ಬೆಂಗಳೂರು: ಗೋವಿಂದರಾಜ ನಗರದಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣ ಬಿರುಸಿನ ಪ್ರಚಾರ ನಡೆಸಿದರು.
ಮನೆ-ಮನೆಗೆ ತೆರಳಿ ಮತಯಾಚಿಸಿದ ಅವರು, ಪಕ್ಷದ ಗ್ಯಾರಂಟಿಗಳು, ಪ್ರಣಾಳಿಕೆಯಲ್ಲಿರುವ ಬಡವರ ಪರ
ಅಂಶಗಳು ಮತ್ತು ತಮ್ಮ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತ ಬೇಟೆ ನಡೆಸಿದರು. ಈ ವೇಳೆ ಜನ
ಸ್ವಯಂಪ್ರೇರಿತವಾಗಿ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿರುವುದು ಕಂಡುಬಂತು.
ಈ ವೇಳೆ ಮಾತನಾಡಿದ ಪ್ರಿಯಕೃಷ್ಣ, “ಚುನಾವಣೆಗೆ ಇನ್ನು ನಾಲ್ಕೈದು ದಿನಗಳು ಮಾತ್ರ ಬಾಕಿ ಇದೆ. ಎಲ್ಲರೂ ಒಟ್ಟಾಗಿ ಪಕ್ಷದ ಗೆಲುವಿಗೆ ಶ್ರಮಿಸಬೇಕು. ಇದು ನಮ್ಮ ಪರೀಕ್ಷಾ ಸಮಯ. ಇಲ್ಲಿ ಗೆದ್ದರೆ ಮುಂದೆ ಐದು ವರ್ಷ ಕ್ಷೇತ್ರದ ಸೇವೆಗೆ ಅವಕಾಶ ಸಿಗಲಿದೆ. ಕಾರ್ಯಕರ್ತರು, ಮತದಾರರು ಮನಸ್ಸು ಮಾಡಿದರೆ, ಬಿಜೆಪಿಗೆ ಗೋವಿಂದ ರಾಜನಗರದಲ್ಲಿ ಐದು ಸಾವಿರಕ್ಕಿಂತ ಹೆಚ್ಚು ಮತಗಳು ಬರುವುದೂ ಅನುಮಾನ’ ಎಂದರು.
“ಚುನಾವಣೆ ಹತ್ತಿರ ಬರುತ್ತಿದ್ದಂತೆ,ಹಣ ಹಂಚುವವರು, ತಪ್ಪು ಮಾಹಿತಿ ರವಾನಿಸುವವರು, ಆ ಮೂಲಕ ಗೊಂದಲ ಸೃಷ್ಟಿಸುವವರು ಇರುತ್ತಾರೆ. ಹತಾಶೆಯಿಂದ ಏನಾದರೂ ಮಾಡಿ ಸಮಸ್ಯೆ ಹುಟ್ಟುಹಾಕುವವರು ಇದ್ದೇ ಇರು ತ್ತಾರೆ. ಅದಾವುದಕ್ಕೂ ಕಿವಿಗೊಡಬೇಡಿ’ ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮತದಾರರು, “ಯಾರು ಏನೇ ಹೇಳಿದರೂ ನಿಲುವು ಬದಲಾಗುವುದಿಲ್ಲ. ಈಗಾಗಲೇ ತಮಗೇ (ಪ್ರಿಯಕೃಷ್ಣ) ಮತ ಚಲಾಯಿಸಬೇಕು ಎಂದು ತೀರ್ಮಾನ ಮಾಡಿ ಆಗಿದೆ. ತಮ್ಮ ಗೆಲುವು ಮತ್ತು ಪಕ್ಷದ ಗ್ಯಾರಂಟಿ ಗಳೂ ಎರಡೂ ನಿಶ್ಚಿತ’ ಎಂದು ಭರವಸೆ ನೀಡಿದರು.