ಅರಸೀಕೆರೆ: ನಗರದಲ್ಲಿ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಕನ್ನಿಕಾ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಏಕಾಎಕಿ ಶಾಲೆಯನ್ನು ಮುಚ್ಚಲು ಮುಂದಾಗಿರುವುದರಿಂದ ಈ ಶಾಲೆಗೆ ಆರ್‌ಟಿಇ (ಶಿಕ್ಷಣ ಹಕ್ಕು ಕಾಯ್ದೆ )ಯೋಜನೆಯಡಿ ಸೇರ್ಪಡೆಯಾಗಿದ್ದ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಭವಿಷ್ಯದಲ್ಲಿ ತೊಂದರೆ ಉಂಟಾಗುತ್ತಿದೆ ಎಂದು ಆರೋಪಿಸಿ ಕ್ಷೇತ್ರ ಶಿಕ್ಷಾಣಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಬಿಇಒ ಮೋಹನ್ ಕುಮಾರ್ ಅವರಿಗೆ ಮನವಿಪತ್ರ ಸಲ್ಲಿಸಿದರು.
ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಗುಂಪು ಸೇರಿದಂತೆ ಪೋಷಕರು ನಗರದಲ್ಲಿರುವ ಕನ್ನಿಕಾ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಮುಂದಿನ ಶೈಕ್ಷಣಿಕ ವರ್ಷದಿಂದ ಕನ್ನಿಕಾ ಶಾಲೆಯನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಕ್ಷೇತ್ರ ಶಿಕ್ಷಾಧಿಕಾರಿಗಳ ಕಚೇರಿಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ತಾವುಗಳು ನಮ್ಮ ಮಕ್ಕಳ ಮುಂದಿನ ವಿದ್ಯಾಭ್ಯಾಸದ ಬಗ್ಗೆ ತುಂಬಾ ಆತಂಕ ವ್ಯಕ್ತವಾಗುತ್ತಿದೆ ಎಂದು ಹಲವಾರು ಪೋಷಕರು ಕ್ಷೇತ್ರಶಿಕ್ಷಣಾಧಿಕಾರಿಗಳ ಮುಂದೆ ಅಳು ತೋಡಿಕೊಂಡರು.
ಬಡ ಮಕ್ಕಳಿಗೆ ತೊಂದರೆ: ನಾವುಗಳು ಬಡಕುಟುಂಬದವರಾಗಿದ್ದು, ಸರ್ಕಾರದ ಆರ್‌ಟಿಇ ಯೋಜನೆಯಡಿ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ದೊರಕುತ್ತಿದೆ ಎಂಬ ನಂಬಿಕೆಯಿಟ್ಟು ಶಾಲೆಗೆ ಸೇರಿಸಿದ್ದು ಈ ಶಾಲೆಯಲ್ಲಿ ಸುಮಾರು 131 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಅವರಲ್ಲಿ 68 ಮಂದಿ ವಿದ್ಯಾರ್ಥಿಗಳು ಸರ್ಕಾರದ ಆರ್‌ಟಿಇ ಯೋಜನೆಯಡಿ ದಾಖಲಾದ ವಿದ್ಯಾರ್ಥಿಗಳು ಆಗಿದ್ದಾರೆ.
ಆದರೆ ಈಗ ಏಕಾಎಕಿ ಶಾಲೆಯ ಆಡಳಿತ ಮಂಡಳಿ ಇಲ್ಲಸಲ್ಲದ ನೆಪ ಮಾಡಿಕೊಂಡು ಶಾಲೆಯನ್ನು ಮುಚ್ಚುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳು ಇಂತಹ ಸೌಲಭ್ಯದಿಂದ ಸಂಪೂರ್ಣವಾಗಿ ವಂಚಿತರಾಗುತ್ತಿದ್ದು,ಅವರುಗಳ ಭವಿಷ್ಯದ ಬಗ್ಗೆ ಸರ್ಕಾರದ ಅಧಿಕಾರಿಗಳು ಹಾಗೂ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಚಿಂತನೆ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಕ್ಕಳ ಪೋಷಕರಾದ ವಿರೂಪಾಕ್ಷಪ್ಪ, ಎಸ್.ಕೆ.ರವಿ, ಅಮ್ಜದ್, ಪ್ರಕಾಶ್,ಅಶೋಕ್, ಮಮತಾ, ಗೌಸೀಯಾ, ಸಹೀನಾ, ಉಷಾ ಹಾಗೂ ಇನ್ನಿತರರು ಇದ್ದರು
ನಂತರ ಪ್ರತಿಭಟನಕಾರರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ್ ಕುಮಾರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಬಿಇಒ ಸ್ಪಷ್ಟನೆ: ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಬಿಇಒ ಮೋಹನ್, ಶಾಲೆಗೆ ವಿದ್ಯಾರ್ಥಿಗಳ ದಾಖಲಾತಿ ಇಳಿಮುಖವಾಗುತ್ತಿರುವ ಕಾರಣ ಶಾಲೆ ನಡೆಸಲು ಆಗುತ್ತಿಲ್ಲ ಎಂದು ಶಾಲೆ ಆಡಳಿತ ಮಂಡಳಿ ಪತ್ರ ಬರೆದಿದೆ.
ಈ ಬಗ್ಗೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆಯನ್ನು ಕರೆದು ಮಕ್ಕಳಿಗೆ ತೊಂದರೆ ಉಂಟಾಗುತ್ತಿರುವ ವಿಷಯವನ್ನು ಗಮನಕ್ಕೆ ತರುತ್ತೇನೆ. ಆದರೂ ಶಾಲೆ ಮುಚ್ಚುವ ತೀರ್ಮಾನವೇ ಅಂತಿಮವಾದರೆ ವಿದ್ಯಾರ್ಥಿಗಳನ್ನು ಬೇರೆ ಬೇರೆ ಶಾಲೆಗಳಿಗೆ ಸೇರಿಸಲು ಕ್ರಮಕೈಗೊಳ್ಳಲಾಗುವುದು ಎಂದರು.