ಎಂಬುದೇ ಪ್ರಿಯಾಂಕಾ ಅವರ ಟ್ರೇಡ್‌ ಮಾರ್ಕ್‌. 20 ವರ್ಷಗಳಿಂದಲೂ ತೆರೆಯ ಹಿಂದಿನ ರಾಜಕಾರಣ, ತಾಯಿ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರ ಕ್ಷೇತ್ರಗಳಲ್ಲಿನ ಪ್ರಚಾರದಲ್ಲಷ್ಟೇ ಕಾಣಿಸಿಕೊಳ್ಳುತ್ತಿದ್ದ 47 ವರ್ಷದ ಪ್ರಿಯಾಂಕಾ, 1999ರಲ್ಲಿ ಮೊದಲಿಗೆ ಸೋನಿಯಾ ಪರವಾಗಿ ರಾಯ್‌ಬರೇಲಿಯಲ್ಲಿ ಪ್ರಚಾರ ನಡೆಸಿದ್ದರು. 

Advertisement

ಕಾಂಗ್ರೆಸ್‌ಗೆ ಶಕ್ತಿ ತಂದ ಆಗಮನ
ಪ್ರಿಯಾಂಕಾ ಆಗಮನ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ನಿಜವಾಗಿಯೂ ಹುಮ್ಮಸ್ಸು ತಂದಿದೆ. ಆದರೆ ಎಸ್‌ಪಿ ಮತ್ತು ಬಿಎಸ್‌ಪಿಗೆ ಪ್ರಿಯಾಂಕಾ ಪ್ರವೇಶ ಸ್ಪಲ್ವ ಮಟ್ಟಿನ ಆಘಾತ ತರಬಹುದು. ಕಾಂಗ್ರೆಸ್‌ನ ಸಂಪ್ರದಾಯ ಮತಗಳಾದ ಮುಸ್ಲಿಂ ಮತ್ತು ಹಿಂದುಳಿದ ವರ್ಗಗಳ ಜನ ಕಾಂಗ್ರೆಸ್‌ ಕಡೆ ಮುಖ ಮಾಡಿದರೆ ಅಖೀಲೇಶ್‌ ಮತ್ತು ಮಾಯಾವತಿಗೆ ಹೊಡೆತ ಬೀಳಬಹುದು. ಹಾಗೆಯೇ ಬಿಜೆಪಿಗೂ ಈ ನಿರ್ಧಾರದಿಂದ ಹೊಡೆತ ಬೀಳಲಿದೆ ಎಂದೇ ಹೇಳಲಾಗುತ್ತಿದೆ. ಹಿಂದಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ವೇಳೆ ಹಿಂದುಳಿದ ವರ್ಗಗಳ ಜನ ಬಿಜೆಪಿ ಕೈ ಹಿಡಿದಿದ್ದರು. ಈ ಮತಗಳೇನಾದರೂ ತಿರುಗಿಬಿಟ್ಟರೆ ಎಂಬ ಆತಂಕ ಎದುರಾಗಬಹುದು. 

ಪ್ರಿಯಾಂಕಾರಲ್ಲಿ  ದಕ್ಷತೆಯಿದೆ
“ಪ್ರಿಯಾಂಕಾ ಗಾಂಧಿ ಹಾಗೂ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಉತ್ತರ ಪ್ರದೇಶಕ್ಕೆ ಕೇವಲ 2 ತಿಂಗಳ ಅವಧಿಗೆ ಕಳುಹಿಸಿಲ್ಲ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಸಿದ್ಧಾಂತಗಳನ್ನು ಜನರಿಗೆ ಮುಟ್ಟಿಸುವ ಜವಾಬ್ದಾರಿಯೊಂದಿಗೆ ಅವರನ್ನು ಅಲ್ಲಿಗೆ ಕಳುಹಿಸಿದ್ದೇನೆ’ ಎಂದು ರಾಹುಲ್‌ ಗಾಂಧಿ ತಿಳಿಸಿದ್ದಾರೆ. “ನನ್ನ ಸಹೋದರಿ ಪ್ರಿಯಾಂಕಾ ಅವರಲ್ಲಿ ದಕ್ಷತೆಯಿದೆ. ಕಠಿನ ಪರಿಶ್ರಮಿಯೂ ಹೌದು. ಪ್ರಿಯಾಂಕಾ ಅವರೊಂದಿಗೆ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ದಕ್ಷ ನಾಯಕರಾಗಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರೊಟ್ಟಿಗೆ ಕೆಲಸ ಮಾಡುವುದು ನನಗೆ ಖುಷಿ ತಂದಿದೆ’ ಎಂದು ರಾಹುಲ್‌ ಹೇಳಿದ್ದಾರೆ. 
ಜೀವನದ ಪ್ರತಿ ಹಂತದಲ್ಲೂ ನಾನು ಜತೆಗೆ ಇರುತ್ತೇನೆ ಎಂದು ರಾಬರ್ಟ್‌ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. 

ಕಾಂಗ್ರೆಸ್‌ನಲ್ಲಿ  “ಕುಟುಂಬ’ವೇ ಪಕ್ಷ : ನರೇಂದ್ರ ಮೋದಿ
“ಬಿಜೆಪಿಯಲ್ಲಿ ಇಡೀ ಪಕ್ಷವೇ ಕುಟುಂಬ ಎಂಬಂ ತಿದ್ದರೆ, ಬೇರೆ ಪಕ್ಷಗಳಲ್ಲಿ ಒಂದು ಕುಟುಂಬವೇ ಪಕ್ಷ ವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ವಿರುದ್ಧ ಪರೋಕ್ಷವಾಗಿ ಟೀಕೆ ಮಾಡಿ ದ್ದಾರೆ. ಪ್ರಿಯಾಂಕಾ ಗಾಂಧಿಯನ್ನು ಕಾಂಗ್ರೆಸ್‌ನ
ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿ, ಅವರಿಗೆ ಉತ್ತರ ಪ್ರದೇಶದ ಪೂರ್ವ ವಲಯದ ಚುನಾವಣ ಜವಾಬ್ದಾರಿ ನೀಡಿರುವುದಾಗಿ ಕಾಂಗ್ರೆಸ್‌ ಪ್ರಕಟಿಸಿದ ಬೆನ್ನಲ್ಲೇ ಮೋದಿಯವರಿಂದ ಈ ಹೇಳಿಕೆ ಹೊರಬಿದ್ದಿದೆ. ಮಹಾರಾಷ್ಟ್ರ ಬಿಜೆಪಿಯ ಬೂತ್‌ ಮಟ್ಟದ ಕಾರ್ಯಕರ್ತರೊಂದಿಗೆ ಬುಧ ವಾರ ವೀಡಿಯೋ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದ ಅವರು, “ಬೇರೆ ಪಕ್ಷಗಳಲ್ಲಿ ನಿರ್ಧಾರ ಗಳನ್ನು ಕುಟುಂಬದ ಅಥವಾ ವ್ಯಕ್ತಿಯ ಅಪೇಕ್ಷೆಯ ಮೇರೆಗೆ ತೆಗೆದುಕೊಳ್ಳಲಾಗುತ್ತದೆ. ಹಾಗಾಗಿ ನಮ್ಮಲ್ಲಿ ಇಡೀ ಪಕ್ಷವೇ ಒಂದು ಕುಟುಂಬ ಎಂಬ ಅನಿಸಿಕೆಯಿದ್ದರೆ, ಬೇರೆ ಪಕ್ಷಗಳಲ್ಲಿ ಕುಟುಂಬವೇ ಪಕ್ಷವಾಗಿದೆ’ ಎಂದು ಟೀಕಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next