Advertisement

ಮಕ್ಕಳಿಗೆ ತ್ರಿಸೂತ್ರ ಬೋಧಿಸಿದ ಪ್ರಿಯಾಂಕ್‌

11:53 AM Dec 16, 2018 | |

ಕಲಬುರಗಿ: ವಿದ್ಯಾರ್ಥಿಗಳು ಕೇವಲ ಓದಿನತ್ತ ಗಮನ ನೀಡದೇ ವೈಜ್ಞಾನಿಕ ಜವಾಬ್ದಾರಿ ಮೈಗೂಡಿಸಿಕೊಂಡು ಮುಂದುವರಿದರೆ ಅಭಿವೃದ್ಧಿಗೆ ಪೂರಕವಾಗುತ್ತದೆ. ಅಲ್ಲದೇ ತ್ರಿಸೂತ್ರಗಳನ್ನು ಜೀವನದಲ್ಲಿ ತಪ್ಪದೇ ಪಾಲಿಸಬೇಕೆಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಸಲಹೆ ನೀಡಿದರು.

Advertisement

ಶನಿವಾರ ಗುಲಬರ್ಗಾ ವಿವಿ ಅಂಬೇಡ್ಕರ್‌ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ
ಇಲಾಖೆ, ಕರಾವಿಪ ಜಿಲ್ಲಾ ಸಮಿತಿ, ಗುಲಬರ್ಗಾ ವಿಶ್ವವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುವ 26ನೇ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶ-2018 ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಯಶಸ್ಸು ಸಾಧಿಸಬೇಕಾದರೆ ಯಾವುದೇ ವಿಷಯವಾಗಿದ್ದರೂ ಆ ಕುರಿತು ಕುತೂಹಲ ಬೆಳೆಸಿಕೊಳ್ಳಬೇಕು. ತದನಂತರ ಪ್ರಶ್ನೆ ಕೇಳುವ ಮೂಲಕ ಉತ್ತರ ಕಂಡುಕೊಳ್ಳಬೇಕು. ಮಾಡಿದ ತಪ್ಪಿನ ಜತೆಗೆ ವೈಫಲ್ಯದ ಬಗ್ಗೆ ಹೆದರಿಕೆಯಿಲ್ಲದೇ ಮುಂದುವರಿಯಬೇಕು ಎಂದು ಹೇಳಿದರು.

ದೇಶದ ಮುಂದಿನ ಪ್ರಜೆಗಳಾದ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬಿತ್ತುವ ಮೂಲಕ ಪ್ರಬುದ್ಧ ಸಮಾಜ ನಿರ್ಮಿಸಬೇಕಿದೆ. ಯಾವಾಗ ಸಮಾಜದಲ್ಲಿ ಪ್ರಭುದ್ವತೆ ಸಾಧಿಸಲಾಗುತ್ತದೋ ಆಗ ಪ್ರಗತಿ ನಿರೀಕ್ಷಿಸಬಹುದು. ಹೈ.ಕ ಭಾಗದಲ್ಲಿ ಪ್ರತಿಭೆಗೆ ಕೊರತೆಯಿಲ್ಲ.ಆದರೆ ಅಡಗಿರುವ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಮತ್ತು ಪ್ರೋತ್ಸಾಹದ ಅಗತ್ಯವಿದೆ ಎಂದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಅಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಎಸ್‌.ವಿ.ಸಂಕನೂರ ಮಾತನಾಡಿ ಸತತ 38 ವರ್ಷಗಳಿಂದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ವೈಜ್ಞಾನಿಕ ಮನೋಭಾವನೆ ಬಿತ್ತುವ ಕೆಸಲದಲ್ಲಿ ನಿರತವಾಗಿದ್ದು, ದೇಶದಲ್ಲಿಯೇ ಮಾದರಿಯಾದ ಕ್ರಿಯಾಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ ಎಂದರು.
 
ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು, ಗುಲಬರ್ಗಾ ವಿಶ್ವವಿದ್ಯಾಲಯ ಕುಲಪತಿ ಪ್ರೊ| ಎಸ್‌.ಆರ್‌. ನಿರಂಜನ, ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಮಾತನಾಡಿದರು. ಮಹಾಪೌರರಾದ ಮಲ್ಲಮ್ಮ ಎಸ್‌. ವಳಕೇರಿ, ಜಿಪಂ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶರಣಗೌಡ ಪಾಟೀಲ, ಜಿಪಂ ಸದಸ್ಯರಾದ ಶಿವಾನಂದ ಪಾಟೀಲ, ಸಂತೋಷ ಪಾಟೀಲ ದಣ್ಣೂರ, ಶಿವರುದ್ರಪ್ಪ, ರಾಜ್ಯ ವಿಜ್ಞಾನ ಪರಿಷತ್‌ ಉಪಾಧ್ಯಕ್ಷ ಹುಲಿಕಲ್‌
ನಟರಾಜ, ಕಾರ್ಯಕಾರಿ ಸದಸ್ಯರಾದ ಜಗನ್ನಾಥ ಹಲ್ಮಡಿ, ಡಾ| ಕುಂಟೆಪ್ಪ, ಸಂಗಮೇಶ ಹಿರೇಮಠ, ಹರಿಪ್ರಸಾದ,
ವಿಜ್ಞಾನಿ ಎಂ.ನಾಗರಾಜ, ಪರಿಸರವಾದಿ ಡಾ| ಬಾಲಕೃಷ್ಣ ಅಡಿಗ, ಸಹಾಯಕ ಆಯುಕ್ತ ರಾಚಪ್ಪ, ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಾಂತಗೌಡ ಪಾಟೀಲ ಹಾಗೂ ವಿದ್ಯಾರ್ಥಿಗಳು ಇದ್ದರು. ರಾಜ್ಯ ವಿಜ್ಞಾನ ಪರಿಷತ್‌ ಗೌರವ ಕಾರ್ಯದರ್ಶಿ ಗಿರೀಶ ಕಡ್ಲೆವಾಡ ಸ್ವಾಗತಿಸಿದರು, ಸಂಯೋಜಕ ಸಿ.ಕೃಷ್ಣೇಗೌಡ ವಂದಿಸಿದರು.

ಸಾಲ ಮನ್ನಾ ಬದಲು ಶಿಕ್ಷಣ-ಉದ್ಯೋಗ ಕಲ್ಪಿಸಿ
ವಿಜ್ಞಾನ ಕ್ಷೇತ್ರದಲ್ಲಿನ ಸಾಧನೆಗೆ ರಾಜ್ಯ ಸರ್ಕಾರದ ಸರ್‌.ಸಿ.ವಿ. ರಾಮನ್‌ ಹಾಗೂ ರಾಜಾರಾಮಣ್ಣ ವಿಜ್ಞಾನಿ ಪ್ರಶಸ್ತಿ ಪಡೆದಿರುವ ಗುಲ್ಬರ್ಗ ವಿವಿ ಕುಲಪತಿ ಪ್ರೊ| ಎಸ್‌. ಆರ್‌. ನಿರಂಜನ್‌ ಸಮಾವೇಶ ಉದ್ದೇಶಿಸಿ, ವಿದ್ಯಾರ್ಥಿಗಳು ಯಶಸ್ಸು ಹೊಂದುವುದಕ್ಕಿಂತ ಅನುಭವಿಗಳಾಗಿ ಹೊರ ಹೊಮ್ಮಬೇಕು ಎಂದು ಹೇಳಿದರು. ಸರ್ಕಾರ ರೈತರ ಬೆಳೆ ಸಾಲ ಮನ್ನಾ ಮಾಡುವ ಬದಲು ರೈತ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗ ಕಲ್ಪಿಸಬೇಕೆಂದು ಸಲಹೆ ನೀಡಿದ ಕುಲಪತಿಗಳು, ಸಮರ್ಪಕ ಶಿಕ್ಷಣ ನೀಡಿ ಅವರಿಗೆ ಉದ್ಯೋಗ ನೀಡಿದರೆ ಸಮಾಜಾಭಿವೃದ್ಧಿಗೆ ಪೂರಕವಾಗುತ್ತದೆ ಎಂದರು.

Advertisement

30 ಬಾಲ ವಿಜ್ಞಾನಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಉತ್ತಮ ಪ್ರದರ್ಶನ ತೋರುವ 30 ಬಾಲ ವಿಜ್ಞಾನಿಗಳು ಡಿ. 27 ರಿಂದ 31ರ ವರೆಗೆ ಓಡಿಶಾ ರಾಜ್ಯದ ಭುವನೇಶ್ವರದಲ್ಲಿ ನಡೆಯುವ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಅರ್ಹರಾಗುತ್ತಾರೆ. ಬಾಗಲಕೋಟೆ ಜಿಲ್ಲೆಯ ಮದಬಾವಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ನಿರೂಪಿಸಿದ ಮಡಿಕೆ ಕೃಷಿ-ರೈತನ ಮುಖದಲ್ಲಿ ಕೃಷಿ ಪ್ರಾತ್ಯಕ್ಷಿಕೆ, ವಿಜಯಪುರ ನಗರದ ರಿಮ್ಯಾಂಡ್‌ ಹೋಂ ಹತ್ತಿರದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ಮಳೆ ವೃತ್ತಾಂತದ ಜಲಚಕ್ರ ಸೇರಿದಂತೆ ಇತರ ವೈಜ್ಞಾನಿಕ ವರದಿಗಳು ಗಮನ ಸೆಳೆದವು.

Advertisement

Udayavani is now on Telegram. Click here to join our channel and stay updated with the latest news.

Next