Advertisement

ಬಿಜೆಪಿ ಅವಧಿಯಲ್ಲೂ ಕೊಲೆಗಳಾಗಿದ್ದವು, ಸಂಸದ ಜಾಧವ್ ನೆನಪಿಸಿಕೊಳ್ಳಲಿ: ಪ್ರಿಯಾಂಕ್ ತಿರುಗೇಟು

02:05 PM Mar 12, 2024 | Kavyashree |

ಕಲಬುರಗಿ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಹೇಳಿರುವ ಸಂಸದ ಉಮೇಶ ಜಾಧವ್ ಅವರಿಗೆ ಬಿಜೆಪಿ ಸರ್ಕಾರ ಇದ್ದಾಗ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 28 ಕೊಲೆಗಳಾಗಿದ್ದವು. ಮಿಸ್ಟರ್ ಜಾಧವ್ ಆಗ ನಿಮ್ಮ ಕಾಳಜಿ ಎಲ್ಲಿತ್ತು ಎಂದು ಅಂಕಿ ಅಂಶಗಳ ನೀಡುವ… ಮೂಲಕ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು ‘ ಪ್ರಿಯಾಂಕ್ ಉಸ್ತುವಾರಿ ಸಚಿವರಾದ ನಂತರ ಜಿಲ್ಲೆಯಲ್ಲಿ 13 ಕೊಲೆಗಳಾಗಿವೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ’ ಎಂದು ಜಾಧವ ಹೇಳಿದ್ದಾರೆ. ಬಹುತೇಕ ಕೊಲೆಗಳಲ್ಲಿ ಅವರ ಚಿರಪರಿಚಿತರೇ ಆರೋಪಿಗಳಾಗಿದ್ದಾರೆ. ಅಫಜಲ್ ಪುರ ತಾಲೂಕಿನಲ್ಲಿ ನಮ್ಮ ಸರ್ಕಾರದ ಅಧಿಕಾರಿಯ ಮೇಲೆ ಟ್ರಾಕ್ಟರ್ ಹತ್ತಿಸಿದ್ದರು ಯಾರು ? ಎಂದು ತಿರುಗೇಟು ನೀಡಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ 28 ಕೊಲೆಗಳಾಗಿದ್ದವು ಎಂದು ಪುನರುಚ್ಚರಿಸಿದ ಸಚಿವರು, ಗುಜರಾತ್ ನಲ್ಲಿ ಕಳೆದ ವರ್ಷದ ಅವಧಿಯಲ್ಲಿ 2209 ಅತ್ಯಾಚಾರ ನಡೆದಿದ್ದು 36 ಗ್ಯಾಂಗ್ ರೇಪ್ ಗಳಾಗಿವೆ ಇದಕ್ಕೆ ಸುವ್ಯವಸ್ಥೆ ಕುಸಿದಿದೆ ಎನ್ನಬಹುದು. ಬಿಜೆಪಿ ಅಧಿಕಾರವಿದ್ದಾಗಲೇ ಎಬಿವಿಪಿ ಕಾರ್ಯಕರ್ತರು ಕೇಂದ್ರ ಸಚಿವ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ಕಾರಿಗೆ ಅಡ್ಡಹಾಕಿದ್ದರು. ಅದನ್ನು ಕಾನೂನು ಸುವ್ಯವಸ್ಥೆ‌ ಕುಸಿದಿದೆ ಎನ್ನಬಹುದು. ಬಿಜೆಪಿ ಅಧಿಕಾರದಲ್ಲಿ ಆಳಂದದ ಲಾಡ್ಲೆ ಮಷಾಖ್ ದರ್ಗಾದಲ್ಲಿ ಪೂಜೆ ಮಾಡುವ ವಿಚಾರದಲ್ಲಿ ಗಲಾಟೆಗಳಾಗಿದ್ದವು ಆಗ ಕಾನೂನು ಸುವ್ಯವಸ್ಥೆ ಕುಸಿದಿತ್ತು. ಈ ಸಲ ಅಂತಹ ಯಾವುದೇ ಘಟನೆ ನಡೆಯದಂತೆ ನೋಡಿಕೊಂಡಿದ್ದೇವೆ ಎಂದು ಮಾರುತ್ತರ ನೀಡಿದರು.

ಅಪರಂಜಿ ಎಲ್ಲಿ ?

ಚಿತ್ತಾಪುರದ ಅಪರಂಜಿ ಈಗ ಎಲ್ಲಿ ? ಎಂದು ಜಾಧವ್ ರನ್ನು ಪ್ರಶ್ನಿಸಿದ ಸಚಿವರು, ಅಪಘಾತವನ್ನು ಹಲ್ಲೆ ಎಂದು ಬಿಂಬಿಸಲಾಗಿತ್ತು. ಪೊಲೀಸ್ ತನಿಖೆ ನಂತರ ಅದು ಸುಳ್ಳು ಎಂದು ಸಾಬೀತಾಗಿತ್ತು. ಆ ನಂತರ ಜಾಧವ್ ರ ಅಪರಂಜಿ(ಮಣಿಕಂಠ) ನಾಪತ್ತೆಯಾಗಿದ್ದಾನೆ ಎಂದು ಕುಟುಕಿದರು.

Advertisement

ಪ್ರೊಟೋಕಾಲ್ ಬಗ್ಗೆ ಯಾವಾಗಲೂ ಮಾತನಾಡುವ ಜಾಧವ್, ಇತ್ತೀಚಿಗೆ ರಿಂಗ್ ರಸ್ತೆಯ ಸರ್ವಿಸ್ ರಸ್ತೆಗೆ ಅಡಿಗಲ್ಲು ಹಾಕುವ ಕಾರ್ಯಕ್ರಮದಲ್ಲಿ ಪ್ರೊಟೋಕಾಲ್ ಪಾಲನೆ ಮಾಡಿದ್ದಾರೆಯೇ? ಯಾವೊಬ್ಬ ಅಧಿಕಾರಿ ಇರಲಿಲ್ಲ ಕೇವಲ ಬಿಜೆಪಿಯ ಕೆಲವರು ಮಾತ್ರ ಇದ್ದರು. ಒಂದು ವಿಚಾರ ಗೊತ್ತಿರಲಿ ಯೋಜನೆಗೆ ಅನುಮತಿಯೇ ನೀಡಲಾಗಿಲ್ಲ ಎಂದರು.

ಬಿಜೆಪಿಗರ ಟಿಕೆಟ್ ನಿರಾಕರಣೆ ನನಗೆ ಸಂಬಂಧಿಸಿಲ್ಲ:

ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೇಟ್ ನೀಡುವುದು ಅನುಮಾನ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಬಿಜೆಪಿಯಲ್ಲಿ ಯಾರಿಗೆ ಟಿಕೇಟ್ ನೀಡುತ್ತಾರೆ, ನಿರಾಕರಿಸುತ್ತಾರೆ ನನಗೆ ಸಂಬಂಧಿಸಿದ್ದಲ್ಲ ಎಂದರು.

ಈ ಸಲ ಗೆಲುವು ನನ್ನದೇ ಎಂದು ಜಾಧವ ಹೇಳಿದ್ದಾರೆ ಎಂದು ಕೇಳಿದಾಗ, ಚುನಾವಣೆಯಲ್ಲಿ ಗೊತ್ತಾಗುತ್ತದೆ ಬಿಡಿ. ಪ್ರತಿಯೊಬ್ಬರು ಗೆಲ್ಲಬೇಕೆಂದೇ ಸ್ಪರ್ಧಿಸುತ್ತಾರೆ ಎಂದರು.

ಚಕ್ರವರ್ತಿ ಬಾಡಿಗೆ ಬಾಷಣಕಾರ:

ಚಕ್ರವರ್ತಿ ಸೂಲಿಬೆಲೆ ಅವರಿಗೆ ಜಿಲ್ಲೆಯ ಪ್ರವೇಶ ನಿರಾಕರಣೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನನಗೆ ಮಾಡಲು ಬಹಳಷ್ಟು ಕೆಲಸಗಳಿವೆ. ಬಾಡಿಗೆ ಭಾಷಣಕಾರನ ಬಗ್ಗೆ ಮಾತನಾಡಲು ಸಮಯವಿಲ್ಲ. ಅವನು ಒಂದೇ ಒಂದು ಗ್ರಾಮ ಪಂಚಾಯತ್ ಚುನಾವಣೆ ಗೆದ್ದಿಲ್ಲ ಎಂದು ತೀಕ್ಷವಾಗಿ ಪ್ರತಿಕ್ರಿಯಿಸಿದರು.

ನಾನೇ ಮನೆ ದೇವರು:

ಆರ್ ಅಶೋಕ್ ರಿಂದ ಹಿಡಿದು ಸ್ಥಳೀಯ ಬಿಜೆಪಿ ನಾಯಕರಿಗೆ ನಾನು ಮನೆಯ ದೇವರು ಇದ್ದಹಾಗೆ. ನನ್ನನ್ನು ದಿನಾಲು ನೆನಪಿಸಿಕೊಳ್ಳುತ್ತಿರುತ್ತಾರೆ. ಇಲ್ಲದಿದ್ದರೆ ಅವರಿಗೆ ಆಹಾರ ಜೀರ್ಣವಾಗುವುದಿಲ್ಲ ಎಂದರು.

ಸಂವಿಧಾನ ಬದಲಿಸುವ ಬಗ್ಗೆ ಮಾತನಾಡಿದ ಸಂಸದ ಅನಂತಕುಮಾರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು ಅವರಿಗೆ ತಲೆ ಕೆಟ್ಟಿದೆ, ಮಾನಸಿಕ‌ ಸಮತೋಲನ ಕಳೆದುಕೊಂಡಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next