ಬೆಂಗಳೂರು: ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಗೊಳಿಸುವ ಸಂಬಂಧ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಪಾತ್ರ ಮಹತ್ವದ್ದಾಗಿದೆ. ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಶಾಲಾ ಶಿಕ್ಷಣದಲ್ಲಿ ಅಳವಡಿಸಿಕೊಳ್ಳಬಹುದಾದ ಸಲಹೆ-ಸೂಚನೆಗಳನ್ನು ನೀಡುವಂತೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ ಶಿಕ್ಷಕ ಮತ್ತು ಶಿಕ್ಷೇತರ ಸಿಬಂದಿ ಸಂಯೋಜನ ಸಮಿತಿಯು (ಕೆಪಿಎಂಟಿಸಿಸಿ) ಶನಿವಾರ ನಗರದಲ್ಲಿ ಆಯೋಜಿಸಿದ್ದ “ಎನ್‌ಇಪಿ-2020 ಮತ್ತು ಶಾಲಾ ಶಿಕ್ಷಣದ ನಿಯಂತ್ರಕ ವಾಸ್ತುಶಿಲ್ಪ’ ಎಂಬ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಖಾಸಗಿ ಶಾಲೆಗಳಲ್ಲಿ ಎನ್‌ಇಪಿ ಜಾರಿಗೊಳಿಸುವುದು ಕಷ್ಟದ ಕೆಲಸ ಎನ್ನಲಾಗುತ್ತಿದೆ. ಕೆಲವು ರಾಜ್ಯಗಳಲ್ಲಿ ಎನ್‌ಇಪಿ ಜಾರಿಗೊಳಿಸುವುದಿಲ್ಲ ಎಂದು ತಿರಸ್ಕರಿಸಲಾಗಿದೆ. ಹೀಗಾಗಿ, ಎನ್‌ಇಪಿಯನ್ನು ಹೇಗೆ ಜಾರಿಗೊಳಿಸಬೇಕು? ಇದರಿಂದಾಗುವ ಪರಿಣಾಮಗಳೇನು, ಪರಿಹಾರಗಳೇನು ಎಂಬುದರ ಕುರಿತು ಸಲಹೆ-ಸೂಚನೆ ನೀಡುವಂತೆ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮಾತನಾಡಿ, ರಾಜ್ಯ ಸರಕಾರವು ಖಾಸಗಿ ಶಾಲೆಗಳಿಗೆ ಯಾವುದೇ ಅನುದಾನ ನೀಡದಿದ್ದರೂ ಅಗ್ನಿ ಸುರಕ್ಷೆ, ಕಟ್ಟಡ ಸುರಕ್ಷೆ ಸಹಿತ ಹಲವು ವಿಷಯಗಳಲ್ಲಿ ತೊಂದರೆ ನೀಡುತ್ತಿದೆ. ಈ ವಿಚಾರದಲ್ಲಿ ರಾಜ್ಯ ಸರಕಾರವು ಐಸಿಎಸ್‌ಇ ಮತ್ತು ಸಿಬಿಎಸ್‌ಇ ಮಂಡಳಿಗಳನ್ನು ಅನುಸರಿಸಬೇಕಿದೆ ಎಂದು ಹೇಳಿದರು.
ಎನ್‌ಇಪಿ ಕಾರ್ಯಪಡೆ ಅಧ್ಯಕ್ಷ ಮದನ್ ಗೋಪಾಲ್ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯು ಚಟುವಟಿಕೆ ಆಧಾರಿತ ಕಲಿಕೆಯಾಗಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಎನ್‌ಇಪಿ-2020 ಸಮಾವೇಶದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯು ಹೊಸ ನೀತಿಯಲ್ಲ. ಶಿಕ್ಷಣದಲ್ಲಿ ಇಲ್ಲದನ್ನು ಹೊಸದಾಗಿ ಅಳವಡಿಸಿಕೊಳ್ಳಲಾಗುತ್ತಿದೆ. 2022-23ನೇ ಶೈಕ್ಷಣಿಕ ವರ್ಷದಲ್ಲಿ 3ನೇ ವರ್ಷದ ಮಗು ಕಲಿಯಬೇಕಾದ ಶಿಕ್ಷಣವನ್ನು ಜಾರಿ ಮಾಡಲಾಗುತ್ತಿದೆ ಎಂದರು.
ಸಮಾವೇಶದಲ್ಲಿ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ, ವಿಧಾನ ಪರಿಷತ್ ಸದಸ್ಯ ಕೆಪಿಎಂಟಿಸಿಸಿ ಸಮಿತಿ ಸಂಚಾಲಕ ಡಿ. ಶಶಿಕುಮಾರ್, ಸದಸ್ಯರಾದ ಎಂ.ಶ್ರೀನಿವಾಸ್, ಡಾ| ಅಮಿತ್ ಹಾಗೂ ವಿವಿಧ ರಾಜ್ಯಗಳ ಖಾಸಗಿ ಶಾಲೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.