ಬೆಂಗಳೂರು: ವಿದ್ಯಾರ್ಥಿಗಳನ್ನು ಉದ್ಯೋಗ ಸನ್ನದ್ಧ ಸಜ್ಜುಗೊಳಿಸುವ ಮೂಲಕ ಉದ್ಯೋಗಾವಕಾಶ ಮತ್ತು ಉದ್ಯಮಶೀಲತೆಯನ್ನು ಹೆಚ್ಚಿಸಲು “ನಿಪುಣ ಕರ್ನಾಟಕ’ ಕಾರ್ಯಕ್ರಮವನ್ನು ರಾಜ್ಯ ಕರ್ನಾಟಕ ಸರಕಾರ ಘೋಷಿಸಿದ್ದು, ಶೀಘ್ರದಲ್ಲೇ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನವೆಂಬರ್ 19 ರಿಂದ 21ರ ವರೆಗೆ ಬೆಂಗಳೂರಿನ ಅರಮನೆ ಆವರಣದಲ್ಲಿ ನಡೆಯುವ ಬೆಂಗಳೂರು ಟೆಕ್ ಶೃಂಗ ಸಭೆಯ ಪೂರ್ವಭಾವಿಯಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಲ್ಯಾಬ್(ಆರ್ ಆ್ಯಂಡ್ ಡಿ)ಗಳು ಮತ್ತು ಶಿಕ್ಷಣ ಸಂಸ್ಥೆಗಳ ತಜ್ಞರು ಮತ್ತು ಪ್ರತಿನಿಧಿಗಳ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ವೈಜ್ಞಾನಿಕ ಮನೋಭಾವ ಮತ್ತು ಮನಃಸ್ಥಿತಿಯನ್ನು ಬೆಳೆಸಲು ವಿದ್ಯಾರ್ಥಿಗಳನ್ನು ಚರ್ಚೆ, ರಸಪ್ರಶ್ನೆ ಮತ್ತು ವಿಜ್ಞಾನ ಪ್ರದರ್ಶನಗಳಂತಹ ಜ್ಞಾನಾಭಿವೃದ್ಧಿ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವಂತಹ ಕಾರ್ಯಕ್ರಮಗಳನ್ನು ರೂಪಿಸುವಂತೆ ಸಚಿವರು ಸಲಹೆ ನೀಡಿದರು.
ಸರಕಾರದ ಉದ್ದೇಶವು ಅತ್ಯಂತ ಸ್ಪಷ್ಟವಾಗಿದ್ದು, ನಾವು ಕೇವಲ ಹೂಡಿಕೆಯ ತಾಣವಾಗಿ ಇರಲು ಬಯಸುವುದಿಲ್ಲ. ಜ್ಞಾನ ಹಾಗೂ ಕೌಶಲ್ಯವೇ ನಮ್ಮ ಬಂಡವಾಳವಾಗಬೇಕು. ಪಿರಮಿಡ್ ಮಾದರಿಯಲ್ಲಿ ಶಿಕ್ಷಣ ಮೊದಲನೆಯದು ಹಾಗೂ ಕೌಶಲ್ಯ ಎರಡನೆಯದು, ನಾವೀನ್ಯತೆಗಳು ಮೂರನೇಯದು ಎಂದು ಸಚಿವರು ಹೇಳಿದರು.
ನಾವು ರಾಜ್ಯದಲ್ಲಿ ಅತ್ಯುತ್ತಮ ಮತ್ತು ಹೆಚ್ಚು ತರಬೇತಿ ಪಡೆದ ಮಾನವ ಸಂಪನ್ಮೂಲವನ್ನು ಹೊಂದಿದ್ದೇವೆ, ನಮ್ಮ ಯುವ ಸಮೂಹದಲ್ಲಿ ಕೌಶಲವನ್ನು ಸ್ಥಳೀಯವಾಗಿ ನೀಡಿ, ಜಾಗತಿಕವಾಗಿ ಉದ್ಯೋಗ ಮಾಡುವ ಅವಕಾಶಗಳನ್ನು ಕಲ್ಪಿಸುವುದು ನಮ್ಮ ಗುರಿಯಾಗಿದೆ. ಹಾಗೆಯೇ ಪೇಟೆಂಟ್‌ಗಳನ್ನು ಪಿಚ್ ಮಾಡಲು ಶಿಕ್ಷಣ ತಜ್ಞರಿಗೆ ವೇದಿಕೆಯನ್ನು ರಚಿಸುವುದಾಗಿ ಹೇಳಿದರು.