ಬೆಂಗಳೂರು: ಗೋವಿಂದರಾಜ ನಗರದಲ್ಲಿ ಗುರುವಾರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಕೃಷ್ಣ ಮತಬೇಟೆ ಮುಂದುವರಿಸಿದರು.
ಬೆಂಬಲಿಗರೊಂದಿಗೆ ಮನೆ-ಮನೆಗೆ ತೆರಳಿ ಮತಯಾಚಿಸಿದ ಅವರು, “ನಿಮ್ಮ ಮನೆಯ ಮಗನಂತೆ ಜತೆಗಿದ್ದು, ಕ್ಷೇತ್ರದ ಕೆಲಸ ಮಾಡುತ್ತೇನೆ. ಇದಕ್ಕೆ ತಾವು ಅವಕಾಶ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.
ಆಯ್ಕೆಯಾದರೆ, ಪಂಚಶೀಲನಗರದ ಖಾತಾ ನೀಡುವಿಕೆ, ಕ್ಷೇತ್ರದ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ಗ್ರಂಥಾಲಯ ನಿರ್ಮಾಣ, ಉತ್ತಮ ಒಳಚರಂಡಿ ವ್ಯವಸ್ಥೆ ಮತ್ತಿತರ ಕಾರ್ಯಕ್ರಮಗಳನ್ನು ನೀಡಲಾಗುವುದು. ಕಾಂಗ್ರೆಸ್ ಗ್ಯಾರಂಟಿಗಳ ಜತೆಗೆ ಈ ಎಲ್ಲ ಸೌಲಭ್ಯಗಳನ್ನು ಒದಗಿಸುವುದು ನನ್ನ ಗ್ಯಾರಂಟಿ.
ಸರ್ಕಾರದ ಅನುದಾನಕ್ಕಾಗಿ ಕಾಯದೆ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುವುದು ಎಂದೂ ಹೇಳಿದರು.
“ತಮ್ಮ ಮತ್ತು ಬಿಜೆಪಿ ಅವಧಿಯಲ್ಲಾದ ಅಭಿವೃದ್ಧಿ ಕಾರ್ಯಗಳನ್ನು ಸ್ವತಃ ಜನ ಹೋಲಿಕೆ ಮಾಡಿ ನೋಡಬೇಕು. ಕ್ಷೇತ್ರಕ್ಕೆ ಯಾರು ಉತ್ತಮ ನಾಯಕ ಎಂಬುದನ್ನು ತೀರ್ಮಾನಿಸಲಿ’ ಎಂದರು.ಇದಕ್ಕೆ ಸ್ಪಂದಿಸಿದ ಸ್ಥಳೀಯ ಮತದಾರರು, “ಕಳೆದ ಚುನಾವಣೆ ಯಲ್ಲಿ ಸೋತರೂ ತಾವು ಮನೆಯ ಮಗನಂತೆಯೇ ಸಮಸ್ಯೆಗಳಿಗೆ ಸ್ಪಂದಿಸಿದ್ದೀರಿ. ಹಾಗಾಗಿ, ಈ ಬಾರಿ ತಮ್ಮ ಪರ ಮತ ಚಲಾಯಿಸುವ ಮೂಲಕ ಋಣ ತೀರಿಸಲಾಗುವುದು’ ಎಂದು ತಿಳಿಸಿದರು.