Advertisement

ಖಾಸಗಿ ಆಸ್ಪತ್ರೆಗಳ ಒಪಿಡಿಗಳು ಬಂದ್‌, ತುರ್ತುಸೇವೆ ನಿರಾತಂಕ

06:00 AM Jul 29, 2018 | Team Udayavani |

ಕುಂದಾಪುರ/ ಕಾರ್ಕಳ: ಕೇಂದ್ರ ಸರಕಾರ ಜಾರಿಗೊಳಿಸಲು ಮುಂದಾಗಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಮಸೂದೆ ವಿರೋಧಿಸಿ ದೇಶಾದ್ಯಂತ  ಶನಿವಾರ ವೈದ್ಯರು ಮುಷ್ಕರಕ್ಕೆ ಕರೆ ನೀಡಿದ್ದು, ಕುಂದಾಪುರ, ಕಾರ್ಕಳದಲ್ಲಿಯೂ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಸೇವೆ ಹೊರತುಪಡಿಸಿ ಹೊರ ರೋಗಿಗಳ ವಿಭಾಗ (ಒಪಿಡಿ)ದ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. 
 
ಕುಂದಾಪುರ ಐ.ಎಂ.ಎ. ವ್ಯಾಪ್ತಿಯಲ್ಲಿರುವ ಎಲ್ಲ ಆಸ್ಪತ್ರೆ ಮತ್ತು ಚಿಕಿತ್ಸಾ ಕೇಂದ್ರಗಳಲ್ಲಿ ಹೊರರೋಗಿ ಸೇವೆಯನ್ನು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ರವರೆಗೆ ಸ್ಥಗಿತಗೊಳಿಸಲಾಗಿತ್ತು. ಆದರೆ ತುರ್ತು ಚಿಕಿತ್ಸೆ ಹಾಗೂ ಒಳರೋಗಿಗಳ ಶುಶ್ರೂಷೆಗೆ ಯಾವುದೇ ತೊಂದರೆಯಾಗಿಲ್ಲ.

Advertisement

ಎಲ್ಲ ಸರಕಾರಿ ವೈದ್ಯರು ಹಾಜರು
ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳಿಗೆ ಸೇವೆ ಸ್ಥಗಿತಗೊಳಿಸಿದ ಕಾರಣಕ್ಕೆ ಶನಿವಾರ ಕುಂದಾಪುರ ಸರಕಾರಿ ಆಸ್ಪತ್ರೆಯ ಎಲ್ಲ ವೈದ್ಯರ ರಜೆಯನ್ನು ರದ್ದುಪಡಿಸಿ, ಕರ್ತವ್ಯಕ್ಕೆ ಹಾಜರಾಗಲು ತಿಳಿಸಲಾಗಿತ್ತು. 12 ವೈದ್ಯರ ಪೈಕಿ ನೇತ್ರ ತಜ್ಞರು ಮೊದಲೇ ನಿಗದಿ ಯಾದಂತೆ  ಕಾನ್ಫರೆನ್ಸ್‌ಗೆ ತೆರಳಿದ್ದು, ಬಾಕಿ 11 ಮಂದಿ ವೈದ್ಯರು ಹಾಜರಾಗಿದ್ದಾರೆ ಎನ್ನುವುದಾಗಿ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ರಾಬರ್ಟ್‌ ರೆಬೆಲ್ಲೋ ಉದಯವಾಣಿಗೆ ತಿಳಿಸಿದ್ದಾರೆ. 

ಖಾಸಗಿ ವೈದ್ಯರ ಮುಷ್ಕರವಿದ್ದರೂ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲೇನೂ ರೋಗಿಗಳ ಸಂಖ್ಯೆ ಹೆಚ್ಚಿರಲಿಲ್ಲ. ಎಲ್ಲ ದಿನಗಳಂತೆ ಯಥಾಸ್ಥಿತಿಯಿತ್ತು. ಕಳೆದ ಶನಿವಾರ 339 ರೋಗಿಗಳು ಚಿಕಿತ್ಸೆಗಾಗಿ ನೋಂದಾವಣೆ ಮಾಡಿಸಿದ್ದರೆ, ಈ ಶನಿವಾರ ಮಧ್ಯಾಹ್ನವರೆಗೆ 226 ಮಂದಿಯಷ್ಟೇ ಚಿಕಿತ್ಸೆಗಾಗಿ ನೋಂದಾವಣೆ ಮಾಡಿಸಿದ್ದಾರೆ. ಯಾವುದೇ ತುರ್ತು ಚಿಕಿತ್ಸೆ ಪ್ರಕರಣಗಳು ಬಂದಿರಲಿಲ್ಲ.

ಕಾರ್ಕಳದಲ್ಲಿ  ಮಿಶ್ರ ಪ್ರತಿಕ್ರಿಯೆ
ಮುಷ್ಕರಕ್ಕೆ ಕಾರ್ಕಳ ತಾಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ತಾಲೂಕಿನ ಕೆಲವೊಂದು ಖಾಸಗಿ ಕ್ಲೀನಿಕ್‌ಗಳನ್ನು ಬಂದ್‌ ಮಾಡಿದ್ದು, ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಕೆಲವು ಭಾಗಗಳಲ್ಲಿ ಕ್ಲಿನಿಕ್‌ಗಳು ಎಂದಿನಂತೆ ಸೇವೆ ನೀಡಿದ್ದು, ಮತ್ತೆ ಕೆಲವರು ತಡವಾಗಿ ತೆರೆದು ಸೇವೆ ನೀಡಿದ್ದಾರೆ.ಪ್ರಮುಖ ನರ್ಸಿಂಗ್‌ ಹೋಮ್‌ಗಳಾದ ನಿಟ್ಟೆ ಗಾಜ್ರಿಯ ಆಸ್ಪತ್ರೆ ಹಾಗೂ ರೋಟರಿ ಆಸ್ಪತ್ರೆಯಲ್ಲಿ ಎಂದಿನಂತೆ ಹೊರರೋಗಿಗಳ ವಿಭಾಗವೂ ತೆರೆದಿದ್ದು, ಸೇವೆ ನೀಡಲಾಗಿತ್ತು. ಕಾರ್ಕಳ ನರ್ಸಿಂಗ್‌ ಹೋಮ್‌ನಲ್ಲಿ ಬಂದ್‌ ಮಾಡಿ ವೈದ್ಯರು ಹೋರಾಟಕ್ಕೆ ಬೆಂಬಲ ನೀಡಿದ್ದರು. 

ತಟ್ಟದ ಬಂದ್‌ ಬಿಸಿ
ಸರಕಾರಿ ಆಸ್ಪತ್ರೆಯ ಸೇವೆಗಳಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಹೀಗಾಗಿ ತಾಲೂಕಿನಲ್ಲಿ ಜನ ಸಾಮಾನ್ಯರಿಗೆ ಮುಷ್ಕರದ ಬಿಸಿ ಅಷ್ಟು ದೊಡ್ಡ ಪ್ರಮಾಣ ದಲ್ಲೇನೂ ತಟ್ಟಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next