Advertisement

ಕೈನಿಂದ ಪ್ರಿಯದರ್ಶಿನಿ

01:15 AM Jan 05, 2019 | |

ಬೆಂಗಳೂರು: ದೇಶದಲ್ಲಿ ಯುವ ಮಹಿಳಾ ಮತದಾರರನ್ನು ಸೆಳೆಯಲು ಕಾಂಗ್ರೆಸ್‌ ಪಕ್ಷ ಪ್ರಿಯದರ್ಶಿನಿ ಯೋಜನೆ ಆರಂಭಿಸಿದೆ.

Advertisement

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಪ್ರಿಯದರ್ಶಿನಿ ಯೋಜನೆಯ ರಾಷ್ಟ್ರೀಯ ಸಂಚಾಲಕಿ ರಾಯಬರೇಲಿ ಶಾಸಕಿ ಅದಿತಿ ಸಿಂಗ್‌, 16 ರಿಂದ 35 ವರ್ಷ ವಯೋಮಾನದ ಯುವತಿಯರು, ಮಹಿಳೆಯರು ಸಾಮಾಜಿಕ, ರಾಜಕೀಯ ವ್ಯವಸ್ಥೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಕಾಂಗ್ರೆಸ್‌ ಪಕ್ಷ ವೇದಿಕೆ ಸೃಷ್ಠಿಸಲಿದೆ ಎಂದರು.

ಉದ್ಯೋಗ ಕ್ಷೇತ್ರ, ರಾಜಕೀಯ ವಲಯ, ಕುಟುಂಬದಲ್ಲಿ, ಕಾಲೇಜುಗಳಲ್ಲಿ ಯುವ ಮಹಿಳೆಯರು  ಎದುರಿಸುತ್ತಿರುವ ಸಮಸ್ಯೆಗಳು ಅದಕ್ಕೆ ಅಗತ್ಯವಾದ ಪರಿಹಾರ ಕಂಡುಕೊಳ್ಳಲು ಬೇಕಾದ ಸಲಹೆ ಸೂಚನೆಗಳನ್ನು ನೀಡಲು ಅವಕಾಶ ದೊರೆಯಲಿದೆ. ಅಲ್ಲದೇ ಮಹಿಳೆಯರಿಗೆ ಸ್ವತಂತ್ರ ನಿರ್ಣಯ ಕೈಗೊಳ್ಳುವ ಹಾಗೂ ತಮ್ಮ ಹಕ್ಕಿನ ಬಗ್ಗೆ ಪ್ರಶ್ನೆ ಮಾಡುವ ಕುರಿತು ಕಾಂಗ್ರೆಸ್‌ ಪಕ್ಷದ ವತಿಯಿಂದ ತರಬೇತಿಗಳನ್ನೂ ನೀಡಲಾಗುತ್ತದೆ ಎಂದು ತಿಳಿಸಿದರು.

ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮಹಿಳೆಯರ ಬಗ್ಗೆ ಹೊಂದಿರುವ ಧೋರಣೆ ಕುರಿತು ಮಹಿಳೆಯರಿಗೆ ಜಾಗೃತಿ ಮೂಡಿಸುವುದು, ಮಹಿಳೆಯರು ಯಾವ ರೀತಿಯ ಬಟ್ಟೆ ಹಾಕಬೇಕು. ಯಾವ ರೀತಿಯ ಊಟ ಮಾಡಬೇಕು. ಯಾರ ಜೊತೆಗೆ ಮಾತನಾಡಬೇಕು ಎನ್ನಲು ಇವರ್ಯಾರು ? ಎಂದು ಪ್ರಶ್ನಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಮಾತನಾಡಿ, ಯುಪಿಎ ಸರ್ಕಾರದ ಅವಧಿಯಲ್ಲಿ ಮಹಿಳೆಯರ ರಕ್ಷಣೆಗೆ ಅನೇಕ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಕಚೇರಿಗಳಲ್ಲಿ, ಕಾರ್ಖಾನೆಗಳಲ್ಲಿ ಮಹಿಳೆಯರಿಗೆ ರಕ್ಷಣೆಗೆ ಸಮಿತಿ ರಚನೆ ಮಾಡಬೇಕೆಂದು ಸುಪ್ರೀಂ ಕೋರ್ಟ್‌ ಆದೇಶ ಇದೆ. ಆದರೆ, ಬಹುತೇಕ ಕಡೆಗಳಲ್ಲಿ ಈ ನೀತಿ ಸರಿಯಾಗಿ ಜಾರಿಯಾಗುತ್ತಿಲ್ಲ. ಮಹಿಳೆಯರಿಗೆ ಅವರ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರಿಯದರ್ಶಿನಿ ಕಾರ್ಯಕ್ರಮದ ಮೂಲಕ ಪ್ರಯತ್ನ ನಡೆಸಬೇಕು ಎಂದು ಹೇಳಿದರು.

Advertisement

ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ನವರು ಮಹಿಳೆಯರು ಮನೆಯಲ್ಲಿ ಅಡುಗೆ ಮಾಡಬೇಕು. ಪುರುಷರು ಮಾತ್ರ ಹೊರಗಡೆ ಹೋಗಿ ಕೆಲಸ ಮಾಡಬೇಕು ಎಂಬ ಮನಸ್ಥಿತಿ ಹೊಂದಿದ್ದಾರೆ. ಆದರೆ, ದೇಶದ ಜನಸಂಖ್ಯೆಯ ಶೇ. 50 ರಷ್ಟು ಜನರಿರುವ ಮಹಿಳೆಯರು ಎಲ್ಲ ಹಂತದಲ್ಲಿಯೂ ಸಮಾನ ಅವಕಾಶ ಪಡೆಯಬೇಕೆಂದು ಕಾಂಗ್ರೆಸ್‌ ಬಯಸುತ್ತದೆ. ಗ್ರಾಮ ಪಂಚಾಯತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಶೇಕಡಾ 50 ರಷ್ಟು ಮೀಸಲಾತಿಯನ್ನು ಕಾಂಗ್ರೆಸ್‌ ಪಕ್ಷ ನೀಡಿದ್ದು, ವಿಧಾನಸಭೆ ಹಾಗೂ ಲೋಕಸಭೆಯಲ್ಲಿಯೂ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ಕಲ್ಪಿಸಲು ಹೋರಾಟ ನಡೆಸುತ್ತಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್‌, ರಾಜ್ಯ ಮಹಿಳಾ ಕಾಂಗ್ರೆಸ್‌ ಉಸ್ತುವಾರಿ ಜೆನ್ನತ್‌ ಡಿಸೋಜಾ, ಪ್ರಿಯದರ್ಶಿನಿ ಕಾರ್ಯಕ್ರಮದ ರಾಜ್ಯ ಸಂಚಾಲಕಿ ಭವ್ಯಾ ನರಸಿಂಹಮೂರ್ತಿ, ಕೆಪಿಸಿಸಿ ಉಪಾಧ್ಯಕ್ಷ ಡಾ. ಕೆ.ಇ. ರಾಧಾಕೃಷ್ಣ  ಉಪಸ್ಥಿತರಿದ್ದರು.

ಸೌಮ್ಯರೆಡ್ಡಿಗೆ ಹುದ್ದೆ
ಮಾಜಿ ಸಚಿವ ರಾಮಲಿಂಗಾರೆಡ್ಡಿ ಪುತ್ರ ಶಾಸಕಿ ಸೌಮ್ಯರೆಡ್ಡಿ ಅವರನ್ನು ರಾಷ್ಟ್ರೀಯ ಮಹಿಳಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಇತ್ತೀಚೆಗೆ ಅವರನ್ನು ಸಂಸದೀಯ ಕಾರ್ಯದರ್ಶಿ ಹುದ್ದೆಗೆ ನೇಮಿಸಲು ಪಕ್ಷ ಬಯಸಿತ್ತು. ಆದರೆ, ಅವರು ಆ ಹುದ್ದೆ ವಹಿಸಿಕೊಳ್ಳಲು ನಿರಾಕರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next