ಹೊಸದಿಲ್ಲಿ: ಲ್ಯಾಟರಲ್ ಎಂಟ್ರಿ ಮೂಲಕ ಸಾರ್ವಜನಿಕ ಸೇವಕರನ್ನು ನೇಮಿಸಿಕೊಳ್ಳುವ ಮೂಲಕ SC, ST ಮತ್ತು OBC ಗಳ ಮೀಸಲಾತಿಯನ್ನು ಬಹಿರಂಗವಾಗಿ ಕಿತ್ತುಕೊಳ್ಳಲಾಗುತ್ತಿದೆ. ಸರ್ಕಾರದ ಕ್ರಮ ದೇಶವಿರೋಧಿ ಹೆಜ್ಜೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಭಾನುವಾರ (ಆ18) ಆಕ್ರೋಶ ಹೊರ ಹಾಕಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು “ಕೇಂದ್ರ ಲೋಕಸೇವಾ ಆಯೋಗದ ಬದಲಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ(RSS) ಮೂಲಕ ಸಾರ್ವಜನಿಕ ಸೇವಕರನ್ನು ನೇಮಕ ಮಾಡುವ ಮೂಲಕ ಸಂವಿಧಾನದ ಮೇಲೆ ದಾಳಿ ಮಾಡುತ್ತಿದ್ದಾರೆ” ಎಂದು ಕಿಡಿ ಕಾರಿದ್ದಾರೆ.
“ಉನ್ನತ ಅಧಿಕಾರಶಾಹಿ ಸೇರಿದಂತೆ ದೇಶದ ಎಲ್ಲಾ ಉನ್ನತ ಹುದ್ದೆಗಳಲ್ಲಿ ಹಿಂದುಳಿದವರಿಗೆ ಪ್ರಾತಿನಿಧ್ಯವಿಲ್ಲ ಎಂದು ನಾನು ಹೇಳುತ್ತಿದ್ದೆ. ಅದನ್ನು ಸುಧಾರಿಸುವ ಬದಲು ಲ್ಯಾಟರಲ್ ಎಂಟ್ರಿ ಮೂಲಕ ಅವರನ್ನು ಉನ್ನತ ಹುದ್ದೆಗಳಿಂದ ಮತ್ತಷ್ಟು ದೂರ ತಳ್ಳಲಾಗುತ್ತಿದೆ,” ಎಂದು ರಾಹುಲ್ ಎಕ್ಸ್ ಪೋಸ್ಟ್ ಮಾಡಿದ್ದಾರೆ.
”ಯುಪಿಎಸ್‌ಸಿಗೆ ತಯಾರಿ ನಡೆಸುತ್ತಿರುವ ಪ್ರತಿಭಾವಂತ ಯುವಕರ ಹಕ್ಕುಗಳ ದರೋಡೆಯಾಗಿದೆ ಮತ್ತು ಹಿಂದುಳಿದವರಿಗೆ ಮೀಸಲಾತಿ ಸೇರಿದಂತೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಮೇಲಿನ ದಾಳಿಯಾಗಿದೆ” ಎಂದು ಅವರು ರಾಹುಲ್ ಆರೋಪಿಸಿದ್ದಾರೆ.
ವಿವಿಧ ಕೇಂದ್ರ ಸಚಿವಾಲಯಗಳಲ್ಲಿನ ಜಂಟಿ ಕಾರ್ಯದರ್ಶಿಗಳು, ನಿರ್ದೇಶಕರು ಮತ್ತು ಉಪ ಕಾರ್ಯದರ್ಶಿಗಳ ಪ್ರಮುಖ ಹುದ್ದೆಗಳಿಗೆ 45 ತಜ್ಞರು ಶೀಘ್ರದಲ್ಲೇ ಸೇರಿಕೊಳ್ಳಲಿದ್ದಾರೆ ಎನ್ನುವ ಸುದ್ದಿಯ ಬೆನ್ನಲ್ಲೇ ರಾಹುಲ್ ಕಿಡಿ ಕಾರಿದ್ದಾರೆ.
ಹಣಕಾಸು ಖಾತೆ, ಆರೋಗ್ಯ ಸೇರಿದಂತೆ ವಿವಿಧ ಸಚಿವಾಲಯಗಳಲ್ಲಿ ಜಂಟಿ ಕಾರ್ಯದರ್ಶಿ, ಉಪ ಕಾರ್ಯದರ್ಶಿ ಮತ್ತು ನಿರ್ದೇಶಕರ ಸ್ಥಾನಗಳಿಗೆ ಕ್ಷೇತ್ರ ಪರಿಣತರನ್ನು ನೇಮಿಸಲು ಸರಕಾರ ಯೋಜಿಸಿದೆ. ಒಟ್ಟು 45 ಮಂದಿ ಕ್ಷೇತ್ರ ಪರಿಣತರಿಗೆ ಅವಕಾಶ ಒದಗಿಸಲು ಚಿಂತಿಸಲಾಗಿದೆ. ಈ ಪೈಕಿ ಜಂಟಿ ಕಾರ್ಯದರ್ಶಿಯಾಗಿ 10 ಹುದ್ದೆ, ಹಣಕಾಸು, ಕೃಷಿ, ಪರಿಸರ ಸಚಿವಾಲಯ ಸೇರಿ ವಿವಿಧ ಸಚಿವಾಲಯಗಳ ಉಪ ಕಾರ್ಯದರ್ಶಿ ಮತ್ತು ನಿರ್ದೇ ಶಕರ ಸ್ಥಾನಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕೇಂದ್ರೀಯ ಲೋಕಸೇವಾ ಆಯೋಗ ತಿಳಿಸಿದೆ.