Advertisement

“ಸಂಚಾರ ನಾಡಿ’ಬಿಗಿ ಹಿಡಿದ ಖಾಸಗಿ ವಾಹನಗಳು!

12:27 AM Apr 20, 2019 | Team Udayavani |

ನಗರದಲ್ಲಿ ಸಂಚರಿಸುವ ಸರ್ಕಾರಿ ಬಸ್‌ಗಳು ಹೆಚ್ಚು ಹೊಗೆ ಉಗುಳಿದರೆ, ಸಾರಿಗೆ ಅಧಿಕಾರಿಗಳು ಅವುಗಳನ್ನು ಹಿಡಿದು ಸಾವಿರಾರು ರೂ. ದಂಡ ಹಾಕುತ್ತಾರೆ. ಆ ಮೂಲಕ “ದಕ್ಷತೆ’ ಮೆರೆಯುತ್ತಾರೆ. ಆದರೆ, ನಿತ್ಯ ನೂರಾರು ಖಾಸಗಿ ವಾಹನಗಳು ಪರ್ಮಿಟ್‌ ಇಲ್ಲದೆ, ಕಣ್ಮುಂದೇ ಓಡಾಡುತ್ತವೆ. ಎಲ್ಲೆಂದರಲ್ಲಿ ನಿಂತು, ಸಂಚರಿಸಿ, ನಗರದ “ಸಂಚಾರ ನಾಡಿ’ಯನ್ನು ನಿಯಂತ್ರಿಸುತ್ತವೆ.ಆದರೆ, ಅವುಗಳನ್ನು ತಡೆಯಲು ಅಧಿಕಾರಿಗಳು ಹಿಂದೇಟು ಹಾಕುತ್ತಾರೆ.

Advertisement

ಬೆಂಗಳೂರು: ಬೆಂಗಳೂರಿನಿಂದ ದೇವನಹಳ್ಳಿ ಮೂಲಕ ಶಿಡ್ಲಘಟ್ಟ, ಬಾಗೇಪಲ್ಲಿ, ಚಿಕ್ಕಬಳ್ಳಾಪುರಕ್ಕೆ ನಿತ್ಯ ಸುಮಾರು 50 ಖಾಸಗಿ ಬಸ್‌ಗಳು ಸಂಚರಿಸುತ್ತವೆ. ದಿನಕ್ಕೆ ಇವು ಆರು ಬಾರಿ ಬಂದು-ಹೋಗುತ್ತವೆ. ಅಂದರೆ ಹೆಚ್ಚು-ಕಡಿಮೆ 300 ಟ್ರಿಪ್‌ಗ್ಳು. ನಿತ್ಯ ಅಂದಾಜು 6 ಲಕ್ಷ ರೂ. ಗಳಿಸುತ್ತವೆ. ಆದರೆ, ಅದರಲ್ಲಿ ಒಂದೇ ಒಂದು ವಾಹನ ಅಗತ್ಯ ಇರುವ ಪರ್ಮಿಟ್‌ ಹೊಂದಿಲ್ಲ!

ಅಷ್ಟೇ ಏಕೆ, ಬೆಳಗಾದರೆ ಟಿನ್‌ ಫ್ಯಾಕ್ಟರಿ ಸುತ್ತಲಿನ ಉದ್ಯಮಗಳಿಗೆ ಉದ್ಯೋಗಿಗಳನ್ನು ತಂದುಬಿಡುವ ಖಾಸಗಿ ವಾಹನಗಳು, ನಂತರದ ಅವಧಿಯಲ್ಲಿ ಅದೇ ಟಿನ್‌ ಫ್ಯಾಕ್ಟರಿಯಿಂದ ಬನಶಂಕರಿ ನಡುವೆ ಕಾರ್ಯಾಚರಣೆ ಮಾಡುತ್ತವೆ. ಇಂತಹ 25ರಿಂದ 30 ವಾಹನಗಳು ನೂರಾರು ಟ್ರಿಪ್‌ ಪೂರೈಸುತ್ತವೆ. ಅವುಗಳಲ್ಲಿ ಯಾವೊಂದೂ ಪರ್ಮಿಟ್‌ ಪಡೆದಿಲ್ಲ.

-ಇವು ಕೇವಲ ಸ್ಯಾಂಪಲ್‌ಗ‌ಳು. ಹೀಗೆ ಪರ್ಮಿಟ್‌ ಪಡೆದ ಉದ್ದೇಶಕ್ಕೂ ಕಾರ್ಯಾಚರಣೆ ಮಾಡುತ್ತಿರುವುದಕ್ಕೂ ಸಂಬಂಧವೇ ಇಲ್ಲದ ನೂರಾರು ಪ್ರಕರಣಗಳನ್ನು ಕಾಣಬಹುದು. ನಗರದಲ್ಲಿ ಸಂಚರಿಸುವ ಸರ್ಕಾರಿ ಬಸ್‌ಗಳು ಹೆಚ್ಚು ಹೊಗೆ ಉಗುಳಿದರೆ, ಸಾರಿಗೆ ಅಧಿಕಾರಿಗಳು ಅವುಗಳನ್ನು ಹಿಡಿದು ಸಾವಿರಾರು ರೂಪಾಯಿ ದಂಡ ವಸೂಲಿ ಮಾಡುತ್ತಾರೆ.

ಆ ಮೂಲಕ ದಕ್ಷತೆಯನ್ನು ಮೆರೆಯುತ್ತಾರೆ. ಆದರೆ, ನಿತ್ಯ ನೂರಾರು ಖಾಸಗಿ ವಾಹನಗಳು ಪರ್ಮಿಟ್‌ಗಳಿಲ್ಲದೆ, ಕಣ್ಮುಂದೆ ಓಡಾಡುತ್ತಿರುತ್ತವೆ. ಎಲ್ಲೆಂದರಲ್ಲಿ ಸಂಚಾರ ಮತ್ತು ನಿಲುಗಡೆ ಆಗುವ ಈ ವಾಹನಗಳು, ನಗರದ “ಸಂಚಾರ ನಾಡಿ’ಯನ್ನು ನಿಯಂತ್ರಿಸುತ್ತವೆ. ಆದರೆ, ಅವುಗಳನ್ನು ತಡೆಯಲು ಅಧಿಕಾರಿಗಳು ಹಿಂದೇಟು ಹಾಕುತ್ತಾರೆ. ಅಷ್ಟರಮಟ್ಟಿಗೆ ಈ ಖಾಸಗಿ ವಾಹನಗಳು “ಪ್ರಭಾವ’ ಬೀರಿವೆ.

Advertisement

ನಗರವನ್ನು ಪ್ರವೇಶಿಸುವ ಕೆ.ಆರ್‌. ಮಾರುಕಟ್ಟೆ, ಕೆ.ಆರ್‌. ಪುರ, ಹೆಬ್ಟಾಳ ರಸ್ತೆ, ಮೈಸೂರು ರಸ್ತೆ, ತುಮಕೂರು ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಈ ವಾಹನಗಳ ಹಾವಳಿ ವಿಪರೀತವಾಗಿದೆ. ಕಾರು, ದ್ವಿಚಕ್ರ ವಾಹನಗಳಿಗೆ ಹೋಲಿಸಿದರೆ, ಈ ಖಾಸಗಿ ವಾಹನಗಳ ಸಂಖ್ಯೆ ತುಂಬಾ ಕಡಿಮೆ. ಆದರೆ, ಸಂಚಾರದಟ್ಟಣೆಯಲ್ಲಿ ಇವುಗಳ ಪಾತ್ರ ದೊಡ್ಡದು. ಕಲೆಕ್ಷನ್‌ ಇಲ್ಲದಿದ್ದರೆ ಇವು ಕಾಲುಕೀಳುವುದಿಲ್ಲ. ಅಲ್ಲಿಯವರೆಗೆ ಇವುಗಳ ಹಿಂದೆ ಬರುವ ವಾಹನ ಸವಾರರು ಸರದಿಯಲ್ಲಿ ಕಾಯಬೇಕು.

ಸರ್ಕಾರಿ ಬಸ್‌ಗಳೇ ಟಾರ್ಗೆಟ್‌!: ಈ ಖಾಸಗಿ ವಾಹನಗಳಿಗೆ ಬಿಎಂಟಿಸಿ ಸೇರಿದಂತೆ ಸರ್ಕಾರಿ ಬಸ್‌ಗಳೇ ಟಾರ್ಗೆಟ್‌. ಬಸ್‌ಗಳು ಹೋಗುವ ಮಾರ್ಗಗಳಲ್ಲೆಲ್ಲಾ ಈ ವಾಹನಗಳು ಕಾರ್ಯಾಚರಣೆ ಮಾಡುತ್ತವೆ. ಅಂದರೆ ಮುಂದೆ ಮುಂದೆ ಖಾಸಗಿ ವಾಹನಗಳು, ಅವುಗಳ ಹಿಂದೆ ಸರ್ಕಾರಿ ಬಸ್‌ಗಳು!

ಮಾರ್ಗದಲ್ಲಿ ಯಾವುದಾದರೂ ಸರ್ಕಾರಿ ಬಸ್‌ಗಳಿದ್ದರೆ, ಅವುಗಳನ್ನು ಹಿಂದಿಕ್ಕಿ ಮುಂಚಿತವಾಗಿ ಬಂದು ಪ್ರಯಾಣಿಕರನ್ನು ಕೊಂಡೊಯ್ಯುತ್ತವೆ. ಕೈತೋರಿಸಿದಲ್ಲಿ ನಿಲ್ಲುತ್ತವೆ. ಟಿಕೆಟ್‌ ದರ ಒಂದೆರಡು ರೂ. ಕಡಿಮೆ ಕೊಟ್ಟರೂ ಸುಮ್ಮನಿರುತ್ತವೆ. ಹೇಳಿದಲ್ಲಿ ನಿಲ್ಲುತ್ತವೆ. ಬಸ್‌ ಏರುತ್ತಿದ್ದಂತೆ ಬಾಗಿಲು ಹಾಕುವುದಿಲ್ಲ. ಆದರೆ, ಸುರಕ್ಷತೆ ಮತ್ತು ಸಮಯಕ್ಕೆ ಇಲ್ಲಿ ಬೆಲೆ ಇರುವುದಿಲ್ಲ. ವಾಹನ ಭರ್ತಿ ಆಗುವವರೆಗೂ ಒಳಗಿರುವ ಪ್ರಯಾಣಿಕರು ಕಾಯಬೇಕು. ಅವರೊಂದಿಗೆ ರಸ್ತೆಗಳಲ್ಲಿನ ಪ್ರಯಾಣಿಕರೂ ಈ ಕಿರಿಕಿರಿ ಅನುಭವಿಸಬೇಕು.

ಬಿಎಂಟಿಸಿ; ಆರ್ಥಿಕ ಸಂಕಷ್ಟಕ್ಕೆ ಇಲ್ಲಿದೆ ಪರಿಹಾರ: ನಗರದಲ್ಲಿ ಸುಮಾರು 400ಕ್ಕೂ ಅಧಿಕ ಖಾಸಗಿ ವಾಹನಗಳು ಹೀಗೆ ಅನಧಿಕೃತವಾಗಿ ಕಾರ್ಯಾಚರಣೆ ಮಾಡುತ್ತಿವೆ ಎಂದು ಅಂದಾಜಿಸಲಾಗಿದೆ. ಅವುಗಳಲ್ಲಿ ಅರ್ಧದಷ್ಟು ವಾಹನಗಳಿಗೆ ಬ್ರೇಕ್‌ ಬಿದ್ದರೂ ಸಾಕು, ಬಿಎಂಟಿಸಿ ಆರ್ಥಿಕ ಸಂಕಷ್ಟದಿಂದ ಹೊರಬರುತ್ತದೆ ಎನ್ನುತ್ತಾರೆ ಸಂಸ್ಥೆ ಅಧಿಕಾರಿಗಳು.

400 ಖಾಸಗಿ ವಾಹನಗಳು ನಿತ್ಯ ಸುಮಾರು ಎರಡು ಸಾವಿರ ಟ್ರಿಪ್‌ಗ್ಳನ್ನು ಪೂರೈಸುತ್ತವೆ. ಪ್ರತಿ ಟ್ರಿಪ್‌ನಲ್ಲಿ ಕನಿಷ್ಠ 2,500ರಿಂದ 3 ಸಾವಿರ ರೂ. ಕಲೆಕ್ಷನ್‌ ಆಗುತ್ತದೆ. ಅಂದರೆ ಆರಾಮಾಗಿ 50ರಿಂದ 60 ಲಕ್ಷ ರೂ. ಆದಾಯ ಬರುತ್ತದೆ. ಬಿಎಂಟಿಸಿಯು ಪ್ರಸ್ತುತ ನಿತ್ಯ 70 ಲಕ್ಷ ರೂ. ನಷ್ಟದಲ್ಲಿದೆ. ಹಾಗಾಗಿ, ಖಾಸಗಿ ವಾಹನಗಳ ಹಾವಳಿಗೆ ಕಡಿವಾಣ ಬಿದ್ದರೆ, ಅನಾಯಾಸವಾಗಿ ಬಿಎಂಟಿಸಿ ಆರ್ಥಿಕ ಸಂಕಷ್ಟದಿಂದ ಪಾರಾಗಲಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

ಖಾಸಗಿ ವಾಹನಗಳಿಂದ ಶೇ. 8ರಿಂದ 9ರಷ್ಟು ಟ್ರಿಪ್‌ಗ್ಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಬಿಎಂಟಿಸಿಯಲ್ಲಿ 6,956 ಬಸ್‌ಗಳಿವೆ. ಈ ವಾಹನಗಳ ಬಳಕೆ ಪ್ರಮಾಣ ಶೇ. 82.8ರಷ್ಟಿದೆ (2018ರ ನವೆಂಬರ್‌ ಅಂತ್ಯಕ್ಕೆ). ಕಳೆದ ವರ್ಷ ಇದರ ಪ್ರಮಾಣ ಶೇ. 88.6ರಷ್ಟಿತ್ತು. ಶೇ. 6.5ರಷ್ಟು ಇಳಿಕೆ ಆಗಿದೆ ಎಂದು ಕರ್ನಾಟಕ ಆರ್ಥಿಕ ಸಮೀಕ್ಷೆಯಲ್ಲಿ ಸ್ವತಃ ಬಿಎಂಟಿಸಿ ತಿಳಿಸಿದೆ.

ಅಧಿಕಾರಿಗಳು ಶಾಮೀಲು?: ಪ್ರತಿ ವರ್ಷ ಖಾಸಗಿ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಿ, ಸಾರಿಗೆ ಇಲಾಖೆಯು ಲಕ್ಷಾಂತರ ರೂ. ದಂಡ ವಸೂಲು ಮಾಡುತ್ತದೆ. ಆದರೆ, ವ್ಯವಹಾರ ನಡೆಯುವುದು ಕೋಟ್ಯಂತರ ರೂ. ಆಗಿರುತ್ತದೆ. ಪರ್ಮಿಟ್‌ ಇಲ್ಲದೆ ಕಾರ್ಯಾಚರಣೆ ಮಾಡವು ಈ ವಾಹನಗಳ ತಲಾ ಒಂದು ಟ್ರಿಪ್‌ಗೆ ಇಂತಿಷ್ಟು ಅಂತ ಅಧಿಕಾರಿಗಳಿಗೆ ಕಮೀಷನ್‌ ಹೋಗುತ್ತದೆ ಎಂದು ಖಾಸಗಿ ಟ್ರಾವೆಲ್ಸ್‌ನ ಮಾಲಿಕರೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

ಪ್ರಮುಖವಾಗಿ ಬೆಂಗಳೂರಿನಿಂದ ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಬಾಗೇಪಲ್ಲಿ, ಅತ್ತಿಬೆಲೆ, ಚಿಂತಾಮಣಿ, ಕೆಜಿಎಫ್, ಮುಳಬಾಗಿಲು, ಟಿನ್‌ಫ್ಯಾಕ್ಟರಿ-ಬನಶಂಕರಿ ಸೇರಿದಂತೆ ವಿವಿಧೆಡೆ 400ಕ್ಕೂ ಅಧಿಕ ಖಾಸಗಿ ವಾಹನಗಳು ಕಾರ್ಯಾಚರಣೆ ಮಾಡುತ್ತವೆ.

ವಿಧಾನಸೌಧದ ಮುಂದೆಯೇ ಹತ್ತಾರು ಬಸ್‌ಗಳು ಓಡಾಡುತ್ತವೆ. ಅವ್ಯಾವೂ ಮಜಲು ವಾಹನಗಳ ಪರ್ಮಿಟ್‌ ಪಡೆದಿಲ್ಲ. ಒಪ್ಪಂದದ ಪರ್ಮಿಟ್‌ ಪಡೆದಿರುತ್ತವೆ. ನಗರದ ಸಾಫ್ಟ್ವೇರ್‌ ಕಂಪೆನಿಗಳಿಗೆ ಒಪ್ಪಂದದ ಮೇರೆಗೆ ಓಡಾಡುವ ವಾಹನಗಳೂ ಇದರಲ್ಲಿ ಶಾಮೀಲಾಗಿವೆ ಎಂದು ಹೆಸರು ಹೇಳಲಿಚ್ಛಿಸದ ಖಾಸಗಿ ಟ್ರಾವೆಲ್‌ವೊಂದರ ಮಾಲಿಕರು ತಿಳಿಸಿದರು.

ನಾಲ್ಕು ಟರ್ಮಿನಲ್‌ ನಿರ್ಮಾಣ: ಈ ಮಧ್ಯೆ ನಗರದಲ್ಲಿ ಹೆಚ್ಚುತ್ತಿರುವ ವಾಹನದಟ್ಟಣೆಯನ್ನು ತಗ್ಗಿಸಲು ಹೊರವಲಯಗಳಲ್ಲೇ ಖಾಸಗಿ ಬಸ್‌ಗಳಿಗೆ ಬ್ರೇಕ್‌ ಹಾಕಲು ಉದ್ದೇಶಿಸಿರುವ ಸರ್ಕಾರ, ಈ ಸಂಬಂಧ ನಾಲ್ಕು ದಿಕ್ಕುಗಳಲ್ಲಿ ಟರ್ಮಿನಲ್‌ ನಿರ್ಮಾಣಕ್ಕೆ ಮುಂದಾಗಿದೆ.

ತುಮಕೂರು ರಸ್ತೆ, ಮೈಸೂರು ರಸ್ತೆ, ಬಳ್ಳಾರಿ ರಸ್ತೆ ಮತ್ತು ಕೋಲಾರ ರಸ್ತೆಗಳಿಂದ ನಗರಕ್ಕೆ ಆಗಮಿಸುವ ವಿವಿಧ ಪ್ರಕಾರದ ಖಾಸಗಿ ವಾಹನಗಳನ್ನು ಆಯಾ ಪ್ರವೇಶ ದ್ವಾರಗಳಲ್ಲೇ ತಡೆದು ನಿಲ್ಲಿಸಲು ಯೋಜನೆ ರೂಪಿಸಲಾಗುತ್ತಿದೆ. ಇದಕ್ಕಾಗಿ ನಾಲ್ಕೂ ದಿಕ್ಕುಗಳಲ್ಲಿ ತಲಾ ಸುಮಾರು ಎರಡು ಎಕರೆ ಜಾಗದ ಅವಶ್ಯಕತೆ ಇದ್ದು, ಈ ಸಂಬಂಧದ ಸಾಧಕ-ಬಾಧಕ ಹಾಗೂ ಭೂಮಿಯನ್ನು ಗುರುತಿಸಲು ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‌ ಭಾಸ್ಕರ್‌ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ಈ ಸಮಿತಿ ರಚನೆ ಆಗಿದೆ.

ಖಾಸಗಿ ವಾಹನಗಳಿಗೂ ಜಿಪಿಎಸ್‌ ಅಳವಡಿಸಲಿ: ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳ ಮಾದರಿಯಲ್ಲಿ ಈ ಖಾಸಗಿ ವಾಹನಗಳಿಗೂ ಜಿಪಿಎಸ್‌ ಅಳವಡಿಸಬೇಕು ಎಂದು ಸಾರಿಗೆ ತಜ್ಞರು ಅಭಿಪ್ರಾಯಪಡುತ್ತಾರೆ. ಹೀಗೆ ಜಿಪಿಎಸ್‌ ಅಳವಡಿಕೆಯಿಂದ ಬಸ್‌ಗಳು ಯಾವ ಮಾರ್ಗಗಳಲ್ಲಿ ಹಾದುಹೋಗುತ್ತವೆ? ಎಷ್ಟು ಹೊತ್ತು ನಿಲುಗಡೆ ಆಗುತ್ತವೆ? ಪ್ರಯಾಣಿಕರ ಸುರಕ್ಷತೆ ಎಲ್ಲವೂ ತಿಳಿಯಲಿದೆ. ಇದರ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಪಟ್ಟ ಇಲಾಖೆಯಲ್ಲಿ ಒಂದು ಸಣ್ಣ ಘಟಕ ಸ್ಥಾಪಿಸಬೇಕು. ಆಗ, ವಂಚನೆ ತಪ್ಪಲಿದೆ ಎಂದು ಸಾರಿಗೆ ತಜ್ಞರು ಹೇಳುತ್ತಾರೆ.

ಸರ್ಕಾರಿ ಸಂಸ್ಥೆಗಳ ಆದಾಯ ಖೋತಾ!: ಖಾಸಗಿ ವಾಹನಗಳು ಹಳ್ಳಿಗಳ ಸಂರ್ಪಕ ಸಾರಿಗೆಗೆ ಪರ್ಮಿಟ್‌ ಪಡೆದು, ನಗರದಲ್ಲಿ ಕಾರ್ಯಾಚರಣೆ ಮಾಡುವುದರಿಂದ ಬಿಎಂಟಿಸಿಗೆ ಶೇ.70ರಷ್ಟು ನಷ್ಟವಾದರೆ, ಕೆಎಸ್‌ಆರ್‌ಟಿಸಿ ಆದಾಯದಲ್ಲಿ ಶೇ.30ರಷ್ಟು ಖೋತಾ ಆಗಲಿದೆ ಎಂದು ಅಂದಾಜಿಸಲಾಗಿದೆ.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next