Advertisement

ಪ್ರಿಯಕರನಿಗೇ ಆ್ಯಸಿಡ್‌ ಎರಚಿದ ಪ್ರಿಯತಮೆ!

03:45 AM Jan 18, 2017 | Team Udayavani |

ಬೆಂಗಳೂರು: ಮದುವೆಯಾಗಲು ನಿರಾಕರಿಸಿದ ಹೆಣ್ಣುಮಕ್ಕಳ ಮೇಲೆ ಆ್ಯಸಿಡ್‌ ದಾಳಿ ನಡೆಸಿದ ಪ್ರಕರಣಗಳು ಆಗಾಗ್ಗೆ ವರದಿಯಾಗಿ, ಭಾರೀ ಸುದ್ದಿಯಾಗುತ್ತದೆ. ಆದರೆ, ಇಲ್ಲೊಂದು ಪ್ರಕರಣದಲ್ಲಿ ತನ್ನನ್ನು ಮದುವೆಯಾಗಲು ನಿರಾಕರಿಸಿದ ಪ್ರಿಯತಮನ ಮೇಲೆ ಯುವತಿಯೊಬ್ಬಳು ಆ್ಯಸಿಡ್‌ ಎರಚಿದ್ದಾಳೆ.

Advertisement

ತನ್ನನ್ನು ಮದುವೆಯಾಗಲು ನಿರಾಕರಿಸಿದ ಎಂಬ ಕಾರಣಕ್ಕೆ ಶ್ರೀರಾಂಪುರದ ಪ್ರಕಾಶನಗರ ನಿವಾಸಿ ಜಯಕುಮಾರ್‌ (32) ಎಂಬಾತನ ಮೇಲೆ ಸೋಮವಾರ ರಾತ್ರಿ ಲಿಡಿಯಾ ಎಪ್ಸಿಬಾ ಎಂಬಾಕೆ ತನ್ನ ಮಾವನ ಮಗನೊಂದಿಗೆ ಸೇರಿ ಆ್ಯಸಿಡ್‌ ದಾಳಿ ಮಾಡಿದ್ದಾಳೆ. ಇದರಿಂದ ಗಾಯಗೊಂಡಿರುವ ಜಯಕುಮಾರ್‌ ವಿವಿ ಪುರದ ಖಾಸಗಿ ಆಸ್ಪತ್ರೆಯಲ್ಲಿ
ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೃತ್ಯಕ್ಕೆ ಸಂಬಂಧಿಸಿದಂತೆ ಲಿಡಿಯಾ ಎಪ್ಸಿಬಾ (28) ಯನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಇದಕ್ಕೆ ಸಹಕರಿಸಿದ ಆಕೆಯ ಮಾವನ ಮಗ ಸುನೀಲ್‌ (18) ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮದುವೆಯಾಗುವುದಾಗಿ ಹೇಳಿ ಜಯಕುಮಾರ್‌ ತನ್ನನ್ನು ವಂಚಿಸಿದ್ದಾನೆ ಎಂದು ಆರೋಪಿಸಿ ಲಿಡಿಯಾ 6 ತಿಂಗಳ ಹಿಂದೆ ಶ್ರೀರಾಂಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಪೊಲೀಸರು ಇಬ್ಬರನ್ನೂ ಕರೆಸಿ ಬುದ್ಧಿಮಾತು ಹೇಳಿ ಕಳುಹಿಸಿದ್ದರು. ಇದಾದ ಬಳಿಕ ಮತ್ತೆ ಜಯಕುಮಾರ್‌ ಹಿಂದೆ ಬಿದ್ದಿದ್ದ ಲಿಡಿಯಾ, ಆ್ಯಸಿಡ್‌ ಎರಚಿ ಆತನನ್ನು ಕೊಲೆ ಮಾಡಲು ಯತ್ನಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

 ಏನಿದು ಘಟನೆ?: ಪ್ರಕಾಶ್‌ನಗರದ ಎರಡನೇ ಮುಖ್ಯರಸ್ತೆಯಲ್ಲಿ ತನ್ನ ತಾಯಿ ಜತೆ ನೆಲೆಸಿರುವ ಜಯಕುಮಾರ್‌, ಅದೇ ಪ್ರದೇಶದಲ್ಲಿ ಬಟ್ಟೆ ವ್ಯಾಪಾರ ನಡೆಸುತ್ತಿದ್ದ. 7 ವರ್ಷಗಳ ಹಿಂದೆ ಅದೇ ಪ್ರದೇಶದಲ್ಲಿ ನೆಲೆಸಿರುವ, ಅಲಿ ಅಸYರ್‌ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ ಆಗಿರುವ ಲಿಡಿಯಾ ಪರಿಚಯವಾಗಿತ್ತು. ಅದು ಕ್ರಮೇಣ ಪ್ರೇಮಕ್ಕೆ ತಿರುಗಿತ್ತು. ಯಾವುದೋ ಕಾರಣಕ್ಕೆ ಇಬ್ಬರ ನಡುವೆ 6 ತಿಂಗಳ ಹಿಂದೆ ಜಗಳವಾಗಿದ್ದು, ಇದಾದ ಬಳಿಕ ಲಿಡಿಯಾಳಿಂದ ಜಯಕುಮಾರ್‌ ಅಂತರ ಕಾಯ್ದುಕೊಂಡಿದ್ದ.

Advertisement

ಇದರಿಂದ ಬೇಸರಗೊಂಡ ಆಕೆ, ಜಯಕುಮಾರ್‌ ವಿರುದ್ಧ ವಿವಾಹವಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ಶ್ರೀರಾಂಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಳು.  ಪೊಲೀಸರು ಇಬ್ಬರನ್ನು ಕರೆಸಿ ರಾಜಿ ಸಂಧಾನ ಮಾಡಿ ಕಳುಹಿಸಿದ್ದರು. ಆದರೂ, ಮದುವೆ ಮಾಡಿಕೊಳ್ಳಲು ಜಯಕುಮಾರ್‌ ನಿರಾಕರಿಸಿದ್ದ. ಇದರಿಂದ ಕೋಪಗೊಂಡಿದ್ದ ಲಿಡಿಯಾ ತನ್ನನ್ನು ವಂಚಿಸಿದ ಜಯಕುಮಾರ್‌ನಿಗೆ ತಕ್ಕ ಪಾಠ ಕಲಿಸಲು ತೀರ್ಮಾನಿಸಿದ್ದಳು. ಅದಕ್ಕೆ ಮಾವನ ಮಗ ಸುನೀಲ್‌ನ ನೆರವು ಕೇಳಿದ್ದಳು.

ಆಸ್ಪತ್ರೆ ಆ್ಯಸಿಡ್‌, ಬ್ಲೇಡ್‌: ಅದರಂತೆ ಜಯಕುಮಾರ್‌ನ ಮುಖಕ್ಕೆ ಆ್ಯಸಿಡ್‌ ಹಾಕಲು ನಿರ್ಧರಿಸಿದ್ದು, ಆಸ್ಪತ್ರೆಯಲ್ಲಿ ಬಳಸುವ ಆ್ಯಸಿಡ್‌ ಮತ್ತು ಬ್ಲೇಡ್‌ ತೆಗೆದುಕೊಂಡಿದ್ದಳು. ಸೋಮವಾರ ಜಯಕುಮಾರ್‌ ತನ್ನ ಸ್ನೇಹಿತ ಪದ್ಮನಾಭ ಅವರ ಜತೆ ಕಾರಿನಲ್ಲಿ ರಾಜರಾಜೇಶ್ವರಿ ನಗರ ದೇವಸ್ಥಾನಕ್ಕೆ ಹೋಗಿರುವ ಮಾಹಿತಿ ಪಡೆದ ಲಿಡಿಯಾ ತನ್ನ ಸಂಬಂಧಿ ಸುನೀಲ್‌ ಜತೆ ದ್ವಿಚಕ್ರ ವಾಹನದಲ್ಲಿ ಅತ್ತಿಗುಪ್ಪೆ ಬಳಿ ಅವರಿಗಾಗಿ ಕಾಯುತ್ತಿದ್ದಳು. ಕಾರು ಬರುತ್ತಿದ್ದಂತೆ ಅಲ್ಲಿಂದ ದ್ವಿಚಕ್ರ ವಾಹನದಲ್ಲಿ ಇಬ್ಬರೂ ಅದನ್ನು ಹಿಂಬಾಲಿಸಿದರು. ರಾತ್ರಿ 8.30ರ ಸುಮಾರಿಗೆ ವಿಜಯನಗರದ ಪೈಪ್‌ ಲೈನ್‌ ರಸ್ತೆಯಲ್ಲಿ ಬಲಭಾಗದಿಂದ ಕಾರನ್ನು ಹಿಂದಕ್ಕೆ ಹಾಕಲು ಯತ್ನಿಸಿದ ಲಿಡಿಯಾ ಕಾರು ಓಡಿಸುತ್ತಿದ್ದ ಜಯಕುಮಾರ್‌ ಮೇಲೆ ಆ್ಯಸಿಡ್‌ ಎರಚಿದಳು.

ಇದರಿಂದ ಗಾಯಗೊಂಡು ಕಾರು ನಿಲ್ಲಿಸಿ ಒದ್ದಾಡುತ್ತಿದ್ದ ಜಯಕುಮಾರ್‌ ಮುಖಕ್ಕೆ ಬ್ಲೇಡ್‌ನಿಂದ ಕೊಯ್ದು ವಿರೂಪಗೊಳಿಸಿದ್ದಾಳೆ. ಕೃತ್ಯ ಎಸಗಿದ ಬಳಿಕ ಲಿಡಿಯಾ ದ್ವಿಚಕ್ರ ವಾಹನದಲ್ಲಿ ಸುನೀಲ್‌ ಜತೆ ಪರಾರಿಯಾಗಲು
ಯತ್ನಿಸಿದಳಾದರೂ ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸುನೀಲ್‌ ಪರಾರಿಯಾಗಿದ್ದಾನೆ. ಆರೋಪಿಗಳ ವಿರುದ್ಧ ಆ್ಯಸಿಡ್‌ ದಾಳಿ(326 ಎ), ಕೊಲೆ ಯತ್ನ(307), ಅಕ್ರಮ ಬಂಧನ(341)ದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.

ಮುಖಕ್ಕೆ ಬಟ್ಟೆ, ವಾಹನದ ನಂಬರ್‌ ಪ್ಲೇಟ್‌ಗೆ ಪೇಪರ್‌ ಅಂಟಿಸಿದುÉ:
ಆರೋಪಿ ಲಿಡಿಯಾ ಯಾರಿಗೂ ಗುರುತು ಸಿಗದಂತೆ ಮುಖವನ್ನು ಬಟ್ಟೆಯಿಂದ ಕಟ್ಟಿಕೊಂಡಿದ್ದಳು. ಜಯಕುಮಾರ್‌ ಸ್ನೇಹಿತ ಪದ್ಮನಾಭ ಎಂಬುವರು ಆಕೆ ಪರಾರಿಯಾಗುತ್ತಿದ್ದ ದ್ವಿಚಕ್ರ ವಾಹನ ಬೆನ್ನಟ್ಟಿ ಹಿಡಿದು, ಹೆಲ್ಮೆಟ್‌ ತೆಗೆಸಿದಾಗ ಆಕೆಯ ಗುರುತು ಪತ್ತೆಯಾಗಿದೆ. ಅಲ್ಲದೆ, ಹೊಂಡಾ ಆ್ಯಕ್ಟೀವಾದ ನೋಂದಣಿ ಸಂಖ್ಯೆ ತಿಳಿಯಬಾರದೆಂಬ ಕಾರಣಕ್ಕೆ ನಂಬರ್‌ ಪ್ಲೇಟ್‌ಗೆ ಬಿಳಿ ಪೇಪರ್‌ ಅಂಟಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಲಿಡಿಯಾ ಜತೆಗಿನ ಪ್ರೀತಿಗೆ ಜಯಕುಮಾರ್‌ ಪೋಷಕರ ವಿರೋಧವಿತ್ತು. ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ್ದ ಲಿಡಿಯಾ, ತನ್ನನ್ನು ಮದುವೆಯಾಗಿ ನೀನೂ ಕ್ರೈಸ್ತ ಧರ್ಮಕ್ಕೆ ಮತಾಂತರವಾಗು ಎಂದು ಜಯಕುಮಾರ್‌ನನ್ನು
ಪೀಡಿಸುತ್ತಿದ್ದಳು. ಕಳೆದ ನವೆಂಬರ್‌ನಲ್ಲಿ ಇಬ್ಬರ ವಿವಾಹಕ್ಕೆ ಜಯಕುಮಾರ್‌ ಪೋಷಕರು ಸಮ್ಮತಿ ಸೂಚಿಸಿದ್ದರಾದರೂ, ಮತಾಂತರಕ್ಕೆ ಮಾತ್ರ ಒಪ್ಪಿರಲಿಲ್ಲ. ಇದರಿಂದ ಇವರಿಬ್ಬರ ನಡುವೆ ಮನಸ್ತಾಪ ಏರ್ಪಟ್ಟು ಜಗಳವಾಗಿತ್ತು. ಬಳಿಕ
ಲಿಡಿಯಾ ಕರೆ ಮಾಡಿದರೂ ಜಯಕುಮಾರ್‌ ಸ್ವೀಕರಿಸುತ್ತಿರಲಿಲ್ಲ. ಹೀಗಾಗಿ ಆತನ ವಿರುದ್ಧ ಸೇಡು ತೀರಿಸಿಕೊಳ್ಳಲು ಲಿಡಿಯಾ ತೀರ್ಮಾನಿಸಿದ್ದಳು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next