ಬೆಂಗಳೂರು: ಸರ್ಕಾರ ಮತ್ತು ಖಾಸಗಿ ವೈದ್ಯರ ನಡುವಿನ ಸಂಧಾನ ಸಫಲವಾದ ಹಿನ್ನೆಲೆಯಲ್ಲಿ ಕಳೆದ ಐದು ದಿನದಿಂದ ಪ್ರತಿಭಟನೆ ನಡೆಸುತ್ತಿದ್ದ ಖಾಸಗಿ ವೈದ್ಯರು ಶನಿವಾರ ರೋಗಿಗಳಿಗೆ ಪೂರ್ಣಪ್ರಮಾಣದ ಆರೋಗ್ಯ ಸೇವೆ ಒದಗಿಸಿದ್ದಾರೆ.
ಕರ್ನಾಟಕ ಖಾಸಗಿ ಆಸ್ಪತ್ರೆ ನಿಯಂತ್ರಣ (ತಿದ್ದುಪಡಿ)ವಿಧೇಯಕ ಮಂಡನೆಗೂ ಪೂರ್ವದಲ್ಲಿ ಆಕ್ಷೇಪಾರ್ಹ ಅಂಶಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿ ಭಾರತೀಯ ವೈದ್ಯ ಸಂಘದ ರಾಜ್ಯ ಶಾಖೆಯಿಂದ ನ.13ರಿಂದಲೇ ಬೆಳಗಾವಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಶುಕ್ರವಾರ ಖಾಸಗಿ ವೈದ್ಯರೊಂದಿಗೆ ನಡೆಸಿದ ಚರ್ಚೆ ಯಶಸ್ವಿಯಾಗಿದ್ದರಿಂದ ಖಾಸಗಿ ಆಸ್ಪತ್ರೆಯಲ್ಲಿ ಒಪಿಡಿ ಸೇವೆ ಹಾಗೂ ಕ್ಲಿನಿಕ್, ನರ್ಸಿಂಗ್ ಹೋಮ್ ಗಳಲ್ಲಿ ಮತ್ತೆ ಸೇವೆ ಆರಂಭಿಸಲಾಗಿದೆ.
ಸೇವೆ ಹಾಜರು: ಖಾಸಗಿ ವೈದ್ಯರ ಬಹುತೇಕ ಬೇಡಿಕೆ ಈಡೇರಿದ್ದರಿಂದ ಶನಿವಾರ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಖಾಸಗಿ ಆಸ್ಪತ್ರೆಯ ವೈದ್ಯರು ಸೇವೆಗೆ ಹಾಜರಾಗಿದ್ದರು. ಒಪಿಡಿ ವಿಭಾಗ ಸೇರಿದಂತೆ ಎಲ್ಲಾ ರೀತಿಯ ಸೇವೆಯನ್ನು ಒದಗಿಸಿದ್ದಾರೆ. ಹಾಗೆಯೇ ಸಣ್ಣಪುಟ್ಟ ಕ್ಲಿನಿಕ್, ನರ್ಸಿಂಗ್ ಹೋಮ್‌ಗಳು ಶನಿವಾರ ತೆರೆದಿದ್ದವು.
ನಗರದ ಮಣಿಪಾಲ್ ಆಸ್ಪತ್ರೆ. ಕಿಮ್ಸ್, ಅಪೋಲೋ, ನಾರಾಯಣ ಹೆಲ್ತ್, ಎಂ.ಎಸ್.ರಾಮಯ್ಯ, ವಿಕ್ರಮ್, ಮಲ್ಯ, ಮಲ್ಲಿಗೆ ಸೇರಿ ಬಹುತೇಕ ಎಲ್ಲಾ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಮ್‌ಗಳು, ಕ್ಲಿನಿಕ್‌ಗಳು, ಡಯಾಗ್ನೊಸ್ಟಿಕ್ ಸೆಂಟರ್, ಸ್ಕ್ಯಾನಿಂಗ್ ಸೆಂಟರ್‌ಗಳು ಹೊರರೋಗಿಗಳ ವಿಭಾಗ ಸಹಿತವಾಗಿ ನಿರಂತರ ಸೇವೆ ನೀಡಿವೆ. ಜಯನಗರದ ಸರ್ಕಾರಿ ಆಸ್ಪತ್ರೆ, ಕೆ.ಸಿ.ಜನರಲ್ ಸರ್ಕಾರಿ ಆಸ್ಪತ್ರೆ ಸೇರಿದಂತೆ ಬಹುತೇಕ ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ವರ್ಗ ಶನಿವಾರವೂ ರಜೆ ಪಡೆಯದೆ ಸೇವೆ ಸಲ್ಲಿಸಿದ್ದರು.
ಆಕ್ರೋಶ: ಖಾಸಗಿ ವೈದ್ಯರ ಮುಷ್ಕರಕ್ಕೆ ಸರ್ಕಾರವೊಂದು ಮಣಿದು, ಜನಪರ ನಿರ್ಧಾರಗಳನ್ನು ಕೈಬಿಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದುರಂತವೇ ಸರಿ. ಸಕಾಲದಲ್ಲಿ ಚಿಕಿತ್ಸೆ ಸಿಗದೇ ಸಾವನ್ನಪ್ಪಿದವರ ಜೀವಕ್ಕೆ ಬೆಲೆ ಇಲ್ಲವೇ ಎಂದು ವಿವಿಧ ಜನರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.