Advertisement

ಪ್ರಿಯಾಂಕಾ ರಾಜ್ಯಸಭೆಗೆ? ದಿಲ್ಲಿ ಸೋಲಿನ ಬಳಿಕ ಪಕ್ಷ ಸಂಘಟನೆಗೆ ಕೈ ಯತ್ನ

09:56 AM Feb 18, 2020 | sudhir |

ಹೊಸದಿಲ್ಲಿ: ನೆಹರೂ ಕುಟುಂಬದ ಮತ್ತೂಂದು ಕುಡಿ ರಾಜ್ಯಸಭೆ ಪ್ರವೇಶಿಸುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಧುಮುಕುವುದಕ್ಕೆ ವೇದಿಕೆ ಸಿದ್ಧವಾಗುತ್ತಿದೆಯೇ?

Advertisement

ದಿಲ್ಲಿಯ ಬೆಳವಣಿಗೆಗಳನ್ನು ಗಮನಿಸಿ ಕೆಲವು ಆಂಗ್ಲ ಮಾಧ್ಯಮಗಳು ಪ್ರಿಯಾಂಕಾ ವಾದ್ರಾ ರಾಜ್ಯಸಭೆ ಪ್ರವೇಶದ ಬಗ್ಗೆ ಸುಳಿವು ನೀಡಿವೆ. ಸದ್ಯದಲ್ಲೇ ರಾಜ್ಯಸಭೆಯ 51 ಸದಸ್ಯರು ನಿವೃತ್ತರಾಗಲಿದ್ದು, ಹೊಸಬರ ಆಯ್ಕೆ ನಡೆಯಲಿದೆ. ಆಗ ಪ್ರಿಯಾಂಕಾ ವಾದ್ರಾ ಅವರೂ ಮೇಲ್ಮನೆ ಪ್ರವೇಶಿಸಬಹುದು ಎನ್ನಲಾಗಿದೆ. ಕಾಂಗ್ರೆಸ್‌ ಪುನರ್‌ ಸಂಘಟನೆ ನಡೆಯಲಿದ್ದು, ಇದು ಅದರ ಮೊದಲ ಪ್ರಯತ್ನ ಎನ್ನಲಾಗುತ್ತಿದೆ.

ದಿಲ್ಲಿ ಚುನಾವಣೆಯಲ್ಲಿ ಸೋಲು ಪಕ್ಷವನ್ನು ಧೃತಿಗೆಡಿಸಿದೆ. ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಇಬ್ಬರೂ ಹಲವಾರು ರ್ಯಾಲಿ ನಡೆಸಿದರೂ ಮತದಾರರು ಕಾಂಗ್ರೆಸ್‌ ಕೈಹಿಡಿಯಲಿಲ್ಲ. ಅದರಲ್ಲೂ ಕಳೆದ ಬಾರಿಯಂತೆ ಶೂನ್ಯ ಸಂಪಾದನೆ ಪಕ್ಷಕ್ಕೆ ದೊಡ್ಡ ಹೊಡೆತ. ಹೀಗಾಗಿ ಪಕ್ಷಕ್ಕೆ ಪುನಶ್ಚೇತನ  ನೀಡುವ ಸಲುವಾಗಿ ಪ್ರಿಯಾಂಕಾ ವಾದ್ರಾ ಅವರನ್ನು ಸಕ್ರಿಯ ರಾಜಕಾರಣಕ್ಕೆ ಕರೆತರುವ ಚಿಂತನೆಗಳು ನಡೆದಿವೆ ಎನ್ನಲಾಗುತ್ತಿದೆ.

ಛತ್ತೀಸ್‌ಗಢದಿಂದ ಪ್ರವೇಶ?
ಈ ವರ್ಷಾಂತ್ಯಕ್ಕೆ ಹಾಲಿ ಮೇಲ್ಮನೆ ಸಂದಸ್ಯರಾಗಿರುವ ಅಂಬಿಕಾ ಸೋನಿ, ಗುಲಾಂ ನಬಿ ಆಜಾದ್‌, ದಿಗ್ವಿಜಯ ಸಿಂಗ್‌ ಸೇರಿ 51 ಸದಸ್ಯರು ನಿವೃತ್ತರಾಗಲಿದ್ದಾರೆ.

ರಾಜಸ್ಥಾನ, ಝಾರ್ಖಂಡ್‌, ಛತ್ತೀಸ್‌ಗಢದಿಂದ ಕಾಂಗ್ರೆಸ್‌ನ ಹಲವರನ್ನು ರಾಜ್ಯಸಭೆಗೆ ಕಳುಹಿಸಬಹುದಾಗಿದೆ. ಗುಲಾಂ ನಬಿ ಆಜಾದ್‌ ಅವರ ಪುನರಾಯ್ಕೆ ಖಚಿತವಾಗಿದೆ. ಛತ್ತೀಸ್‌ಗಢದಿಂದ ಪ್ರಿಯಾಂಕಾ ವಾದ್ರಾ ಅವರನ್ನು ಆರಿಸಿ ಕಳುಹಿಸುವ ಬಗ್ಗೆ ಚಿಂತನೆ ನಡೆದಿದೆ.

Advertisement

ರಾಜ್ಯಸಭೆಗೆ ಏಕೆ?
ರಾಜ್ಯಸಭೆಯಲ್ಲಿ ಪ್ರಿಯಾಂಕಾ ವಾದ್ರಾ ಅವರೇ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಮಾಡಲಿ ಎಂಬುದು ಕೆಲವು ಕಾಂಗ್ರೆಸ್‌ ನಾಯಕರ ಅಭಿಲಾಶೆ. ಪ್ರಿಯಾಂಕಾ ವಾದ್ರಾ ಮೇಲ್ಮನೆ ಪಕ್ಷದ ನಾಯಕರಿಗೂ ಶಕ್ತಿ ಬಂದಂತಾಗುತ್ತದೆ.

ಸೋನಿಯಾ ಒಪ್ಪಿಗೆ ಕಷ್ಟ?
ಮೂಲಗಳ ಪ್ರಕಾರ ಪ್ರಿಯಾಂಕಾ ವಾದ್ರಾ ರಾಜ್ಯಸಭೆ ಪ್ರವೇಶ ಚಿಂತನೆಗೆ ಸೋನಿಯಾ ಗಾಂಧಿ ಕಡೆಯಿಂದ ಒಪ್ಪಿಗೆ ಸಿಗುವುದು ಕಷ್ಟ ಎಂಬ ಮಾತುಗಳು ಕೇಳಿಬರುತ್ತಿವೆ. ಕಾಂಗ್ರೆಸ್‌ ವಂಶಾಡಳಿತ ರಾಜಕಾರಣ ಮಾಡುತ್ತಿದೆ ಎಂಬ ಬಿಜೆಪಿಯ ಟೀಕೆಯಿಂದಾಗಿ ಸಮ್ಮತಿ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಇದಕ್ಕಿಂತ ಹೆಚ್ಚಾಗಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗಾಗಿ ಪ್ರಿಯಾಂಕಾ ವಾದ್ರಾ ಅವರು ಅಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಿದ್ದಾರೆ. ಒಂದು ವೇಳೆ ರಾಜ್ಯಸಭೆ ಪ್ರವೇಶಿಸಿದರೆ ಇದಕ್ಕೆ ಪೆಟ್ಟು ಬೀಳಬಹುದು ಎಂಬ ಆತಂಕವೂ ಇದೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next