Advertisement

ಖಾಸಗಿ ಆಸ್ಪತ್ರೆಗಳು ಶೇ.50 ಹಾಸಿಗೆ ಕಾಯ್ದಿರಿಸಲು ಒಪ್ಪಿಗೆ

06:14 AM Jun 30, 2020 | Lakshmi GovindaRaj |

ಬೆಂಗಳೂರು: ರಾಜಧಾನಿಯಲ್ಲಿ ಕೋವಿಡ್‌- 19 ಸೋಂಕಿತರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ನಗರದ ಖಾಸಗಿ ಆಸ್ಪತ್ರೆಗಳ ಪ್ರಮುಖರೊಂದಿಗೆ ಸೋಮವಾರ ನಡೆಸಿದ ಸಭೆ  ಫಲಪ್ರದವಾಗಿದ್ದು, ಮಂಗಳವಾರವೇ 500 ಹಾಸಿಗೆ ಕಾಯ್ದಿರಿಸಲು ಆಸ್ಪತ್ರೆಗಳು ಒಪ್ಪಿವೆ. ವಾರದಲ್ಲಿ ಒಟ್ಟು 2,500 ಹಾಸಿಗೆ ಕಾಯ್ದಿರಿಸಲು ಸಮ್ಮತಿಸಿವೆ.

Advertisement

ವಿಧಾನಸೌಧದಲ್ಲಿ ಸೋಮವಾರ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಖಾಸಗಿ  ಆಸ್ಪತ್ರೆಗಳು, ನರ್ಸಿಂಗ್‌ ಹೋಮ್‌ಗಳ ಸಂಘದ (ಪಿಎಚ್‌ಎಎನ್‌ಎ) ಪದಾಧಿಕಾರಿಗಳು, ಖಾಸಗಿ ಆಸ್ಪತ್ರೆಗಳ ಆಡಳಿತಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಬೆಂಗಳೂರಿನಲ್ಲಿ ಕೋವಿಡ್‌ ಚಿಕಿತ್ಸೆಗೆ ಹಾಸಿಗೆ ಕಾಯ್ದಿರಿಸುವ ಬಗ್ಗೆ ಸುದೀರ್ಘ‌ ಸಭೆ ನಡೆಯಿತು. ನಗರದಲ್ಲಿ ಸೋಂಕು ನಿಯಂತ್ರಣಕ್ಕೆ ಖಾಸಗಿ ಆಸ್ಪತ್ರೆಗಳ ಶೇ.50 ಹಾಸಿಗೆಗಳನ್ನು ತ್ವರಿತವಾಗಿ ಕೋವಿಡ್‌ ಚಿಕಿತ್ಸೆಗೆ ಕಾಯ್ದಿರಿಸಬೇಕು ಎಂದು ಸಿಎಂ ಮನವಿ ಮಾಡಿದರು.

ಈ ಬಗ್ಗೆ ಖಾಸಗಿ  ಆಸ್ಪತ್ರೆಗಳ ಪ್ರಮುಖರು, ಪರಸ್ಪರ ಚರ್ಚಿಸಲು ಮುಂದಾದರು. ಆಗ ಯಡಿಯೂರಪ್ಪ, “ಈ ಬಗ್ಗೆ ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬನ್ನಿ. ಈ ಸಂದರ್ಭದಲ್ಲಿ ಸರ್ಕಾರಕ್ಕೆ ಸಹಕಾರ ನೀಡಿದರೆ ಮುಂದೆ ಸರ್ಕಾರವೂ ತಮ್ಮ ಮನವಿಗಳಿಗೆ  ಸ್ಪಂದಿಸಲಿದೆ. ನಾವು, ಅಧಿಕಾರಿಗಳೆಲ್ಲಾ ಹೊರಗೆ ಹೋಗುತ್ತೇವೆ. ಬಳಿಕ ಸಚಿವ ಆರ್‌. ಅಶೋಕ್‌ ಅವರು ಸಭೆ ಮುಂದುವರಿಸಲಿದ್ದು ತಮ್ಮ ನಿರ್ಧಾರ ತಿಳಿಸಿ’ ಎಂದು ಸೂಚಿಸಿ ಹೊರ ನಡೆದರು. ಗೃಹ ಸಚಿವ ಬಸವರಾಜ ಬೊಮ್ಮಾಯಿ,  ಅಧಿಕಾರಿಗಳೂ ಮುಖ್ಯಮಂತ್ರಿಗಳನ್ನು ಅನುಸರಿಸಿದರು.

ಐದು ಮಂದಿಯ ಸಮಿತಿ ರಚನೆ: ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರ್‌.ಅಶೋಕ್‌, ಮಹಾರಾಷ್ಟ, ದೆಹಲಿಯಲ್ಲಿ ಸೋಂಕು ಉಲ್ಬಣಗೊಂಡಿದ್ದು, ಅಲ್ಲಿನ ಸರ್ಕಾರಗಳು  ಕೈಚೆಲ್ಲಿವೆ. ಆದರೆ ಬೆಂಗಳೂರಿನಲ್ಲಿ ದೇಶಕ್ಕೆ ಮಾದರಿಯಾಗುವ ನಿಯಂತ್ರಣಕ್ಕೆ ನಿರಂತರ ಪ್ರಯತ್ನ ನಡೆದಿದೆ. ಸರ್ಕಾರದ ಮನವಿಯಂತೆ ನಗರದ ಖಾಸಗಿ ಆಸ್ಪತ್ರೆಗಳು ಶೇ.50 ಹಾಸಿಗೆ ನೀಡಲು ಒಪ್ಪಿಗೆ ನೀಡಿವೆ.

ಸಭೆ ಫಲಪ್ರದವಾಗಿದೆ  ಎಂದರು. ಸುಗಮ ಕಾರ್ಯ ನಿರ್ವಹಣೆ ದೃಷ್ಟಿಯಿಂದ ಮುಖ್ಯಮಂತ್ರಿ  ಗಳ ರಾಜಕೀಯ ಕಾರ್ಯದರ್ಶಿ ಎಸ್‌.ಆರ್‌. ವಿಶ್ವನಾಥ್‌ ನೇತೃತ್ವದಲ್ಲಿ ಐದು ಮಂದಿಯ ಸಮಿತಿ ರಚನೆಯಾಗಿದೆ. ಆರೋಗ್ಯ ಇಲಾಖೆ ಆಯುಕ್ತ ಪಂಕಜ್‌ ಕುಮಾರ್‌  ಪಾಂಡೆ, ಐಎಎಸ್‌ ಅಧಿಕಾರಿ ತುಷಾರ್‌ ಗಿರಿನಾಥ್‌, ಖಾಸಗಿ ಆಸ್ಪತ್ರೆಗಳ ವತಿಯಿಂದ ಡಾ.ರವೀಂದ್ರ, ಡಾ.ನಾಗೇಂದ್ರ ಸ್ವಾಮಿ ಸಮಿತಿಯಲ್ಲಿರುತ್ತಾರೆಂದರು.

Advertisement

ನಗರದಲ್ಲಿ ಕೆಲ ಧರ್ಮಾಧಾರಿತ ದೊಡ್ಡ ಆಸ್ಪತ್ರೆಗಳಿದ್ದು, ಅವರೂ  ಕೈಜೋಡಿಸುವ ವಿಶ್ವಾಸ ವಿದೆ. ಮಂಗಳವಾರ 11 ವೈದ್ಯಕೀಯ ಕಾಲೇಜುಗಳ ಮಾಲಿ ಕರ ಸಭೆ ಆಯೋಜಿಸಲಾಗಿದೆ. ಈ ಕಾಲೇಜುಗಳ ಆಸ್ಪತ್ರೆಗಳಲ್ಲಿ 10,000 ಹಾಸಿಗೆಗಳಿದ್ದು, ಇದರಲ್ಲಿ 5000 ಹಾಸಿಗೆ ಪಡೆಯಲಾಗುವುದೆಂದರು.  ಸಂಘದ ಮೂರು ಬೇಡಿಕೆ ಬಗ್ಗೆ ಪರಿಶೀಲಿಸಲಾಗುವುದು. ಯಾವುದೇ ವಿವಾದವಿಲ್ಲ. ಕೋವಿಡ್‌ ರೋಗಿಗಳು ಹಾಸಿಗೆಗಾಗಿ ಅಲೆಯುವಂ ತಾಗಬಾರ ದು. ಸೋಂಕು ದೃಢಪಟ್ಟ 8 ಗಂಟೆಯಲ್ಲಿ ಹಾಸಿಗೆ ಒದಗಿಸಲು ಕ್ರಮ ವಹಿಸಲಾಗುವುದೆಂದರು.

2-3 ಗಂಟೆಯಲ್ಲೇ ಹಾಸಿಗೆ ಸಿಗುವ ನಿರೀಕ್ಷೆೆ: ಪಿಎಚ್‌ಎಎನ್‌ಎ ಸಂಘದ ಅಧ್ಯಕ್ಷ ಡಾ. ಆರ್‌.ರವೀಂದ್ರ ಮಾತನಾಡಿ, ಸರ್ಕಾರದ ಕೋರಿಕೆಯಂತೆ ನಗರದ ಖಾಸಗಿ ಆಸ್ಪತ್ರೆಗಳ ಶೇ.50 ಹಾಸಿಗೆಗಳನ್ನು ಕೋವಿಡ್‌ 19 ಚಿಕಿತ್ಸೆಗೆ ನೀಡಲು  ಒಪ್ಪಿದ್ದೇವೆ. ಸಮನ್ವಯ ಸಮಿತಿ ಮೂಲಕ ಹಾಸಿಗೆ ಹಂಚಿಕೆ ಯಶಸ್ವಿಯಾಗಿ ನಡೆದರೆ ರೋಗಿಗಳಿಗೆ 8 ಗಂಟೆಗಿಂತ ಮೊದಲೇ ಅಂದರೆ 2-3 ಗಂಟೆಯಲ್ಲೇ ಹಾಸಿಗೆ ಸಿಗುವ ನಿರೀಕ್ಷೆ ಇದೆ ಎಂದರು.

ಕೇಂದ್ರ ಸರ್ಕಾರ ಘೋಷಿಸಿರುವಂತೆ  ಕೋವಿಡ್‌ ಚಿಕಿತ್ಸೆಯಲ್ಲಿ ತೊಡಗುವ ವೈದ್ಯಕೀಯ- ಆರೋಗ್ಯ ಸಿಬ್ಬಂದಿ ಸಾವು ಸಂಭವಿಸಿದರೆ 50 ಲಕ್ಷ ರೂ. ವಿಮಾ ಸೌಲಭ್ಯ ನೀಡಲು ಸರ್ಕಾರ ಒಪ್ಪಿದೆ. ನಮ್ಮ ಆಸ್ಪತ್ರೆಗಳ ವೈದ್ಯರು, ಸಿಬ್ಬಂದಿ ಮೇಲೂ ಒತ್ತಡವಿದ್ದು, ಹೆಚ್ಚಿನ ಪೊಲೀಸ್‌  ಭದ್ರತೆ ನೀಡಬೇಕೆಂಬ ಮನವಿಗೂ ಸರ್ಕಾರ ಒಪ್ಪಿದೆ. ಖಾಸಗಿ ಆಸ್ಪತ್ರೆಗಳು ಯಾವಾಗಲೂ ಸರ್ಕಾರದೊಂದಿಗಿವೆ ಎಂದು ಹೇಳಿದರು. ಬಿಪಿಎಲ್‌ ರೋಗಿಗಳಿಗೆ ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆಗೆ ಸರ್ಕಾರ ಒಪ್ಪಿದೆ.  ಇತರೆ ರೋಗಿಗಳಿಗೆ ಗೊತ್ತುಪಡಿಸಿದ್ದ ಚಿಕಿತ್ಸಾ ಮೊತ್ತದಲ್ಲಿ ಸರ್ಕಾರ ಶೇ.20 ಕಡಿತ ಮಾಡಿದೆ.

ಕೋವಿಡ್‌ ಸಂದರ್ಭದಲ್ಲಿ ಚಿಕಿತ್ಸಾ ದರದ ಬಗ್ಗೆ ಚರ್ಚಿಸದಿರಲು ನಿರ್ಧರಿಸಿದ್ದೇವೆ. ಕಡಿಮೆ ದರದಲ್ಲಿ ಚಿಕಿತ್ಸೆ ನೀಡಲು ಕಷ್ಟವಾದರೆ  ಸರ್ಕಾರ ಸ್ಪಂದಿಸುವ ವಿಶ್ವಾಸವಿದೆ ಎಂದು ತಿಳಿಸಿದರು. ಕೋವಿಡ್‌ ಸೋಂಕಿತರು ಹಾಗೂ ಸೋಂಕಿತರಲ್ಲದವರನ್ನು ಆಸ್ಪತ್ರೆಯಲ್ಲಿ ಒಟ್ಟಿಗೆ ಇರಿಸಲು ಅವಕಾಶ ನೀಡಲ್ಲ. ಹೀಗಾಗಿ ಕೋವಿಡ್‌ ಯೇತರ ಚಿಕಿತ್ಸೆಗಾಗಿ ಆಸ್ಪತ್ರಗೆ ದಾಖಲಾಗಲು  ಹಿಂಜರಿಯುವ ಅಗತ್ಯವಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next