ಬೆಂಗಳೂರು: ಬಾಹ್ಯಾಕಾಶ ಉದ್ಯಮದಲ್ಲಿ ರಾಜ್ಯವು ಪ್ರೇರಕ ಶಕ್ತಿಯಾಗಿ ಹೊರಹೊಮ್ಮಿದೆ. ಹೊಸ ನೀತಿಗಳು ಮತ್ತು ಕಾರ್ಯಕ್ರಮಗಳ ಮೂಲಕ ಬಾಹ್ಯಾಕಾಶ ತಂತ್ರಜ್ಞಾನ ಮತ್ತು ವ್ಯಾಪಾರದ ಪ್ರಾರಂಭಕ್ಕಾಗಿ ಸರಕಾರ ಬೆಂಬಲ ನೀಡುತ್ತ ಬರುತ್ತಿದೆ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಭಾರತೀಯ ಉದ್ದಿಮೆಗಳ ಒಕ್ಕೂಟ, ಭಾರತೀಯ ಬಾಹ್ಯಾಕಾಶ ಸಂಸ್ಥೆ ಮತ್ತು ರಾಜ್ಯ ಸರಕಾರದ ಸಹಯೋಗದೊಂದಿಗೆ ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ 3 ದಿನಗಳ ಕಾಲ ನಡೆಯಲಿರುವ ಬಾಹ್ಯಾಕಾಶ ಎಕ್ಸ್‌ಪೋದ 8ನೇ ಆವೃತ್ತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯವು ಬಾಹ್ಯಾಕಾಶ ರಂಗದಲ್ಲಿ ಮತ್ತಷ್ಟು ಉತ್ತಮ ಸಾಧನೆ ಮಾಡಲು ಪೂರಕವಾಗಿ ಹೊಸ ಬಾಹ್ಯಾಕಾಶ ನೀತಿಯನ್ನು ಶೀಘ್ರವೇ ಪ್ರಕಟಿಸಲಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಉದ್ಯಮಿಗಳು, ಭಾಗಿದಾರರು ತಮ್ಮ ಅಭಿಪ್ರಾಯ, ಸಲಹೆ ಸೂಚನೆಗಳನ್ನು ಸರಕಾರಕ್ಕೆ ನೀಡಿದರೆ ಅದನ್ನು ಆಲಿಸಿ ತಮ್ಮ ನೀತಿಯಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ಹೇಳಿದರು.
ಕರ್ನಾಟಕ ಸರಕಾರವು ಉದ್ಯಮ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಭವಿಷ್ಯದ ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿಗೆ ರಾಜ್ಯವನ್ನು ಕೇಂದ್ರವಾಗಿಸಲು ಹಲವು ಪ್ರಯತ್ನಗಳನ್ನು ನಡೆಯುತ್ತಿವೆ. ನಾವು ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇ. 40ರಷ್ಟು ಪಾಲನ್ನು ನಿಯಂತ್ರಿಸುವ ಮೂಲಕ 17 ಶತಕೋಟಿ ಅಮೆರಿಕನ್ ಡಾಲರ್ ಆರ್ಥಿಕ ಮೌಲ್ಯವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಸಚಿವರು ಹೇಳಿದರು.
ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆ
ರಾಜ್ಯದಲ್ಲಿ ಬಾಹ್ಯಾಕಾಶ ಉದ್ದಿಮೆಗಳ ಪ್ರೋತ್ಸಾಹಕ್ಕೆ ಬಾಹ್ಯಾಕಾಶ ತಂತ್ರಜ್ಞಾನದ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ರಾಜ್ಯವು ಸಾಫ್ಟ್ ವೇರ್ ಉದ್ದಿಮೆಯಲ್ಲಿ ಮಾತ್ರವಲ್ಲದೆ ಉಪಕರಣಗಳ ತಯಾರಿಕೆಯಲ್ಲಿಯೂ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ ಕೌಶಲ್ಯ ಭರಿತ ಉದ್ಯೋಗಿಗಳು ಲಭ್ಯರಿದ್ದಾರೆ ಎಂದು ಹೇಳಿದರು.