ಬೆಂಗಳೂರು: ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಿಸುವ ಮೂಲಕ ಉತ್ತಮ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಕಾಪಾಡಲು “ವರ್ತುಲ ಆರ್ಥಿಕತೆ’ (ಸಕ್ಯುಲರ್ ಎಕಾನಮಿ) ಗೆ ಒತ್ತು ನೀಡಬೇಕಾಗಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
ಮಾಹಿತಿ ತಂತ್ರಜ್ಞಾನ ಇಲಾಖೆಯು ಶುಕ್ರವಾರ ಹಮ್ಮಿಕೊಂಡಿದ್ದ “ವರ್ತುಲ ಆರ್ಥಿಕತೆ’ ಕುರಿತ ದುಂಡು ಮೇಜಿನ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ನಮ್ಮ ಮುಂದಿರುವ ಏಕೈಕ ಮಾರ್ಗವೆಂದರೆ ವರ್ತುಲ ಆರ್ಥಿಕತೆಗೆ ಪ್ರಾಮುಖ್ಯತೆ ನೀಡುವುದು. ಇದರಿಂದ ನಾವು ತ್ಯಾಜ್ಯ ಉತ್ಪಾದನೆಯ ಮೇಲೆ ನಿಯಂತ್ರಣ ಹೇರಬಹುದು ಎಂದರು.
ಪಾರಂಪರಿಕವಾಗಿ ನಮಗೆ ಬಂದಿರುವ ಪರಿಸರ ಸಂಪತ್ತನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಬಿಟ್ಟು ಹೋಗಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಸಂಪನ್ಮೂಲಗಳ ಬಳಕೆಯಿಂದ ತ್ಯಾಜ್ಯ ಮಾಲಿನ್ಯ ಮತ್ತು ಜೈವಿಕ ವೈವಿಧ್ಯತೆಯ ನಷ್ಟದಂತಹ ಜಾಗತಿಕ ಸವಾಲುಗಳನ್ನು ನಾವು ಎದುರಿಸುತ್ತಿದ್ದೇವೆ ನಾವು ಭೂಮಿಯ ಸಂಪನ್ಮೂಲಗಳನ್ನು ಹೊರತೆಗೆದು ಅದರಿಂದ ಉತ್ಪನ್ನಗಳನ್ನು ತಯಾರಿಸುತ್ತೇವೆ, ನಂತರ ಅವುಗಳನ್ನು ತ್ಯಾಜ್ಯವಾಗಿ ಎಸೆಯುತ್ತೇವೆ. ಇದು ಕೇವಲ ಭೂಮಿಗಷ್ಟೇ ಅಲ್ಲದೇ, ನಮ್ಮ ಆರ್ಥಿಕತೆಯ ಮೇಲೂ ದುಷ್ಪರಿಣಾಮವನ್ನು ಬೀರುತ್ತಿದೆ ಎಂದು ಅಭಿಪ್ರಾಯಪಟ್ಟರು.
ಈಗ ನಾವು ಉತ್ಪಾದಿಸಿದ ವಸ್ತುಗಳ ಸಂಪೂರ್ಣ ಬಳಕೆಯ ನಂತರ ಮಾಡುತ್ತಿರುವ ಮರುಬಳಕೆಯ ಪ್ರಮಾಣ ಕೇವಲ ಶೇ.7.2 ಮಾತ್ರ. ಈಗಾಗಲೇ ಭೂಮಿಯ ನೈಸರ್ಗಿಕ ಸಂಪನ್ಮೂಲಗಳನ್ನು ಲಭ್ಯವಿರುವ ಪ್ರಮಾಣಕ್ಕಿಂತ ಹೆಚ್ಚಾಗಿ ಬಳಸುತ್ತಿದ್ದೇವೆ ಎಂದು ವಿಶ್ವಸಂಸ್ಥೆಯ ವರದಿಗಳು ಸೂಚಿಸುತ್ತವೆ ಎಂದು ಸಚಿವರು ಇದೇ ವೇಳೆ ಹೇಳಿದರು.
ದುಂಡು ಮೇಜಿನ ಸಭೆಯಲ್ಲಿ ಆಸ್ಟ್ರೇಲಿಯಾ, ಕೆನಡಾ, ಡೆನ್ಮಾರ್ಕ್, ಫಿನ್‌ಲ್ಯಾಂಡ್, ಜರ್ಮನಿ, ಇಸ್ರೇಲ್, ಜಪಾನ್, ನೆದರ್‌ಲ್ಯಾಂಡ್, ಪೋಲ್ಯಾಂಡ್, ಸ್ವಿಟ್ಜರ್‌ಲ್ಯಾಂಡ್, ಯುನೈಟೆಡ್ ಕಿಂಗ್‌ಡಮ್‌ನ ರಾಯಭಾರ ಕಚೇರಿಯ ಪ್ರತಿನಿಧಿಗಳು ಭಾಗವಹಿಸಿದ್ದರು. ಮಾಹಿತಿ ಹಾಗೂ ತಂತ್ರಜ್ಞಾನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ , ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್ ಮತ್ತಿತರು ಉಪಸ್ಥಿತರಿದ್ದರು.