ಮೂಲ್ಕಿ: ಸತ್ಯ ನಮ್ಮ ಹೃದಯದಲ್ಲಿರಬೇಕು, ಸತ್ಯದ ಭಾವದ ಜೊತೆ ಸೇವೆ ಮಾಡಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಹೇಳಿದರು.
ಅವರು ಇಂದು ಮಂಗಳೂರಿನ ಮೂಲ್ಕಿಯಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿ, ಕರ್ನಾಟಕದಲ್ಲಿ 40% ಸರಕಾರದ ಆತಂಕವಿದೆ. ಜನರನ್ನು ಲೂಟಿ ಮಾಡುವ ಬಿಜೆಪಿ ಸರಕಾರದ ಬಗ್ಗೆ ಆತಂಕವಿದೆ ಎಂದರು.
ನಮಸ್ಕಾರ ತುಳುನಾಡು, ಮಾತೆರೆಗ್ಲ ಎನ್ನ ಸೊಲ್ಮೆಲು ಎಂದು ತುಳುವಿನಲ್ಲೇ ಮಾತು ಆರಂಭಿಸಿದ ಪ್ರಿಯಾಂಕ ಗಾಂಧಿ, ಇದು ದೈವ ಭೂಮಿ, ಧರ್ಮದ ಮಣ್ಣು, ಜೈನ ಧರ್ಮದ ಪವಿತ್ರ ಬೀಡು ಮೂಡಬಿದ್ರೆ, ಬಪ್ಪನಾಡು, ಕಟೀಲು ದುರ್ಗಾಪರಮೇಶ್ವರಿ ದೇವರ ಆಶೀರ್ವಾದ ಈ ಭೂಮಿಗಿದೆ. ಧರ್ಮದ ಊರಾಗಿರುವ ಇಲ್ಲಿಂದ ಒಂದು ಒಳ್ಳೆಯ ಸಂದೇಶ ದೇಶಕ್ಕೆ ಸಿಕ್ಕಿದೆ ಎಂದರು.
40% ಸರಕಾರ ಪ್ರತೀ ಸರಕಾರಿ ಹುದ್ದೆಗೂ ರೇಟ್ ಫಿಕ್ಸ್ ಮಾಡುತ್ತಿದೆ. ಇದು ಚುನಾವಣೆಯ ಸಮಯ, ಜಾಗರೂಕರಾಗಿರಬೇಕು. ಇಲ್ಲಿ 40% ಸರಕಾರದ ಆತಂಕವಿದೆ. ಜನರನ್ನು ಲೂಟಿ ಮಾಡುವ ಬಿಜೆಪಿ ಸರ್ಕಾರದ ಬಗ್ಗೆ ಆತಂಕವಿದೆ. 40% ಸರಕಾರ ಪ್ರತೀ ಸರಕಾರಿ ಹುದ್ದೆಗೂ ರೇಟ್ ಫಿಕ್ಸ್ ಮಾಡುತ್ತಿದೆ, ಇದರ ಆತಂಕವಿದೆ ಎಂದು ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮೋದಿ ಚುನಾವಣೆ ಹೊತ್ತಿನಲ್ಲಿ ಬಂದು ಆತಂಕವಾದ ಮತ್ತು ಸುರಕ್ಷತೆ ಬಗ್ಗೆ ಮಾತನಾಡುತ್ತಾರೆ. ಆದರೆ ಕರ್ನಾಟಕದಲ್ಲಿ ಇದೆಲ್ಲಾ ನಡೆಯುವುದಿಲ್ಲ. ಭಾಷಣ ತಯಾರು ಮಾಡುವ ಅಧಿಕಾರಿ ಉದ್ಯೋಗದ ಬಗ್ಗೆ ಹೇಳುತ್ತಾನೆ. ಆದರೆ ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿಯೇ ಆಗಿಲ್ಲ, ಮಾತನಾಡುವುದು ಹೇಗೆ? ಕೊನೆಗೆ ಆತಂಕವಾದ, ಸುರಕ್ಷತೆಯ ಭಾಷಣ ಮಾಡಿ ಹೋಗುತ್ತಾರೆ. ಇವತ್ತು ಇಡೀ ಕರ್ನಾಟಕದಲ್ಲಿ ಇದರ ಆತಂಕವಿದೆ ಎಂದರು.
ಕಾರ್ಪೋರೇಷನ್ ಬ್ಯಾಂಕ್, ವಿಜಯಾ ಬ್ಯಾಂಕ್, ಕೆನರಾ ಬ್ಯಾಂಕ್ ಎಲ್ಲವನ್ನೂ ವಿಲೀನ ಮಾಡಿದರು. ಇಂದಿರಾ ಗಾಂಧಿ ನವ ಮಂಗಳೂರು ಬಂದರು ಮಾಡಿದರು. ನೆಹರೂ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಿದರು. ಆದರೆ ಎರಡನ್ನೂ ಅದಾನಿಗೆ ಮಾರಾಟ ಮಾಡಿದರು. ಇದೆಲ್ಲವನ್ನೂ ಒಂದಿಬ್ಬರು ಜನರಿಗೆ ಮಾರಾಟ ಮಾಡೋದು ಆತಂಕ ಅಲ್ವಾ ಎಂದು ಅವರು ಪ್ರಶ್ನಿಸಿದರು.
ನಂದಿನ ಹಾಲು ಚೆನ್ನಾಗಿಯೇ ಇದೆ, ಈಗ ಗುಜರಾತ್ ನ ಅಮುಲ್ ಗೆ ವಿಲೀನ ಮಾಡಲು ಯತ್ನಿಸುತ್ತಿದ್ದಾರೆ ಎಂದ ಅವರು, ಕಾಂಗ್ರೆಸ್ ಕೆಲವು ಗ್ಯಾರಂಟಿಗಳನ್ನ ಕೊಟ್ಟಿದೆ, ನಮ್ಮ ಸರಕಾರ ಬೇರೆ ರಾಜ್ಯಗಳಲ್ಲಿ ಕೊಟ್ಟ ಗ್ಯಾರಂಟಿ ಈಡೇರಿಸಿದೆ. ಬಿಜೆಪಿಯವರು ಲೂಟಿಯಲ್ಲೇ ತೊಡಗಿದ್ದಾರೆ, ಜನರ ಸಮಸ್ಯೆ ಅವರಿಗೆ ಬೇಕಾಗಿಲ್ಲ. ಧರ್ಮ ಮತ್ತು ಆತಂಕವಾದದ ಬಗ್ಗೆ ಮಾತನಾಡೋದು ಬಿಟ್ಟರೆ ನಿಮ್ಮ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ ಎಂದರು.