ವಾಡಿ: ನೌಕರಿ ನೇಮಕಾತಿ ಪರೀಕ್ಷೆ ಉತ್ತೀರ್ಣ ಮಾಡಲು ಯುವಕರಿಂದ ಲಂಚ ಪಡೆಯುತ್ತಿರುವ ಬಿಜೆಪಿ ಸರ್ಕಾರ, ಕಾಮಗಾರಿಗಳ ಗುತ್ತಿಗೆ ನೀಡಲು ಶೇ.40 ಕಮಿಷನ್ ಕೇಳುತ್ತಿದೆ. ಎಲ್ಲಾ ರೀತಿಯ ಭ್ರಷ್ಟಾಚಾರದ ವ್ಯವಹಾರಗಳನ್ನು ಕುದುರಿಸಲು ವಿಧಾನಸೌಧ ಬಳಕೆ ಮಾಡಿಕೊಳ್ಳುತ್ತಿದೆ. ಭಾಜಪದ ಶಾಸಕರುಗಳೇ ಮಂತ್ರಿಗಳಿಗೆ ಬ್ರೋಕರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಶಾಸನ ಬರೆಯುವ ವಿಧಾನಸೌಧ ಇಂದು ವ್ಯಾಪಾರ ಸೌಧ ಆಗಿ ಬದಲಾಗಿದೆ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದರು.
ಪಟ್ಟಣದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಏರ್ಪಡಿಸಲಾಗಿದ್ದ ಚಿತ್ತಾಪುರ ತಾಲೂಕು ಮಟ್ಟದ ಯುವ ಘರ್ಜನೆ ಕಾರ್ಯಕ್ರಮದ ಬೃಹತ್ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರದಿಂದಾಗಿ ಸರ್ಕಾರಿ ನೌಕರಿಯ ಕನಸು ಹೊತ್ತು ಪರೀಕ್ಷೆ ಬರೆದಿದ್ದ 3.5 ಲಕ್ಷ ಯುವಕರ ಭವಿಷ್ಯ ಬೀದಿಪಾಲಾಯಿತು. ಅನ್ಯಾಯದ ವಿರುದ್ಧ ನಾವು ದನಿ ಎತ್ತಿದ ಪರಿಣಾಮ ಹಗರಣದ ಕಿಂಗ್‌ಪಿನ್‌ಗಳು ಸೇರಿದಂತೆ ರಾಜ್ಯದ ಓರ್ವ ಐಪಿಎಸ್ ಅಧಿಕಾರಿ ಜೈಲುಪಾಲಾದರು. ಗೃಹಮಂತ್ರಿ ಸೇರಿದಂತೆ ಯಾರ ವಿರುದ್ಧವೂ ಕಠಿಣ ಕ್ರಮಕೈಗೊಳ್ಳದೆ ಯುವಕರ ಭವಿಷ್ಯ ಕೊಂದ ಬಿಜೆಪಿ ಸರ್ಕಾರದ ಘನ ಮುಖ್ಯಮಂತ್ರಿ ಬೊಮ್ಮಾಯಿ, ಕಾಂಗ್ರೆಸ್ ಪಕ್ಷದ ಧಮ್ಮು, ತಾಕತ್ತು, ಧೈರ್ಯದ ಬಗ್ಗೆ ಮಾತನಾಡುತ್ತಾರೆ ಎಂದು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: ಬ್ರಹ್ಮಾಸ್ತ್ರದ ಸ್ಟಂಟ್ ನಲ್ಲಿ ಶಾರುಖ್ ಬದಲಿಗೆ ಕಾಣಿಸಿಕೊಂಡಿದ್ದು ಇವರೇ…ಫೋಟೋ ವೈರಲ್
ಅಮಾಯಕ ಯುವಕರ ಮೆದುಳಿಗೆ ಕೋಮುವಾದದ ನಶೆ ಏರಿಸಿ ಕೊರಳಿಗೆ ಕೇಸರಿ ಶಾಲು ಹಾಕಿಸುತ್ತಿದ್ದಾರೆ. ಸಾಮಾನ್ಯ ಜನರ ಮಕ್ಕಳನ್ನು ಧರ್ಮ ರಕ್ಷಣೆ ಮತ್ತು ಗೋ ರಕ್ಷಣೆಗೆ ನಿಲ್ಲಿಸುತ್ತಿರುವ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರು, ತಮ್ಮ ಮಕ್ಕಳನ್ನು ವಿದೇಶಗಳಲ್ಲಿ ಓದಿಸುತ್ತಿದ್ದಾರೆ. ಹಿಜಾಬ್, ಹಲಾಲ್ ಕಟ್, ಮಸೀದಿ ಮೇಲಿನ ಮೈಕ್‌ಗಳ ವಿರುದ್ಧ ಗಲಾಟೆ ಎಬ್ಬಿಸಲು ಮಾತ್ರ ಬಡ ಕುಟುಂಬದ ಮಕ್ಕಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಯುವಕರು ಉದ್ಯೋಗ ಕೇಳಿದರೆ ಕಾಶ್ಮೀರ್ ಫೈಲ್ಸ್ ಸಿನೆಮಾ ತೋರಿಸುತ್ತಾರೆ. ಅನ್ಯಾಯದ ವಿರುದ್ಧ ನಮ್ಮಂತವರು ಹೋರಾಟಕ್ಕೆ ಮುಂದಾದರೆ ಇಡಿ ನೋಟಿಸ್ ಕಳಿಸುತ್ತಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ ಶಾಸಕ ಪ್ರಿಯಾಂಕ್, ಚಿತ್ತಾಪುರದಲ್ಲಿ ಕೇಳಿಬಂದಿರುವ ಯುವಕರ ಘರ್ಜನೆ ಇನ್ನುಮುಂದೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಕೇಳಿ ಬರುತ್ತದೆ. ಯುವಕರ ಹೋರಾಟ ದನಿಯನ್ನು ನಾನು ವಿಧಾನಸೌಧದ ಒಳಗೆ ಮೊಳಗಿಸುತ್ತೇನೆ. ಯುವ ಕಾಂಗ್ರೆಸ್ ಕಾರ್ಯಕರ್ತರ ಶಕ್ತಿ ಏನು ಎಂಬುದನ್ನು ಈ ಡಬಲ್ ಇಂಜಿನ್ ಸರ್ಕಾರಕ್ಕೆ ತೋರಿಸುತ್ತೇವೆ ಎಂದರು.
ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ರಾಜ್ಯ ರಾಜಕಾರಣಕ್ಕೆ ಓರ್ವ ಪ್ರಬುದ್ಧ ರಾಜಕಾರಣಿಯನ್ನು ಕೊಟ್ಟಿರುವ ಚಿತ್ತಾಪುರದ ಜನತೆ ನಿಜಕ್ಕೂ ಬುದ್ದಿವಂತರು. ಚಿತ್ತಾಪುರ ಮತಕ್ಷೇತ್ರವಷ್ಟೇಯಲ್ಲ ಇಡೀ ರಾಜ್ಯವೇ ಪ್ರಿಯಾಂಕ್ ಖರ್ಗೆ ಅವರ ಹೋರಾಟದ ಗುಣವನ್ನು ಮತ್ತು ಅಭಿವೃದ್ಧಿಪರ ಚಿಂತನೆಯನ್ನು ಸ್ಮರಿಸುತ್ತಿದೆ. ಇಂಥಹ ನಾಯಕನನ್ನು ಸೋಲಿಸಲು ಬಿಜೆಪಿ ಪಣ ತೊಟ್ಟಿದೆ. ಆದರೆ ಬಲಿಷ್ಟ ಯುವಶಕ್ತಿಯೊಂದು ಪ್ರಿಯಾಂಕ್ ಅವರ ಹಿಂದಿದೆ ಎಂಬುದನ್ನು ವಿರೋಧಿಗಳು ಮರೆತಿದ್ದಾರೆ. ಪ್ರಿಯಾಂಕ್ ವಿರುದ್ಧ ಯಾರೇ ನಿಂತರೂ ಠೇವಣಿ ಕಳೆದುಕೊಳ್ಳುವಂತೆ ಕೆಲಸ ಮಾಡಬೇಕು ಎಂದು ಯುವಕರಿಗೆ ಕರೆ ನೀಡಿದರು.
ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹ್ಮದ್ ನಲಪಾಡ್ ಮಾತನಾಡಿದರು. ಕಾಂಗ್ರೆಸ್ ಸಂಪನ್ಮೂಲ ವ್ಯಕ್ತಿ ನಿಖಿತರಾಜ್ ಮೌರ್ಯ ಉಪನ್ಯಾಸ ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಮಹೆಮೂದ್ ಸಾಹೇಬ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವಾನಂದ ಹೊನಗುಂಟಿ, ವಾಡಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶರಣು ವಾರದ್, ಚಿತ್ತಾಪುರ ಬ್ಲಾಕ್ ಅಧ್ಯಕ್ಷ ಸಂಜಯ ಬುಳಕರ, ಸೇವಾದಳ ಅಧ್ಯಕ್ಷ ರಾಹುಲ ಮೇನಗಾರ, ಮುಖಂಡರಾದ ಸುಭಾಷ ರಾಠೋಡ, ಶಿವಾನಂದ ಪಾಟೀಲ, ನಾಗರೆಡ್ಡಿಗೌಡ ಪಾಟೀಲ ಕರದಾಳ, ಟೋಪಣ್ಣ ಕೋಮಟೆ, ರವಿ ಆರ್‌ಬಿ.ಚವ್ಹಾಣ, ಅಬ್ದುಲ್ ಅಜೀಜ್ ಸೇಠ, ಜುಮ್ಮಣ್ಣ ಪೂಜಾರಿ, ಸುನೀಲ ಗುತ್ತೇದಾರ, ಗೋವಿಂದ ಸಗರ, ಶಂಕರ ಜಾಧವ ಸೇರಿದಂತೆ ಹತ್ತು ಸಾವಿರಕ್ಕೂ ಹೆಚ್ಚು ಯುವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಸವರಾಜ ಚಿನಮಳ್ಳಿ ನಿರೂಪಿಸಿ, ವಂದಿಸಿದರು.