Advertisement

ಬಸ್‌ ಆದ್ಯತಾ ಪಥದಲ್ಲಿ ಖಾಸಗಿ ಸಂಚಾರ

10:51 AM Feb 08, 2020 | Suhan S |

ಬೆಂಗಳೂರು: ಆದ್ಯತಾ ಪಥದಲ್ಲಿ ಬಿಎಂಟಿಸಿ ಬಸ್ಸುಗಳ ಸುಗಮ ಸಂಚಾರಕ್ಕೆ ಪೂರಕವಾದ ಬೋಲಾರ್ಡ್‌ ಅಲಭ್ಯತೆ; ಉದ್ದೇಶಿತ ಯೋಜನೆ ವಿಸ್ತರಣೆಗೆ “ತಾತ್ಕಾಲಿಕ ಬ್ರೇಕ್‌’!

Advertisement

ನಗರದಲ್ಲಿ ಸಂಚಾರ ಸಮಸ್ಯೆ ಬಿಗಡಾಯಿಸುತ್ತಿದ್ದು, ವಾಹನಗಳ ಸರಾಸರಿ ವೇಗ ಕುಸಿಯುತ್ತಿದೆ. ಬಿಎಂಟಿಸಿ ಬಸ್‌ಗಳಿಗಾಗಿ ಬಿಬಿಎಂಪಿ ಪ್ರಾಯೋಗಿಕವಾಗಿ ಸಿಲ್ಕ್ ಬೋರ್ಡ್‌ನಿಂದ ಟಿನ್‌ಫ್ಯಾಕ್ಟರಿವರೆಗೆ ಆದ್ಯತಾ ಪಥ ನಿರ್ಮಿಸಿದೆ. ಆದರೆ, ರಸ್ತೆಗೆ ಫೈಬರ್‌ ಬೋಲಾರ್ಡ್‌ ಗಳನ್ನು ಅಳವಡಿಸದ ಕಾರಣ ಆದ್ಯತಾ ಪಥದಲ್ಲಿ ಖಾಸಗಿ ವಾಹನಗಳು ಓಡಾಡುತ್ತಿವೆ. ಜತೆಗೆ ಉದ್ದೇಶಿತ ಯೋಜನೆ ವಿಸ್ತರಣೆಗೂ ಅಡೆತಡೆಯಾಗಿದೆ.

ಪಾಲಿಕೆ 24 ಮೀ. ಅಗಲ ಇರುವ 12 ರಸ್ತೆಗಳಲ್ಲಿ ಆದ್ಯತಾ ಪಥ ನಿರ್ಮಿಸಲು ರೂಪುರೇಷೆ ಸಿದ್ಧಪಡಿಸಿತ್ತು. ಪ್ರಾಯೋಗಿಕವಾಗಿ ಸಿಲ್ಕ್ಬೋರ್ಡ್‌ನಿಂದ ಟಿನ್‌ಫ್ಯಾಕ್ಟರಿವರೆಗೆ ಆದ್ಯತಾ ಪಥ ನಿರ್ಮಿಸಿದ್ದು, ಯಶಸ್ವಿಯಾದರೆ ಉಳಿದ ರಸ್ತೆಗಳಿಗೆ ವಿಸ್ತರಿಸಬೇಕೆಂದು ಚಿಂತನೆ ನಡೆಸಲಾಗಿತ್ತು. ಅದಕ್ಕಾಗಿ ಈ ರಸ್ತೆಯ ಮಾರ್ಗದುದ್ದಕ್ಕೂ ಹಳದಿ ಬಣ್ಣದಲ್ಲಿ ಎರಡು ಸಾಲುಗಳನ್ನು ಎಳೆಯಲಾಗಿದೆ. ಜತೆಗೆ ಬಸ್‌ ನಿಲ್ದಾಣಗಳ ಮುಂಭಾಗ (ಬಸ್‌ ನಿಲ್ಲುವ ಸ್ಥಳ) ಕೆಂಪು ಬಣ್ಣ ಲೇಪನ ಮಾಡಲಾಗಿದೆ. ಆದರೆ, ಬೋಲಾರ್ಡ್‌ ಅಳವಡಿಸದಿರುವುದರಿಂದ ಈ ಮಾರ್ಗ ಇದ್ದು ಇಲ್ಲದಂತಾಗಿದೆ.

ಖಾಸಗಿ ವಾಹನಗಳ ಓಡಾಟ, ನಿಲುಗಡೆ: ಸರ್ಕಾರದ ಯಾವುದೇ ಯೋಜನೆ ಯಶಸ್ವಿಯಾಗಬೇಕಾದರೆ ಸಾರ್ವಜನಿಕರ ಸಹಕಾರ ಬಹಳ ಮುಖ್ಯ. ಆದರೆ, ಬಸ್‌ ಆದ್ಯತಾ ಪಥಕ್ಕೆ ವಾಹನ ಸವಾರರ ಸಹಕಾರ ಇಲ್ಲವಾಗಿದೆ. ಕೆಲ ದ್ವಿಚಕ್ರ ವಾಹನ ಸವಾರರು ಸೇರಿದಂತೆ ಖಾಸಗಿ ವಾಹನಗಳು ಆದ್ಯತಾ ಪಥದಲ್ಲಿಯೇ ಸಂಚರಿಸುತ್ತಿವೆ.

ಕೆಲವೆಡೆ ವಾಹನ ನಿಲುಗಡೆ ಮಾಡಲಾಗುತ್ತಿದೆ. ಕೇವಲ ಹಳದಿ ಪಟ್ಟಿ ಬಳಿದು ಈ ಮಾರ್ಗದಲ್ಲಿ ಬೇರೆ ವಾಹನಗಳಿಗೆ ಪ್ರವೇಶ ನೀಡದಂತೆ ನಿರ್ಬಂಧ ವಿಧಿಸಲಾಗಿದ್ದು, ನಿರ್ವಹಣೆ ಮಾಡುವುದು ಹೇಗೆ ಸಾಧ್ಯ? ಬೋಲಾರ್ಡ್‌ ಅಳವಡಿಸಬೇಕು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

Advertisement

2500ಕ್ಕೂ ಅಧಿಕ ಪ್ರಕರಣ: ಬಿಎಂಟಿಸಿ ಮಾರ್ಷಲ್‌ಗಳ ಸಹಕಾರದೊಂದಿಗೆ ಸಂಚಾರ ಪೊಲೀಸರು ಪ್ರತ್ಯೇಕ ಆದ್ಯತಾ ಪಥದಲ್ಲಿ ಖಾಸಗಿ ವಾಹನ ಚಾಲನೆ ಮಾಡುವವರ ಮೇಲೆ ನಿಗಾ ವಹಿಸುತ್ತಾರೆ. ಜತೆಗೆ ದಂಡವನ್ನೂ ಹಾಕಲಿದ್ದು, ಅಕ್ಟೋಬರ್‌ನಿಂದ ಈವರೆಗೆ ಸುಮಾರು 2500 ಪ್ರಕರಣಗಳನ್ನು ದಾಖಲಿಸಿದ್ದು, ಒಂದು ಪ್ರಕರಣಕ್ಕೆ 500 ರೂ. ನಂತೆ ದಂಡ ಸಂಗ್ರಹಿಸಲಾಗಿದೆ.

ಸರ್ಕಾರಕ್ಕೆ ಪ್ರಸ್ತಾವನೆ :  ಬಸ್‌ ಆದ್ಯತಾ ಪಥದ ಒಳಗೆ ಖಾಸಗಿ ವಾಹನಗಳು ನುಸುಳದಂತೆ ಫೈಬರ್‌ ಬೋಲಾರ್ಡ್‌ ಅಳವಡಿಸಬೇಕಾಗಿದೆ. ಸಿಲ್ಕ್ಬೋರ್ಡ್‌ನಿಂದ ಟಿನ್‌ ಫ್ಯಾಕ್ಟರಿವರೆಗೆ 18 ಕಿ.ಮೀ. ಇದ್ದು, ಮೀಟರ್‌ಗೆ 1ರಂತೆ 40 ಸಾವಿರ ಫೈಬರ್‌ ಬೋಲಾರ್ಡ್‌ಗಳು ಬೇಕಾಗಲಿವೆ. ಅದಕ್ಕಾಗಿ ನಗರೋತ್ಥಾನದಡಿ 15 ಕೋಟಿ ರೂ. ಅನುದಾನ ನೀಡಬೇಕೆಂದು ಪಾಲಿಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅತಿ ಶೀಘ್ರದಲ್ಲಿಯೇ ಅನುದಾನ ಬಿಡುಗಡೆಯಾಗಲಿದ್ದು, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್‌ಡಿಸಿಎಲ್‌) ಮೂಲಕ ಬೋಲಾರ್ಡ್‌ಗಳು ಅಳವಡಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಬಸ್‌ ಆದ್ಯತಾ ಪಥದಲ್ಲಿ ಖಾಸಗಿ ವಾಹನಗಳು ನುಸುಳದಂತೆ ಬೋಲಾರ್ಡ್‌ ಅಳವಡಿಸಬೇಕಿದೆ. ಈ ಬಗ್ಗೆ ನಗರೋತ್ಥಾನದಡಿ 15 ಕೋಟಿ ರೂ. ಅನುದಾನ ಮಂಜೂರು ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಒಂದು ವಾರದಲ್ಲಿ ಬೋಲಾರ್ಡ್‌ ಅಳವಡಿಸುವ ಕಾರ್ಯ ಆರಂಭವಾಗಲಿದೆ.  –ಬಿ.ಎಚ್‌.ಅನಿಲ್‌ಕುಮಾರ್‌, ಬಿಬಿಎಂಪಿ ಆಯುಕ್ತ

 

-ಮಂಜುನಾಥ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next