ಮಂಗಳೂರು: ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ಧೆಗೆ ಕೋವಿಡ್-19 ಸೋಂಕು ದೃಢಪಟ್ಟ ಹಿನ್ನಲೆ, ಆಸ್ಪತ್ರೆ ಮತ್ತು ಅದರ ಸುತ್ತಮುತ್ತಲ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.
ಮಂಗಳೂರಿನ ಪಡೀಲು ಬಳಿಯಿರುವ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿದ್ದ 75 ವರ್ಷ ವಯಸ್ಸಿನ ವೃದ್ದೆಗೆ ಗುರುವಾರ ಸೋಂಕು ದೃಢವಾಗಿತ್ತು. ಪಾರ್ಶ್ವವಾಯು ಸಂಬಂಧ ಕೆಲ ದಿನದ ಹಿಂದೆ ಈ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯನ್ನು ಬುಧವಾರ ವೆನ್ಲಾಕ್ ಆಸ್ಪತ್ರೆಗೆ ಕರೆತರಲಾಗಿತ್ತು. ಅವರ ಗಂಟಲು ದ್ರವ ಪರೀಕ್ಷೆ ನಡೆದಿದ್ದು, ಸೋಂಕು ದೃಢಪಟ್ಟಿದೆ.
ಈ ಕಾರಣದಿಂದ ಆಸ್ಪತ್ರೆ ಜೊತೆಗೆ ಎರಡು ಮನೆ, ಐದು ಅಂಗಡಿ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಆಸ್ಪತ್ರೆ ಸುತ್ತಮುತ್ತಲಿನ ಪ್ರದೇಶಗಳು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ.
ಆಸ್ಪತ್ರೆಯ ಪೂರ್ವ ಭಾಗದಿಂದ ಕನ್ನಗುಡ್ಡೆ, ಪಶ್ಚಿಮದಿಂದ ರಮಾನಥ್ ಕೃಪಾ ರೈಸ್ ಮಿಲ್, ಉತ್ತರಕ್ಕೆ ರಾಷ್ಟ್ರೀಯ ಹೆದ್ದಾರಿ 73 ಮತ್ತು ದಕ್ಷಿಣಕ್ಕೆ ಸರ್ಕಾರಿ ಜಾಗದ ಸುತ್ತ ಕಂಟೈನ್ಮೆಂಟ್ ಪ್ರದೇಶ ಘೋಷಣೆಯಾಗಿದೆ.
ಅದಲ್ಲದೆ ಆಸ್ಪತ್ರೆಯ 5 ಕಿಲೋಮೀಟರ್ ಸುತ್ತಾಮುತ್ತಾ ಬಫರ್ ಝೋನ್ ಘೋಷಿಸಲಾಗಿದ್ದು, ಕಲ್ಲಾಪು, ಕುಡುಪು, ಫರಂಗಿಪೇಟೆ, ಫಳ್ನೀರ್ ವರೆಗೂ ಬಫರ್ ಝೋನ್ ಇರಲಿದೆ. ಇದಲ್ಲದೆ 42 ಸಾವಿರ ಮನೆ, 1800 ಅಂಗಡಿ ಮತ್ತು ಕಚೇರಿ, 1.8 ಲಕ್ಷ ಜನರು ಬೋರ್ ಝೋನ್ ಅಡಿಯಲ್ಲಿ ಬರಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಆದೇಶ ನೀಡಿದ್ದಾರೆ.