Advertisement

ಖಾಸಗಿ ಟ್ಯಾಂಕರ್‌ ವಶಕ್ಕೆ ಜಲಮಂಡಳಿ ಚಿಂತನೆ? 

11:57 AM Feb 08, 2017 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರು ಪೂರೈಕೆಗೆ ಖಾಸಗಿ ಟ್ಯಾಂಕರ್‌ಗಳನ್ನು ವಶಕ್ಕೆ ಪಡೆದು ತಮಗೆ ಒಪ್ಪಿಸುವಂತೆ ಜಲಮಂಡಳಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.

Advertisement

ಬೇಸಿಗೆಯಲ್ಲಿ ನೀರಿನ ಅಭಾವ ಹಿನ್ನೆಲೆಯಲ್ಲಿ ಖಾಸಗಿ ಟ್ಯಾಂಕರ್‌ಗಳಿಗೆ ಬೇಡಿಕೆ ಹೆಚ್ಚಾಗಿ ಸಾಮಾನ್ಯ ಜನರಿಂದ ಸುಲಿಗೆ ನಡೆಯುವ ಸಾಧ್ಯತೆ ಇರುತ್ತದೆ. ಜತೆಗೆ ನೀರಿನ ಅಸಮರ್ಪಕ ನಿರ್ವಹಣೆಯೂ ಆಗುತ್ತದೆ ಎಂಬ ಕಾರಣಕ್ಕೆ  ಈ ಕ್ರಮಕ್ಕೆ ಜಲಮಂಡಳಿ ಮುಂದಾಗಿದೆ.

ಕಾವೇರಿ ನೀರು ಪೂರೈಕೆಯಲ್ಲಿ ತೀವ್ರ ಸಮಸ್ಯೆ ಉಂಟಾಗುವ ಕಡೆ ಟ್ಯಾಂಕರ್‌ಗಳ ಮೂಲಕ ಜಲಮಂಡಳಿಯೇ ನೀರು ಪೂರೈಕೆ ಮಾಡಲು ತೀರ್ಮಾನಿಸಿದೆ. ಆದರೆ, ಅದಕ್ಕೆ ತಕ್ಕಂತೆ ಟ್ಯಾಂಕರ್‌ಗಳು ಮಂಡಳಿ ಬಳಿ ಇಲ್ಲ. ಹೀಗಾಗಿ, ನೀರು ಪೂರೈಸಲು ಅಗತ್ಯಬಿದ್ದರೆ ನಗರದಲ್ಲಿರುವ ಖಾಸಗಿ ಟ್ಯಾಂಕರ್‌ಗಳನ್ನು ವಶಕ್ಕೆ ಪಡೆಯುವುದು ಮಂಡಳಿಯ ಉದ್ದೇಶ ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ನಗರದಲ್ಲಿ ಖಾಸಗಿ ಟ್ಯಾಂಕರ್‌ಗಳು ಎಷ್ಟಿವೆ? ಅವುಗಳ ದರ ಮತ್ತು ನೀರಿನ ಪೂರೈಕೆ ಪ್ರಮಾಣ ಎಷ್ಟಿದೆ ಎಂಬುದು ಸೇರಿದಂತೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಜಲಮಂಡಳಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ನಗರದಾದ್ಯಂತ ಸುಮಾರು 4.08 ಲಕ್ಷ ಕೊಳವೆಬಾವಿಗಳಿವೆ. ಅವುಗಳನ್ನು ಬೇಸಿಗೆಯಲ್ಲಿ ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳುವಂತೆ ಮನವಿ ಮಾಡಲಾಗುವುದು. ವೇಳೆ ಈ ಕೊಳವೆಬಾವಿಗಳ ನೀರು ಬಳಸಿದರೆ, ದಿನಕ್ಕೆ 300 ದಶಲಕ್ಷ ಲೀ. ನೀರಿನ ಹೊರೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ನಿತ್ಯ ನಗರಕ್ಕೆ 1,400 ದಶಲಕ್ಷ ಲೀ. ನೀರು ಪೂರೈಕೆಯಾಗುತ್ತಿದೆ ಎಂದು ಕೆಂಪರಾಮಯ್ಯ ತಿಳಿಸಿದರು. 

Advertisement

ಉತ್ತರ, ದಕ್ಷಿಣ, ಪೂರ್ವ ಬೆಂಗಳೂರು ಮತ್ತು ಆನೇಕಲ್‌ ತಾಲ್ಲೂಕು ಬರ ಎಂದು ಘೋಷಿಸಲ್ಪಟ್ಟಿವೆ. ಹೀಗೆ ಬರ ಘೋಷಣೆಯಾದ ಪ್ರದೇಶಗಳಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ (ಕೆಟಿಟಿಪಿ) ಕಾಯ್ದೆಗೆ ವಿನಾಯ್ತಿ ಇರುತ್ತದೆ. ಇಲ್ಲಿ ಯಾವುದೇ ಬರ ನಿರ್ವಹಣೆ ಕಾರ್ಯಗಳನ್ನು ನೇರವಾಗಿ ಕೈಗೆತ್ತಿಕೊಳ್ಳಬಹುದು. ಇದು ಟ್ಯಾಂಕರ್‌ಗಳ ಬಳಸಿಕೊಳ್ಳುವಲ್ಲಿ ಮತ್ತು ಕೊಳವೆಬಾವಿ ಕೊರೆಯುವ ಪ್ರಕ್ರಿಯೆಯಲ್ಲೂ ಅನ್ವಯ ಆಗುತ್ತದೆ ಎಂದು ನಗರ ಜಿಲ್ಲಾಡಳಿತದ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ಮುಟ್ಟುಗೋಲಿಗೆ ಅವಕಾಶ ಇದೆಯೇ? 
ಸಂಕಷ್ಟ ಸಮಯದಲ್ಲಿ ನಗರದಲ್ಲಿ ನೀರು ಪೂರೈಕೆಗೆ ಖಾಸಗಿ ಟ್ಯಾಂಕರ್‌ಗಳ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಇದೆ. ಈ ಅಧಿಕಾರ ಇರುವುದು ಜಿಲ್ಲಾಧಿಕಾರಿಗಳಿಗೆ ಮಾತ್ರ. ಹಾಗಾಗಿ, ನಗರ ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗಿದೆ ಎಂದು ಜಲಮಂಡಳಿಯ ಎಂಜಿನಿಯರಿಂಗ್‌ ಮುಖ್ಯಸ್ಥ ಕೆಂಪರಾಮಯ್ಯ “ಉದಯವಾಣಿ’ಗೆ ತಿಳಿಸಿದ್ದಾರೆ.  

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next