ಕಲಬುರಗಿ: ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರ ನಡುವೆ ರಾಜ್ಯ ಸರ್ಕಾರದ ದ್ವೇಷ ರಾಜಕಾರಣ ಮುಂದುವರಿದಿದೆ. ಕಲಬುರಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ನೀಡಿದ್ದ 400 ಕೋಟಿ ರೂ. ಮೌಲ್ಯದ ವಿವಿಧ ಕಾಮಗಾರಿಗಳ ಅನುದಾನ ವಾಪಸ್ ಪಡೆಯಲಾಗಿದೆ ಎಂದು ಮಾಜಿ ಸಚಿವ, ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸದನದಲ್ಲಿ ಯಾವ ಶಾಸಕರ ವಿರುದ್ಧವೂ ದ್ವೇಷ ರಾಜಕಾರಣ ಮಾಡಲ್ಲ ಅಂತ ಹೇಳಿದ್ದರು. ಕಾಂಗ್ರೆಸ್ ಶಾಸಕ ಕ್ಷೇತ್ರಗಳಿಗೆ ಸಮ್ಮಿಶ್ರ ಸರ್ಕಾರ ನೀಡಿದ್ದ ಅನುದಾನವನ್ನು ವಾಪಸ್ ಪಡೆದು, ಕಾಮಗಾರಿಗಳಿಗೆ ತಡೆ ಹಿಡಿಯುವುದು ನಡೆಯುತ್ತಿದೆ ಎಂದು ದೂರಿದರು.
ಪಂಚಾಯತಿ ರಾಜ್, ಲೋಕೋಪಯೋಗಿ ಸೇರಿದಂತೆ ಅನೇಕ ಇಲಾಖೆಗಳ ಕಾಮಗಾರಿಗಳನ್ನು ತಡೆ ಹಿಡಿಯಲಾಗಿದೆ. ಆರ್ಥಿಕ ಇಲಾಖೆ ಅನುಮೋದನೆ ನೀಡಿ ಟೆಂಡರ್ ಆಗಿರುವ ಕಾಮಗಾರಿಗಳನ್ನು ತಡೆಯಲಾಗಿದೆ. ಕಾಮಗಾರಿ ಪ್ರಗತಿಯಲ್ಲಿರುವಾಗ ಕೊಟ್ಟಿರುವ ಅನುದಾನ ಹಿಂದಕ್ಕೆ ಪಡೆಯುವುದು ಎಷ್ಟು ಸರಿ ಎಂದು ಖಾರವಾಗಿ ಪ್ರಶ್ನಿಸಿದರು.
ನಮ್ಮ ಸರ್ಕಾರ ಇದ್ದ ಸಂದರ್ಭದಲ್ಲಿ ಎಲ್ಲ ಕ್ಷೇತ್ರಗಳಿಗೂ ಅನುದಾನ ಕೊಟ್ಟಿದ್ದೆವು. ಈಗ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಯಾರೂ ಆಲಿಸುತ್ತಿಲ್ಲ. ಕಲಬುರಗಿ ಜಿಲ್ಲೆ ಅನಾಥವಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಒಬ್ಬರೇ ಮಂತ್ರಿಯನ್ನು ಕೊಟ್ಟಿದ್ದಾರೆ. ಆ ಮಂತ್ರಿ ಅಷ್ಟೊಂದು ಆ್ಯಕ್ಟೀವ್ ಇಲ್ಲಾ ಅಂತಾ ಜನ ಮಾತನಾಡಿ ಕೊಳ್ಳುತ್ತಿದ್ದಾರೆ. ಹೀಗಾಗಿ ಗೋವಿಂದ ಕಾರಜೋಳ ಅವರಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಸ್ಥಾನ ಕೊಡಲಾಗುತ್ತಿದೆ. ಆದರೆ, ಕಾರಜೋಳರವರು ಕಲ್ಯಾಣ ಕರ್ನಾಟಕದಲ್ಲಿ ವಿಜಯಪುರ ಸೇರಿಸಿ 371(ಜೆ) ಸೌಲಭ್ಯ ಕೊಡಬೇಕೆಂದು ಅಂತಾ ಹೇಳಿಕೆ ಕೊಡುತ್ತಾರೆ ಎಂದು ಕಿಡಿಕಾರಿದರು.
ಚುನಾವಣೆಗೆ ಬಿಜೆಪಿ ಸಿದ್ಧತೆ
ರಾಜ್ಯ ಬಿಜೆಪಿ ಸರ್ಕಾರ ಪೂರ್ಣಾವಧಿ ಮುಗಿಸುವುದರ ಬಗ್ಗೆ ಅನುಮಾನ ಇದೆ. ಒಬ್ಬೊಬರು ಒಂದು ರೀತಿಯ ಹೇಳಿಕೆ ಕೊಡುತ್ತಿದ್ದು ಸರ್ಕಾರ ಗೊಂದಲದ ಗೂಡಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಕೇಶವಕೃಪಾ ಮತ್ತು ದೆಹಲಿಯಿಂದ ಸರ್ಕಾರದ ಆದೇಶಗಳು ಬರುತ್ತಿವೆ. ಈ ಸರ್ಕಾರ ದೊಡ್ಡ ಮಟ್ಟದ ವರ್ಗಾವಣೆ ದಂಧೆಯಲ್ಲಿ ತೊಡಗಿದೆ. ಆ ಮೂಲಕ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳುತ್ತಿದೆ ಎಂದರು.