ಕಲಬುರಗಿ: ಕಾಂಗ್ರೆಸ್ ಪಕ್ಷ ರಿಜೆಕ್ಟೆಡ್ ಪಕ್ಷ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿದ್ದಾರೆ. ಪಾಪ ಸ್ವತಃ ಈಶ್ವರಪ್ಪನವರೇ ರಿಜೆಕ್ಟ್ ಆಗಿದ್ದಾರೆ. ಗುತ್ತಿಗೆದಾರರ ಕಮೀಷನ್ ಕೇಸಲ್ಲಿ ಏನೂ ನಡೆದೇ ಇಲ್ಲ ಅಂದಿದ್ದ ಅವರೇ ರಾಜೀನಾಮೆ ನೀಡಿದರಲ್ಲ. ಅಷ್ಟು ಸಾಕಲ್ಲವಾ? ರಿಜೆಕ್ಟೆಡ್ ಅನ್ನಲಿಕ್ಕೆ ಎಂದು ಪ್ರಿಯಾಂಕ್ ಖರ್ಗೆ ಕುಟುಕಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಿಮ್ಮ ಬಾಯಿ ಬಡಕುತನಕ್ಕೆ ನಿಮ್ಮ ಸಚಿವ ಸ್ಥಾನವನ್ನು ಕಿತ್ತುಕೊಳ್ಳಲಾಗಿದೆ. ಹಾಗಿದ್ದಾಗ ಯಾರೂ ರಿಜೆಕ್ಟೆಡ್ ಅನ್ನುವುದು ಸಾಬೀತಾಗಿದೆಯಲ್ಲಾ, ಪದೇ ಪದೇ ಕಾಂಗ್ರೆಸ್ಸಿನ ಕಡೆಗೆ ಬೊಟ್ಟು ಮಾಡುವುದನ್ನು ಬಿಟ್ಟು ಬಿಡಿ” ಎಂದರು.
ಮಹಾರಾಷ್ಟ್ರ ಸೇರಿದಂತೆ ಬಹುತೇಕ ಕಡೆ ಬಿಜೆಪಿ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಶಾಸಕರನ್ನೇ ಖರೀದಿ ಮಾಡಿ ಸರ್ಕಾರ ರಚನೆ ಮಾಡಿದ್ದಾರೆ ಎಂದರು.
ಇದನ್ನೂ ಓದಿ: ಕೇಂದ್ರ ಸಚಿವ ಸ್ಥಾನಕ್ಕೆ ಮುಖ್ತಾರ್ ಅಬ್ಬಾಸ್ ನಖ್ವಿ ರಾಜೀನಾಮೆ; ಉಪರಾಷ್ಟ್ರಪತಿಯಾಗಿ ಆಯ್ಕೆ?
ಪಿಎಸ್ ಐ ಹಗರಣದ ಕುರಿತು ಮಾತನಾಡಿದ ಅವರು ಯಡಿಯೂರಪ್ಪ ಸಿಎಂ ಆಗಿದ್ದಾಗ ಔಟ್ ಲುಕ್ ಪತ್ರಿಕೆಯಲ್ಲಿ ಕರ್ನಾಟಕ ಅತ್ಯಂತ ಭ್ರಷ್ಟ ಸರಕಾರ ಎಂದು ಸುದ್ದಿ ಬಂದಿತ್ತು ಮತ್ತೆ ಈಗ ಅದೇ ಸುದ್ದಿಯನ್ನೇ ಮರುಪ್ರಕಟ ಮಾಡಬೇಕಿದೆ. ಪಿಎಸ್ ಐ ಹಗರಣದ ಬಗ್ಗೆ ಸದನದಲ್ಲೇ ಶಾಸಕರಾದ ರವಿ ಅವರ ಪ್ರಶ್ನೆಗೆ ಉತ್ತರಿಸಿ, ಉನ್ನತ ತಂಡದ ಅಧಿಕಾರಿಗಳು ಕ್ಲೀನ್ ಚಿಟ್ ಕೊಟ್ಟಿರುವುದಾಗಿ ಗೃಹ ಸಚಿವರು ಉತ್ತರಿಸಿದ್ದರು. ಈಗ ಎಡಿಜಿಪಿ ಅರೆಸ್ಟ್ ಆಗಿದ್ದಾರೆ, ಗೃಹ ಸಚಿವರು ನಮ್ಮ ಮೇಲೆ ಟೀಕೆ ಮಾಡುತ್ತಿದ್ದಾರೆ. ಅವರಿಗೆ ಕಾಮನ್ ಸೆನ್ಸ್ ಇಲ್ಲವಾ ? ಪಿಎಸ್ ಐ ನೇಮಕಾತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದೇ ಸಮರ್ಥಿಸಿದ್ದ ಗೃಹ ಸಚಿವರು, ಈಗ ಎಡಿಜಿಪಿ ಸೇರಿದಂತೆ ಸುಮಾರು 60 ಜನ ಅಧಿಕಾರಿಗಳು ಹಾಗೂ ಇತರರು ಅರೆಸ್ಟ್ ಆಗಿದ್ದಾರಲ್ಲ ಏನಂತಿರಿ ಎಂದು ಪ್ರಶ್ನಿಸಿದರು.