Advertisement

ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರಿಸಲು ಖಾಸಗಿ ನಿರ್ಣಯ

07:20 AM Nov 13, 2017 | Team Udayavani |

ಬೆಳಗಾವಿ: ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ಖಾಸಗಿ ನಿರ್ಣಯವೊಂದನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲು ಕೋರಿ ಜೆಡಿಎಸ್‌ ಶಾಸಕ ಕೆ.ಗೋಪಾಲಯ್ಯ ವಿಧಾನಸಭಾಧ್ಯಕ್ಷರಿಗೆ ಪತ್ರ ನೀಡಿದ್ದಾರೆ.

Advertisement

ಕರಾವಳಿ ಭಾಗದಲ್ಲಿ ಹೆಚ್ಚು ಪ್ರಚಲಿತವಾಗಿರುವ ತುಳು ಅತ್ಯಂತ ಪ್ರಾಚೀನ ದ್ರಾವಿಡ ಭಾಷೆಯಾಗಿದ್ದು, ಸುಮಾರು 25 ಲಕ್ಷಕ್ಕೂ ಅಧಿಕ ಮಂದಿ ಇದನ್ನು ಬಳಸುತ್ತಿದ್ದಾರೆ. ಕರ್ನಾಟಕ ಹಾಗೂ ಗಡಿ ಭಾಗದ ಕಾಸರಗೋಡಿನ ಜನರು ಈ ಭಾಷೆಯನ್ನು ತಮ್ಮ ಮಾತೃಭಾಷೆಯನ್ನಾಗಿ ಮಾತನಾಡುತ್ತಾರೆ. ಈ ಪ್ರಾಚೀನ ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಿ ಈ ಭಾಷೆಯಲ್ಲಿ ಸಂಶೋಧನೆ ಹಾಗೂ ಇದರ ಬಳಕೆಗೆ ಅಧಿಕೃತ ಮನ್ನಣೆ ದೊರಕಿಸುವುದು ಅವಶ್ಯಕ.

ಆದ್ದರಿಂದ ಇದಕ್ಕೆ ಸಂಬಂಧಪಟ್ಟಂತೆ ಸಂವಿಧಾನ ತಿದ್ದುಪಡಿಯನ್ನು ಸಂಸತ್‌ನಲ್ಲಿ ಮಂಡಿಸುವುದು ಸಮಂಜಸ. ಹಲವಾರು ವರ್ಷಗಳಿಂದ ಈ ಬೇಡಿಕೆ ಇದ್ದು ಇದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ಹೀಗಾಗಿ, ಈ ಖಾಸಗಿ ನಿರ್ಣಯ ಮಂಡಿಸಲು ಅವಕಾಶ ನೀಡಲು ಕೋರುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಸಾಮಾನ್ಯವಾಗಿ ಅಧಿವೇಶನ ಸಂದರ್ಭದಲ್ಲಿ ಪ್ರತಿ ಗುರುವಾರ ಖಾಸಗಿ ನಿರ್ಣಯ ಮಂಡಿಸಲು ಸದಸ್ಯರಿಗೆ ಅವಕಾಶವಿದೆ. ಎರಡು ವಾರ ಅಧಿವೇಶನ ನಡೆಯುವುದರಿಂದ ಈ ಕುರಿತ ನಿರ್ಣಯ ಮಂಡಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಲಾಗಿದೆ. ಇದರ ಜತೆಗೆ ಗೋಪಾಲಯ್ಯ ಅವರು ಕರ್ನಾಟಕದಲ್ಲಿ ನಡೆಯುವ ಬ್ಯಾಂಕಿಂಗ್‌, ಕೇಂದ್ರದ ಅಬಕಾರಿ ಸೇವೆ, ಸ್ಟಾಫ್‌ ಸೆಲೆಕ್ಷನ್‌ ಸೇವೆ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡದಲ್ಲೇ ತೆಗೆದುಕೊಳ್ಳಲು ಅವಕಾಶ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಖಾಸಗಿ ನಿರ್ಣಯ ಮಂಡಿಸಲು ಅನುಮತಿ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next