Advertisement

Priyank Kharge ಗುಜರಾತಿನಲ್ಲೇ ಬಂಡವಾಳ ಹೂಡಲು ಕಂಪನಿಗಳಿಗೆ ಪ್ರಧಾನಿ ಒತ್ತಡ

08:50 PM Jun 25, 2024 | Team Udayavani |

ಬೆಂಗಳೂರು: ತಮ್ಮ ತವರು ರಾಜ್ಯ ಗುಜರಾತ್‌ನಲ್ಲೇ ಬಂಡವಾಳ ಹೂಡಿಕೆ ಮಾಡುವಂತೆ ಕಂಪನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಒತ್ತಡ ಹಾಕುತ್ತಿದ್ದಾರೆ ಎಂದು ಐಟಿ-ಬಿಟಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಆರೋಪಿಸಿದರು.

Advertisement

ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೂಡಿಕೆದಾರರನ್ನು ರಾಜ್ಯಕ್ಕೆ ಕರೆತರುವವರು ನಾವು, ಹೂಡಿಕೆ ಮಾಡುವಂತೆ ಅವರ ಮನವೊಲಿಸುವವರು ನಾವು. ಅದಕ್ಕಾಗಿ ಕಷ್ಟಪಡುವವರು ನಾವು. ಅದರ ಫ‌ಲ ತೆಗೆದುಕೊಂಡು ಹೋಗುವವರು ಅವರು (ಪ್ರಧಾನಿಗೆ) ಎಂದರೆ ಹೇಗೆ? ಪ್ರಧಾನಿಯೇ ಫೋನ್‌ ಮಾಡಿ ಹೇಳಿದರೆ, ಉದ್ಯಮಿಗಳಾದರೂ ಏನು ಮಾಡುತ್ತಾರೆ. ನೀವೇ ಹೇಳಿ?’ ಎಂದು ಕೇಳಿದರು.

ಹಾಗಿದ್ದರೆ ಕೈಗಾರಿಕೋದ್ಯಮಿಗಳಿಗೆ ಗುಜರಾತಿನಲ್ಲೇ ಹೂಡಿಕೆ ಮಾಡುವಂತೆ ಪ್ರಧಾನಿ ಬೆದರಿಕೆ ಹಾಕುತ್ತಿದ್ದಾರಾ ಎಂದು ಕೇಳಿದಾಗ, ಬೆದರಿಕೆ ಮಾಡುತ್ತಿದ್ದಾರೋ ಅಥವಾ ಮುದ್ದು ಮಾಡಿ ಕರೆಯುತ್ತಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಐದಾರು ಇಂತಹ ಘಟನೆಗಳು ನಡೆದಿವೆ. ರಾಜ್ಯಕ್ಕೆ ಬಂದವರು ನಂತರ ಅಲ್ಲಿಗೆ ಹೋಗಿದ್ದಾರೆ.

ಒಂದು ಕಂಪನಿ ರಾಜ್ಯಕ್ಕೆ ಬಂದಿತ್ತು. ನಂತರ ಆಂಧ್ರಪ್ರದೇಶಕ್ಕೆ ಹೋಯ್ತು. ಅಲ್ಲಿಂದ ಗುಜರಾತ್‌ಗೆ ಶಿಫ್ಟ್ ಆಯ್ತು. ಇದಾದ ಬಳಿಕ ಮತ್ತೂಂದು ಕಂಪನಿ ಇಲ್ಲಿ ಹೂಡಿಕೆಗೆ ಆಸಕ್ತಿ ತೋರಿಸಿತ್ತು. ನಂತರದಲ್ಲಿ ಗುಜರಾತ್‌ಗೆ ಹೋಯಿತು ಎಂದು ಕಂಪನಿಗಳ ಹೆಸರು ಪ್ರಸ್ತಾಪಿಸದೆ ಸೂಚ್ಯವಾಗಿ ಹೇಳಿದರು.

ಗುಜರಾತ್‌ ಮಾದರಿಗೆ ಒತ್ತಾಯ:
ಈ ಮಧ್ಯೆ ಬಂಡವಾಳ ಹೂಡಿಕೆ ಆಕರ್ಷಣೆ ವಿಚಾರದಲ್ಲಿ ಗುಜರಾತ್‌ ಮಾದರಿಯ ಸಬ್ಸಿಡಿ ಸೇರಿದಂತೆ ಮತ್ತಿತರ ಉತ್ತೇಜನಕರ ಸೌಲಭ್ಯಗಳನ್ನು ನೀಡಬೇಕು ಎಂಬ ಕೂಗು ದಿನದಿಂದ ದಿನಕ್ಕೆ ಪ್ರಬಲವಾಗುತ್ತಿದ್ದು, ಈ ಸಂಬಂಧ ಖುದ್ದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಯಾಗುವುದಾಗಿ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು.

Advertisement

ಗುಜರಾತ್‌ ಸಬ್ಸಿಡಿ ವಿಚಾರದಲ್ಲಿ ಮೊದಲಿಗೆ ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದರು. ನಂತರ ತಮ್ಮ ಹೇಳಿಕೆ ತಿರುಚಲಾಗಿದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಈಚೆಗೆ ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌, ಹೂಡಿಕೆದಾರರನ್ನು ಆಕರ್ಷಿಸಲು ಪ್ರಧಾನಿ ನರೇಂದ್ರ ಮೋದಿ ಅವರ ತವರು ಗುಜರಾತಿಗೆ ನೀಡುವ ಪ್ರೋತ್ಸಾಹಕ ಸೌಲಭ್ಯಗಳನ್ನು ಕೇಂದ್ರ ಸರ್ಕಾರ ಕರ್ನಾಟಕ್ಕೂ ನೀಡಬೇಕು ಎಂದು ಒತ್ತಾಯಿಸಿದ್ದರು. ಈಗ ಇದಕ್ಕೆ ಪ್ರಿಯಾಂಕ ಖರ್ಗೆ ಕೂಡ ದನಿಗೂಡಿಸಿದ್ದು, ಜೂನ್‌ 27ರಂದು ದೆಹಲಿಗೆ ಹೊರಟಿದ್ದೇನೆ. ಈ ವೇಳೆ ಹಣಕಾಸು ಸಚಿವರಿಗೆ ಈ ಸಂಬಂಧ ಒತ್ತಾಯಿಸಲಾಗುವುದು ಎಂದು ಹೇಳಿದರು.

ಗುಜರಾತಿಗೆ ನೀಡುವ ಸೌಲಭ್ಯಗಳನ್ನು ಇತರ ರಾಜ್ಯಗಳಿಗೂ ನೀಡಬೇಕು ಎಂಬ ಒತ್ತಾಯ ಬಹುತೇಕರದ್ದಾಗಿದೆ. ಈಚೆಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಕೂಡ ಈ ನಿಟ್ಟಿನಲ್ಲಿ ಪ್ರಸ್ತಾಪಿಸಿದ್ದನ್ನು ಸ್ಮರಿಸಬಹುದು ಎಂದೂ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next