ಕಲಬುರಗಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಪ್ಪಿತಸ್ಥರು ಎಂದು ಎಲ್ಲಿಯೂ ಕಂಡು ಬಂದಿಲ್ಲ. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಸ್ಥಿರವಾಗುತ್ತಿದೆ. ಹೀಗಾಗಿ ಪ್ರತಿಪಕ್ಷಗಳನ್ನು ನಿಯಂತ್ರಣದಲ್ಲಿ ಇಡಬೇಕೆಂದು ಈ ರೀತಿ ಕೇಂದ್ರ ಸರ್ಕಾರ ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ದೂರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಪ್ರತಿಪಕ್ಷಗಳ ವಿರುದ್ಧ ಜಾರಿ ನಿರ್ದೆಶನಾಲಯ ಹಾಗೂ ಇತರ ಸಂಸ್ಥೆಗಳು ಅಸ್ತ್ರ ಬಳಸಿಕೊಳ್ಳುತ್ತಿದೆ. ಕರ್ನಾಟಕದಲ್ಲೂ ಕೇಂದ್ರ ಸರ್ಕಾರ ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಬೇರ ಪಕ್ಷಗಳನ್ನು ದುರ್ಬಲ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಕೆಲವು ದಿನಗಳ ಹಿಂದೆ ಕೂಡ ಕೊಲೆ ಆರೋಪಿಯ ಹೇಳಿಕೆ ಮೇರೆಗೆ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪ್ರತಿಪಕ್ಷಗಳ ವಿರುದ್ಧ ಸಿಬಿಐ, ಐಟಿ, ಇಡಿ ಎಲ್ಲವನ್ನೂ ಬಳಸಿ ಬ್ಲ್ಯಾಕ್‍ಮೇಲ್ ತಂತ್ರ ಮಾಡುತಿದ್ದಾರೆ ಎಂದು ಕಿಡಿಕಾರಿದರು.
ಅಧಿಕಾರಿಗಳ ವರ್ಗಾವಣೆ ಹೆಸರಲ್ಲಿ ರಾಜ್ಯ ಸರ್ಕಾರ ಹಣದ ದಂಧೆ ಮಾಡುತ್ತಿದೆ. ವರ್ಗಾವಣೆ ಕಲೆಕ್ಷನ್ ನಲ್ಲಿ ಬಾಹುಬಲಿ 2, ಕೆಜಿಎಫ್ ದಾಖಲೆ ಮೀರಿಸಿದೆ. ಆಪರೇಷನ್ ಕಮಲಕ್ಕೆ ಮಾಡಿರುವ ಖರ್ಚು ವೆಚ್ಚವನ್ನು ಈಗ ವರ್ಗಾವಣೆಯಲ್ಲಿ ಪಡೆಯುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಾಲಿ ಇಲ್ಲ, ದಿನೇಶ್ ಗುಂಡೂರಾವ್ ನಮ್ಮ ಅಧ್ಯಕ್ಷರಿದ್ದಾರೆ. ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಬಗ್ಗೆ ಹೈಕಮಾಂಡ್ ಸೂಚನೆಯನ್ನೂ ನೀಡಿಲ್ಲ. ಈ ಕುರಿತು ಹೈಕಮಾಂಡ್‍ನಿಂದ ಯಾವುದೇ ಮಾಹಿತಿಯೂ ಬಂದಿಲ್ಲ ಎಂದರು.