Advertisement

Invest Karnataka: ಇನ್ವೆಸ್ಟ್ ಕರ್ನಾಟಕ- ಜಪಾನ್‌ನಲ್ಲಿ ರೋಡ್‌ ಶೋ

10:59 AM Jun 26, 2024 | |

ಉದಯವಾಣಿ ಸಮಾಚಾರ
ಬೆಂಗಳೂರು: ಮುಂದಿನ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಜಪಾನ್‌ನಲ್ಲಿ ಮಂಗಳವಾರ ರೋಡ್‌ ಶೋ ನಡೆಸಿದ್ದು, 150ಕ್ಕೂ ಹೆಚ್ಚು ಕಂಪನಿಗಳಿಗೆ ರಾಜ್ಯದಲ್ಲಿನ ಬಂಡವಾಳ ಹೂಡಿಕೆಯ ಅವಕಾಶಗಳ ಬಗ್ಗೆ ಪರಿಚಯ ಮಾಡಿಕೊಟ್ಟಿದೆ. ತ್ಯಾಜ್ಯ ನೀರು ನಿರ್ವಹಣಾ ಘಟಕ ಸ್ಥಾಪಿಸಲು ಡೈಕಿ ಆ್ಯಕ್ಸಿಸ್‌ ಸಂಸ್ಥೆ ಜತೆ 100 ಕೋಟಿ ರೂ. ಒಪ್ಪಂದಕ್ಕೂ ಇದೇ ಸಂದರ್ಭದಲ್ಲಿ ಸಹಿ ಹಾಕಲಾಗಿದೆ.

Advertisement

ಇದನ್ನೂ ಓದಿ:Surathkal: ಬಿದ್ದ ಹೊಂಡದಲ್ಲೇ ವಾಹನ ನಿಲ್ಲಿಸಿ ಪ್ರತಿಭಟಿಸಿದ ಗಾಯಾಳು!

ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್‌ ನೇತೃತ್ವದ ಉನ್ನತ ಮಟ್ಟದ ನಿಯೋಗವು ಜಪಾನ್‌ ಭೇಟಿಯ 2ನೇ ದಿನ ಪರಿಸರ ಸಂರಕ್ಷಣೆ ಉಪಕರಣ ತಯಾರಿಸುವ ಬಹುರಾಷ್ಟ್ರೀಯ ಕಂಪನಿ ಡೈಕಿ ಆ್ಯಕ್ಸಿಸ್‌, ಕೈಗಾರಿಕಾ ಯಂತ್ರೋಪಕರಣ ತಯಾರಿಸುವ
ಸುಮಿಟೊಮೊ ಹೆವಿ ಇಂಡಸ್ಟ್ರೀಸ್‌ (ಎಸ್‌ಎಚ್‌ಐ), ಸೆಮಿಕಂಡಕ್ಟರ್‌ ಪರಿಕರ ತಯಾರಿಸುವ ರೆನೆಸಸ್‌ ಎಲೆಕ್ಟ್ರಾನಿಕ್ಸ್‌ ಕಾರ್ಪೊರೇಷನ್‌ ಕಂಪನಿ ಹಾಗೂ ಜಪಾನ್‌ ಸರ್ಕಾರದ ಸಣ್ಣ ಕೈಗಾರಿಕೆಗಳ ಸಂಘಟನೆ ಮುಖ್ಯಸ್ಥರ ಜತೆಗೆ ಸಮಾಲೋಚನೆಯನ್ನೂ ನಡೆಸಿತು.

ಈ ಸಭೆಗಳಲ್ಲಿನ ಮಾತುಕತೆಗಳು ರಾಜ್ಯದಲ್ಲಿನ ಬಂಡವಾಳ ಹೂಡಿಕೆಯ ಅವಕಾಶಗಳನ್ನು ಅನ್ವೇಷಿಸಲು ಮತ್ತು ಕರ್ನಾಟಕ ಮತ್ತು ಜಪಾನ್‌ ನಡುವಣ ಕೈಗಾರಿಕಾ ಸಹಯೋಗ ಬಲಪಡಿಸುವ ಬಗ್ಗೆ ಕೇಂದ್ರೀಕೃತಗೊಂಡಿದ್ದವು. ರಾಜ್ಯದಲ್ಲಿನ ಸದೃಢ ಕೈಗಾರಿಕಾ ಪರಿಸರ ವ್ಯವಸ್ಥೆ, ಉದ್ಯಮಕ್ಕೆ ಅನುಕೂಲಕರ ವಾತಾವರಣ, ಸರ್ಕಾರದ ಪ್ರಗತಿಪರ ನೀತಿಗಳ ಬಗ್ಗೆ ಎಂ.ಬಿ.ಪಾಟೀಲ್‌ ಮನದಟ್ಟು ಮಾಡಿಕೊಟ್ಟರು.

ಡೈಕಿ ಆ್ಯಕ್ಸಿಸ್‌ ಇಂಡಿಯಾ ಪ್ರೈವೇಟ್‌ ಲಿ.ನ ನಿರ್ದೇಶಕ ರಿಯೊ ರಿಯೊಟಾ ವಾಜಾ ಅವರನ್ನು ಭೇಟಿಯಾಗಿ ಕರ್ನಾಟಕದಲ್ಲಿ ಸುಸ್ಥಿರ ಬೆಳವಣಿಗೆ, ನೀರಿನ ಉಳಿತಾಯ, ಕೊಳಚೆ ನೀರು ನಿರ್ವಹಣಾ ಘಟಕ (ಎಸ್ಟಿಪಿ) ಸ್ಥಾಪಿಸುವ ಕುರಿತು ಮಾತುಕತೆ
ನಡೆಸಿದರು. ಸುಮಿಟೊಮೊ ಹೆವಿ ಇಂಡಸ್ಟ್ರೀಸ್‌ ಚೇರ್ಮನ್‌ ಆಫ್ ರಿಪ್ರಸೆಂಟೇಟಿವ್‌ ನಿರ್ದೇಶಕರ ಜತೆಗೆ ಮಾತುಕತೆ ನಡೆಸಿ ರಾಜ್ಯದಲ್ಲಿ ಕಂಪನಿಯ ವಹಿವಾಟಿನ ವಿಸ್ತರಣೆಗೆ ಅಗತ್ಯ ಬೆಂಬಲ ನೀಡುವುದಾಗಿ ನಿಯೋಗವು ಭರವಸೆ ನೀಡಿತು. 2024 ರ ಅಂತ್ಯದ ವೇಳೆಗೆ ಎಸ್‌ಎಚ್‌ಐ ಬೆಂಗಳೂರಿನಲ್ಲಿ ತನ್ನ ಪ್ರಧಾನ ಕಚೇರಿ ಆರಂಭಿಸಲಿದೆ.

Advertisement

ಜಪಾನ್‌ ಮತ್ತು ಭಾರತದ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ (ಎಸ್‌ಎಂಇ) ಮುಖ್ಯಸ್ಥರ ಸಭೆಯನ್ನು ಆಗಸ್ಟ್‌ ತಿಂಗಳಲ್ಲಿ ನಡೆಸಲು ಈ ಸಭೆಯಲ್ಲಿ ನಿರ್ಧರಿಸಲಾಯಿತು. ಕರ್ನಾಟಕದ ನಿಯೋಗವು ಟೋಕಿಯೋದಲ್ಲಿನ ಕನ್ನಡ ಸಂಘದ ಪ್ರತಿನಿಧಿಗಳ ಜೊತೆ ಬೆಳಗಿನ ಉಪಾಹಾರ ನಡೆಸಿತು. ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್‌. ಸೆಲ್ವಕುಮಾರ್‌, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಯುಕ್ತೆ ಗುಂಜನ್‌ ಕೃಷ್ಣ, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next