ಬೆಂಗಳೂರು: ನುರಿತ ಶಿಕ್ಷಕರ ಕೊರತೆ, ಕೋವಿಡ್ ಆರ್ಥಿಕ ಸಮಸ್ಯೆಯಿಂದ ಚೇತರಿಸಿಕೊಂಡಿರುವ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲು ಮಾಡುತ್ತಿರುವುದು ಸೇರಿದಂತೆ ಹಲವು ಕಾರಣಗಳಿಂದಾಗಿ ಬಿಬಿಎಂಪಿ ವ್ಯಾಪ್ತಿಯ ಶಾಲೆಗಳಲ್ಲಿ ಮಕ್ಕಳ ಹೊಸ ಪ್ರವೇಶಾತಿ ಸಂಖ್ಯೆಯಲ್ಲೀಗ ಇಳಿಕೆಯಾಗಿದೆ.
ಕೋವಿಡ್ ಅವಧಿಯಲ್ಲಿ ಬಿಬಿಎಂಪಿ ಶಾಲೆಗಳಿಗೆ ಅಧಿಕ ಸಂಖ್ಯೆಯಲ್ಲಿ ಮಕ್ಕಳು ದಾಖಲಾಗಿದ್ದರು. ಆದರೆ ಆ ಸಂಖ್ಯೆ ವರ್ಷ ಕಳೆದಂತೆ ಕ್ಷೀಣಿಸುತ್ತಾ ಸಾಗಿದೆ. 2017-18 ಮತ್ತು 2018-2019ನೇ ಶೈಕ್ಷಣಿಕ ವರ್ಷದಲ್ಲಿ ಪಾಲಿಕೆ ವ್ಯಾಪ್ತಿಯ ಶಾಲೆಗಳಲ್ಲಿ ಸುಮಾರು 18 ಸಾವಿರ ಮಕ್ಕಳು ದಾಖಲಾಗಿದ್ದರು. 2019-20ರಲ್ಲಿ ಈ ಸಂಖ್ಯೆಯಲ್ಲಿ ಮತ್ತಷ್ಟು ದ್ವಿಗುಣಿಸಿತ್ತು. ಸುಮಾರು 20 ಸಾವಿರ ಮಕ್ಕಳು ಬಿಬಿಎಂಪಿ ಶಾಲೆಗಳಿಗೆ ದಾಖಲಾಗಿದ್ದರು. ಕೋವಿಡ್ ತಂದಿಟ್ಟ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮಕ್ಕಳನ್ನು ಪಾಲಿಕೆ ಶಾಲೆಗೆ ಸೇರಿಸಿದ್ದರು. ಹೀಗಾಗಿ 2022 -23ರ ಅವಧಿಯಲ್ಲಿ ಈ ಸಂಖ್ಯೆ 26 ಸಾವಿರಕ್ಕೆ ಏರಿಕೆ ಕಂಡು ಬಂದಿತ್ತು ಎಂದು ಪಾಲಿಕೆ ಮೂಲಗಳು ತಿಳಿಸಿವೆ.
25 ವರ್ಷಗಳಿಂದ ನಡೆದಿಲ್ಲ ನೇಮಕಾತಿ: ಸುಮಾರು 25 ವರ್ಷಗಳಿಂದ ಬಿಬಿಎಂಪಿ ಶಾಲೆಗಳಿಗೆ ಕಾಯಂ ಶಿಕ್ಷಕರ ನೇಮಕಾತಿ ನಡೆದಿಲ್ಲ. ಹೀಗಾಗಿ ಹಲವು ಶಿಕ್ಷಕರು ಈಗ ನಿವೃತ್ತಿಯ ಅಂಚಿನಲ್ಲಿದ್ದಾರೆ. ಈ ಸಂಬಂಧ ಪಾಲಿಕೆ ಕೂಡ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಈಗ ಸುಮಾರು 800 ಶಿಕ್ಷಕರಿದ್ದು, ಅದರಲ್ಲಿ 640 ಶಿಕ್ಷಕರು ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವ ಕೆಲವು ಶಿಕ್ಷಕರು ನುರಿತವರಲ್ಲ. ಆ ಹಿನ್ನೆಲೆಯಲ್ಲಿ ಇವರನ್ನು ಬದಲಾಯಿಸುವಂತೆ ಗುತ್ತಿಗೆ ಏಜೆನ್ಸಿಗೆ ಪಾಲಿಕೆ ಸೂಚನೆ ನೀಡಿದೆ.ಜತೆಗೆ ಕೆಲವು ಶಿಕ್ಷಕರು ಹುದ್ದೆಗೆ ಸೂಕ್ತವಾಗಿಲ್ಲ ಎಂಬುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಹೊಸದಾಗಿ ಶಿಕ್ಷಕರ ನೇಮಕಾತಿ ಪಾಲಿಕೆ ಟೆಂಡರ್ ಕರೆದಿದೆ. ಆದರೆ ಹೊಸ ಟೆಂಡರ್‌ಗೆ ಉತ್ತಮ ಪ್ರತಿಕ್ರಿಯೆ ಬಾರದ ಹಿನ್ನೆಲೆ ಹೊಸ ಶಿಕ್ಷಕರ ನೇಮಕಾತಿ ವರೆಗೂ ಈಗಿರುವ ಶಿಕ್ಷಕರೆ ಮುಂದುವರಿಯಲಿದ್ದಾರೆ ಎಂದು ಪಾಲಿಕೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪಾಲಿಕೆ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿತ : ದಿಢೀರ್ ಎಂದು ಅಪ್ಪಳಿಸಿದ ಕೋವಿಡ್ ಹಲವು ರೀತಿಯ ಅನಾಹುತಗಳಿಗೆ ಕಾರಣವಾಗಿತ್ತು. ಜತೆಗೆ ಆರ್ಥಿಕ ಸಂಕಷ್ಟಕ್ಕೂ ಗುರಿ ಮಾಡಿತ್ತು. ಕೆಲವು ಖಾಸಗಿ ಶಾಲೆಗಳು ಆನ್‌ಲೈನ್ ತರಗತಿಗಳನ್ನು ಆರಂಭಿಸಿ ಪ್ರವೇಶ ಶುಲ್ಕವನ್ನು ಕೂಡ ಏರಿಕೆ ಮಾಡಿದ್ದವು. ಆ ಹಿನ್ನೆಲೆಯಲ್ಲಿ ಪ್ರವೇಶ ಶುಲ್ಕ ನೀಡಲಾಗದಂತ ಪರಿಸ್ಥಿತಿಯಲ್ಲಿದ್ದ ಹಲವು ಪೋಷಕರು ಬಿಬಿಎಂಪಿ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸಿದ್ದರು. ಈ ಕಾರಣದಿಂದಾಗಿ ಬಿಬಿಎಂಪಿ ವ್ಯಾಪ್ತಿಯ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ದಿಢೀರ್ ಎಂದು ಹೆಚ್ಚಳ ಕಂಡು ಬಂದಿತ್ತು. ಆದರೆ ಕೋವಿಡ್ ಬಳಿಕ ಪೋಷಕರು ಕೂಡ ಆರ್ಥಿಕ ವಿಚಾರದಲ್ಲಿ ಸುಧಾರಿಸಿಕೊಂಡಿದ್ದಾರೆ. ಆರ್ಥಿಕ ಸಮಸ್ಯೆಯಿಂದ ಹೊರಬಂದಿರುವ ಅವರು ಇದೀಗ ಅಧಿಕ ಶುಲ್ಕ ನೀಡಿ ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಹೀಗಾಗಿ ಪಾಲಿಕೆ ಶಾಲೆಗಳಲ್ಲಿ ಇದೀಗ ಮಕ್ಕಳ ಸಂಖ್ಯೆಯಲ್ಲಿ ಕುಸಿತಕ್ಕೆ ಇದು ಒಂದು ಕಾರಣವಾಗಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ಪಡುತ್ತಾರೆ.
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಇಳಿಕೆ: ಬಿಬಿಎಂಪಿ ವ್ಯಾಪ್ತಿಯಲ್ಲಿ 33 ಪ್ರೌಢಶಾಲೆಗಳಿದ್ದು 2022-23ನೇ ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಶೇ.67.53ರಷ್ಟು ಫಲಿತಾಂಶ ಬಂದಿತ್ತು. 33 ಪ್ರೌಢಶಾಲೆಗಳಿಂದ 2,270 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 1,533 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಇದರಲ್ಲಿ 73 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. 2021-22ನೇ ಸಾಲಿನಲ್ಲಿ 71.37 ಫಲಿತಾಂಶ ಬಂದಿತ್ತು. ಕಳೆದ ಬಾರಿಯ ಫಲಿತಾಂಶಕ್ಕೆ ಹೋಲಿಕೆ ಮಾಡಿ ನೋಡಿದಾಗ ಈ ವರ್ಷ 3.84ರಷ್ಟು ಇಳಿಕೆಯಾಗಿದೆ.
ಬಿಬಿಎಂಪಿ ಶಾಲೆಗಳ ಸುಧಾರಣೆಗೆ ಯೋಜನೆ ರೂಪಿಸ ಲಾಗಿದೆ. ಈಗಾಗಲೇ 22 ಸಾವಿರಕ್ಕೂ ಅಧಿಕ ಮಕ್ಕಳು ದಾಖಲಾಗಿದ್ದಾರೆ. ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ ಇದೀಗ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆಯಲ್ಲಿ ಮತ್ತಷ್ಟು ದ್ವಿಗುಣ ಗೊಳ್ಳುವ ನಿರೀಕ್ಷೆಯಿದೆ.
●ವೆಂಕಟರಾಜು, ಉಪ ಆಯುಕ್ತ, ಪಾಲಿಕೆ ಶಿಕ್ಷಣ ವಿಭಾಗ
-ದೇವೇಶ ಸೂರಗುಪ್ಪ