ಬೆಂಗಳೂರು: ಇಂದಿನಿಂದ ಆರಂಭವಾಗಲಿರುವ ವಿಧಾನ ಮಂಡಲದ ಅಧಿವೇಶನಕ್ಕೆ ಕಾಂಗ್ರೆಸ್ ಅಣಿಯಾಗಿದ್ದು, ಆಡಳಿತ ಪಕ್ಷದ ಲೋಪದೋಷಗಳ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿಬೀಳಲು ಕೈ ಪಡೆ ಸಜ್ಜಾಗಿದೆ.
ಪ್ರವಾಹ ನಿರ್ವಹಣೆಯಲ್ಲಿ ವಿಫಲ, ಸಿಲಿಕಾನ್ ಸಿಟಿ ನೀರಿನ ಪ್ರವಾಹದಲ್ಲಿ ಮುಳುಗಿರುವುದು, ಕೋಲಾರ ಜಿಲ್ಲಾ ಉತ್ಸುವಾರಿ ಸಚಿವರ ವಿರುದ್ಧ ಗುತ್ತಿಗೆದಾರರ ಪರ್ಸಟೆಂಜ್ ಆರೋಪ ಸೇರಿ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಸದನದಲ್ಲಿ ಮಣಿಸಲು ಕಾಂಗ್ರೆಸ್ ತಂತ್ರ ರೂಪಿಸಿದೆ.
ಈ ಮಧ್ಯೆ, ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿಯ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ, ಬಿಜೆಪಿ ಮುಖಂಡರು ಈಗಾಗಲೇ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮರಳು, ದಿಂಬು, ಪ್ರಶ್ನೆಪತ್ರಿಕೆ ಸೋರಿಕೆ, ಸೋಲಾರ್ ಅಕ್ರಮ ಆರೋಪ ಮಾಡಿದ್ದಾರೆ. ಈ ಆರೋಪಗಳ ದಾಖಲೆಗಳ ಇಟ್ಟುಕೊಂಡು ಸದನದಲ್ಲಿ ಚರ್ಚೆ ಮಾಡಲಿ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ರಾಜಕೀಯ ಅನುಭವದಲ್ಲಿ ಯಾವತ್ತೂ ಹಿಟ್ ಆ್ಯಂಡ್ ರನ್ ಮಾಡಿಲ್ಲ. ಪ್ರತಿ ಹಗರಣ ವಿಚಾರ ಬಂದಾಗ ನಮ್ಮ ಬಳಿ ಸಾಕ್ಷಿ ಕೇಳುತ್ತೀರಾ, ಈಗ ನೀವು ಕೂಡ ಸಾಕ್ಷಿ ಇಟ್ಟು ಸದನದಲ್ಲಿ ಮಾತನಾಡಿ, ಸದನದಲ್ಲಿ ಎಲ್ಲ ಹಗರಣಗಳ ಬಗ್ಗೆ ಚರ್ಚೆ ಆಗಲಿ ಎಂದು ಆಗ್ರಹಿಸಿದರು.
ಸದನದಲ್ಲಿ ಚರ್ಚಿಸಲು ಅನೇಕ ವಿಷಯಗಳಿವೆ ಶಾಸಕಾಂಗ ಪಕ್ಷದ ನಾಯಕರು ಸರ್ಕಾರದ 40 ಪರ್ಸೆಂಟ್ ಕಮಿಷನ್ ವಿಚಾರ ಚರ್ಚಿಸಲು ಸ್ಪೀಕರ್‌ಗೆ ಪತ್ರ ಬರೆದಿದ್ದರು. ನಾನು ಎರಡು ಬಾರಿ ಪತ್ರ ರವಾನಿಸಿ ಮನವಿ ಮಾಡಿದರೂ, ಸ್ಪೀಕರ್ ಅವರು ಅವಕಾಶ ನೀಡಲಿಲ್ಲ. ಸದನ ನಡೆಸುವ ಜವಾಬ್ದಾರಿ ಕೇವಲ ವಿರೋಧ ಪಕ್ಷಗಳದ್ದು ಮಾತ್ರವೇ ಎಂದು ಪ್ರಶ್ನಿಸಿದರು.