“ಈ ಯಶಸ್ಸಿನಿಂದ ಹೊಸ ಜವಾಬ್ದಾರಿ ಬಂದಿದೆ..’ ಹೀಗೆ ನಗುತ್ತಲೇ ಮಾತು ಆರಂಭಿಸಿದರು ಪ್ರಿಯಾ. ಭೀಮಾ ಸಿನಿಮಾದಲ್ಲಿ ನಟ ದುನಿಯಾ ವಿಜಯ್‌ಗೆ ಎಷ್ಟು ಸಿಳ್ಳೆ, ಚಪ್ಪಾಳೆ, ಜೈಕಾರಗಳು ಬಂದಿದ್ದವೋ ಅಷ್ಟೇ ಪ್ರಿಯಾ ನಟನೆಗೂ ಬಂದಿರುವುದು ನಟಿಯೊಬ್ಬಳಿಗೆ ಸಿಕ್ಕ ದೊಡ್ಡ ಪ್ರಶಂಸೆ ಎನ್ನಬಹುದು.
ಯಾವುದೇ ನಟ, ನಟಿಗೆ ಒಮ್ಮೆ ಯಶಸ್ಸು ಸಿಕ್ಕಾಗ ಬಹುಬೇಗ ಜನಪ್ರಿಯರಾಗುತ್ತಾರೆ. ಕೆಲ ಕಾಲ ಎಲ್ಲೆಡೆ ಅವರದ್ದೇ ಮಾತು, ಅವರದ್ದೇ ಹವಾ… ಈ ಯಶಸ್ಸನ್ನೇ ಚೆನ್ನಾಗಿ ನಿಭಾಯಿಸಿದರೇ ಜೀವನ ಸಾಧನೆಯ ಶಿಖರವನ್ನೂ ಕಾಣಬಹುದು. ಸದ್ಯ ಚಂದನವನದಲ್ಲಿ ಹತ್ತಾರು ನಟಿಮಣಿಯರು ಬಂದು ಹೋಗುತ್ತಿದ್ದಾರೆ. ಆದರೆ, ಗಟ್ಟಿಯಾಗಿ ನೆಲೆ ನಿಲ್ಲುತ್ತಿರುವವರು ಅತೀ ಕಡಿಮೆ. ಇದರ ನಡುವೆಯೇ “ನಾನು ಒಬ್ಬಳು ಇದ್ದೇನೆ’ ಎಂದು ನಟನೆ ಮೂಲಕವೇ ನಿರೂಪಿಸಿದವರು ಪ್ರಿಯಾ ಶಟಮರ್ಶನ್.
ಭೀಮಾ ಸಿನಿಮಾದ ಇನ್ಸಪೆಕ್ಟರ್ ಗಿರಿಜಾ ಪಾತ್ರಧಾರಿ ಈಗಲೂ ಚರ್ಚೆಯಲ್ಲಿರುವ ಪ್ರತಿಭೆ. ತಮ್ಮ ಯಶಸ್ಸಿನ ಕುರಿತು ಮಾತನಾಡುವ ಪ್ರಿಯಾ, “ಭೀಮಾ ಚಿತ್ರ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. ವಿಜಯ್ ಅವರ ಜೊತೆ ನಾನು ಬೇರೆ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ, ಅವಕಾಶ ಸಿಕ್ಕಿದ್ದು ಭೀಮಾ ಚಿತ್ರದ ಇನ್ಸಪೆಕ್ಟರ್ ಗಿರಿಜಾ ಪಾತ್ರಕ್ಕೆ. ಮುಂದಿನದೆಲ್ಲ ರೋಚಕ ಅನುಭವ. ಯಶಸ್ಸಿನಿಂದ ಜವಾಬ್ದಾರಿ ಜೊತೆಗೆ ಆತಂಕ, ಒತ್ತಡ ಹೆಚ್ಚಾಗಿದೆ’ ಎನ್ನುತ್ತಾರೆ.
ಎಲ್ಲೆಡೆಯಿಂದ ಮೆಚ್ಚುಗೆ
ಕೆಲವರು ಸಿನಿಮಾದಲ್ಲಿ ಮಾತ್ರ ಮಿಂಚಿ ಕಣ್ಮರೆಯಾಗುತ್ತಾರೆ. ಆದರೆ, ನಟಿ ಪ್ರಿಯಾ ಅವರ ನಟನೆ ಸಿನಿಮಾದಿಂದ ಸೋಶಿ ಯಲ್ ಮಿಡಿಯಾವರೆಗೆ ಸಾಕಷ್ಟು ಹವಾ ಸೃಷ್ಟಿಸಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ ರೀಲ್ಸ್‌ಗಳಲ್ಲಿ ಇವರ ನಟಿಸಿದ ದೃಶ್ಯಗಳೇ ಬಹಳ ವೈರಲ್ ಆಗಿದ್ದವು.
“ಭೀಮ ರಿಲೀಸ್ ಆಗಿ, ಆ ದಿನ ಮಲಗಿ ಬೆಳಗ್ಗೆ ಏಳುವ ಹೊತ್ತಿಗೆ ನನ್ನ ಇನ್‌ಸ್ಟಾಗ್ರಾಂ ಫಾಲೊವರ್ಸ್ ಹೆಚ್ಚಾಗಿದ್ರು. ಇದರಿಂದ ಆಶ್ಚರ್ಯಗೊಂಡೆ. ಈ ರೀತಿ ಮೆಚ್ಚುಗೆಯ ಸುರಿಮಳೆ ಬರುವೆದೆಂದು ಊಹಿಸಿರಲಿಲ್ಲ. ಪರಿಚಯ ಇಲ್ಲದವರೂ ಬಂದು ಆಶೀರ್ವಾದ ಮಾಡ್ತಾರಲ್ಲ ಆಗ ಆನಂದದ ನಿದ್ದೆ ಬರುತ್ತೆ. ನನಗೆ ಅದೊಂದು ಶ್ರೀರಕ್ಷೆ’ ಎಂದರು ಪ್ರಿಯಾ.
ಇದು ಪ್ರಯೋಗ ಶಾಲೆ
ರಂಗಭೂಮಿ ಹಿನ್ನೆಲೆಯ ಪ್ರಿಯಾ ಶಟಮರ್ಶನ್ ಕಿರುತೆರೆಯಲ್ಲೂ ಗುರುತಿಸಿಕೊಂಡವರು. ನಟನೆಯಷ್ಟೇ ಅಲ್ಲದೇ ವಸ್ತ್ರ ವಿನ್ಯಾಸ ಕಾರ್ಯದಲ್ಲೂ ಸಕ್ರಿಯರಾಗಿದ್ದಾರೆ. ಭೀಮ ಯಶಸ್ಸಿನಿಂದ ಹಲವು ಅವಕಾಶಗಳು ಪ್ರಿಯಾ ಅವರನ್ನು ಅರಸಿ ಬರುತ್ತಿವೆ. ಅದರಲ್ಲೂ ಪೋಲೀಸ್ ಪಾತ್ರಗಳಿಗೆ ಪ್ರಿಯಾ ಸದ್ಯ ಬೇಡಿಕೆಯ ನಟಿಯಾಗಿದ್ದಾರೆ. “ಸದ್ಯ ಆರೇಳು ಚಿತ್ರಗಳಿಗೆ ಕರೆ ಬಂದಿವೆ. ಅದರಲ್ಲಿ ಅರ್ಧ ಪೋಲೀಸ್ ಪಾತ್ರಗಳಿಗಾಗಿಯೇ… ಸದ್ಯ ನಾನು ನಟಿಸಿರುವ ಚುರ್ಮುರಿ, ಸೈಡವಿಂಗ್, ಗಾಂಧಿ ಸ್ಕ್ವೇರ್ ಚಿತ್ರಗಳು ಬಿಡುಗಡೆಯಾಗಬೇಕು. ಪೊಲೀಸ್ ಪಾತ್ರದಲ್ಲಿ ಮಿಂಚಿದ ಮಾತ್ರಕ್ಕೆ ಅದೇ ಪಾತ್ರಕ್ಕೆ ಅಂಟಿಕೊಂಡಿರಲು ಬಯಸುವುದಿಲ್ಲ. ಸಿನಿಮಾ ಒಂದು ಪ್ರಯೋಗಾಲಯ. ಇಲ್ಲಿ ಕಲಾವಿದರ ಮೇಲೆ ಪಾತ್ರ ಪ್ರಯೋಗ ನಡೆಯುತ್ತಲೇ ಇರಬೇಕು ಎನ್ನುತ್ತಾರೆ.
ನಿತೀಶ ಡಂಬಳ