ಬಾಗಲಕೋಟೆ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಯಾವುದೇ ಸಂದರ್ಭದಲ್ಲಿ ಅಗತ್ಯಬಿದ್ದರೆ 400 ಬೆಡ್‌ಗಳ ಆಸ್ಪತ್ರೆಯನ್ನು ಸೋಂಕಿತರ ಚಿಕಿತ್ಸೆಗಾಗಿ ಬಿಟ್ಟು ಕೊಡಲು ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದು ಮುಂದಾಗಿದೆ.
ಕೋವಿಡ್ ರಣಕೇಕೆ ಮುಂದುವರಿಯುತ್ತಲೇ ಇದೆ. ಪ್ರಯಾಣದ ಹಿನ್ನೆಲೆ ಇಲ್ಲದ ವ್ಯಕ್ತಿಗಳಿಗೂ ಈಗ ಸೋಂಕು ಪತ್ತೆಯಾಗುತ್ತಿದ್ದು, ಎಲ್ಲೆಡೆ ಭೀತಿ ಹುಟ್ಟಿಸುತ್ತಿದೆ. ನವನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಸದ್ಯ 62 ಜನ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿ 250 ಬೆಡ್‌ಗಳಿದ್ದು, ಸೋಂಕಿತರು ಹೆಚ್ಚಾದರೆ 250 ಜನರವರೆಗೂ ಚಿಕಿತ್ಸೆ ನೀಡಲು ಅವಕಾಶವಿದೆ. ಆದರೆ, ಕಲಬುರಗಿ, ಯಾದಗಿರಿ ಉಡುಪಿ, ಬೆಂಗಳೂರಿನಂತೆ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರಿಕೆ ಉಂಟಾದರೆ, ಐಸೋಲೇಶನ್ ವಾರ್ಡ್‌ಗಳ ಕೊರತೆ ಉಂಟಾಗಲಿದೆ.
ಈ ಕೊರತೆ ನೀಗಿಸಲು ಉತ್ತರ ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಬಾಗಲಕೋಟೆಯ ವೀರಶೈವ ವಿದ್ಯಾವರ್ಧಕ ಸಂಘದ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಹಾನಗಲ್ ಕುಮಾರೇಶ್ವರ ಆಸ್ಪತ್ರೆ, 400 ಬೆಡ್‌ಗಳ ಆಸ್ಪತ್ರೆ ನೀಡಲು ಒಪ್ಪಿಗೆ ನೀಡಿದೆ. ಹೀಗಾಗಿ ಬೆಡ್‌ಗಳ ಕೊರತೆಯಾದರೆ ಹೇಗೆ ಎಂಬ ಜಿಲ್ಲಾಡಳಿತದ ಆತಂಕವೂ ದೂರಾಗಿದೆ.
ಕೋವಿಡ್ ವೇಳೆ ನೆರವಾದ ಕುಮಾರೇಶ್ವರ!: ಕಳೆದ ಮಾ.31ರಂದು ನಗರದ ವೃದ್ಧರೊಬ್ಬರು ಕೆಮ್ಮು, ನೆಗಡಿ, ಉಸಿರಾಟದ ತೊಂದರೆಯಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಏ.2ರಂದು ಕೋವಿಡ್ ಸೋಂಕು ಇರುವುದು ದೃಢಪಟ್ಟಿತ್ತು. ಜಿಲ್ಲೆಯಲ್ಲೇ ಇದು ಮೊದಲ ಕೋವಿಡ್ ಪ್ರಕರಣವಾಗಿತ್ತು. ಮರುದಿನ ಏ.3ರ ರಾತ್ರಿ ಅವರು ಅಸುನೀಗಿದ್ದರು.
ಅದೂ ಕೋವಿಡ್ ದಿಂದ ಜಿಲ್ಲೆಯಲ್ಲಿ ಮೊದಲ ಮರಣ ಪ್ರಕರಣವೂ ಆಯಿತು. ಮೊದಲ ಸೋಂಕಿತ ವ್ಯಕ್ತಿ ಪತ್ತೆಯಾದ ದಿನವೇ ಜಿಲ್ಲಾ ಆಸ್ಪತ್ರೆಯಲ್ಲಿದ್ದ ಇತರೇ ರೋಗಿಗಳ ಚಿಕಿತ್ಸೆ ದೊಡ್ಡ ಸವಾಲು ಜಿಲ್ಲಾಡಳಿತಕ್ಕಿತ್ತು. ಆಗಲೂ ತಕ್ಷಣ ನೆರವಾಗಿದ್ದು ಬಿವಿವಿ ಸಂಘದ ಕುಮಾರೇಶ್ವರ ಆಸ್ಪತ್ರೆ. ಜಿಲ್ಲಾ ಆಸ್ಪತ್ರೆಯ ಹೆರಿಗೆ ವಿಭಾಗವನ್ನು ಬಾಗಲಕೋಟೆ ನಗರದ 50 ಹಾಸಿಗೆಯ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿ ಉಳಿದ ಎಲ್ಲ ವಿಭಾಗದ ರೋಗಿಗಳನ್ನು ಕುಮಾರೇಶ್ವರ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ಕೊಡಲಾಯಿತು. ಕೋವಿಡ್ ಜಿಲ್ಲೆಗೆ ಕಾಲಿಟ್ಟಾಗ, ಕೋವಿಡ್ ಸಂಕಷ್ಟದ ಸಮಯದಲ್ಲೂ ಮೊದಲ ಬಾರಿಗೆ ನೆರವಾಗಿದ್ದು ಕುಮಾರೇಶ್ವರ ಆಸ್ಪತ್ರೆ ಕೂಡ. ಸೋಂಕಿತರು ಹೆಚ್ಚಾದರೆ, ಅದೇ ಆಸ್ಪತ್ರೆ ಆವರಣದ 400 ಬೆಡ್‌ನ ಆಸ್ಪತ್ರೆಯನ್ನು ಜಿಲ್ಲಾಡಳಿತಕ್ಕೆ ನೀಡಲು ನೀಡಲು ಒಪ್ಪಿರುವುದು ಹೆಚ್ಚುವರಿ ಬೆಡ್ ಹೊಂದಿಸುವ ಚಿಂತೆಯಲ್ಲಿದ್ದ ಜಿಲ್ಲಾಡಳಿತಕ್ಕೆ ಅನುಕೂಲವಾಗಲಿದೆ ಎಂಬ ಮಾತು ಕೇಳಿ ಬಂದಿದೆ.
ವಿವಿಧ ಕಟ್ಟಡ ಪರಿಶೀಲನೆ: ಜಿಲ್ಲೆಯಲ್ಲಿ ಕೋವಿಡ್ಸೋಂಕಿತರ ಸಂಖ್ಯೆ ಹೆಚ್ಚಾದರೆ, ಸೂಕ್ತ ಚಿಕಿತ್ಸೆ ನೀಡಲು ಜಿಲ್ಲಾಡಳಿತ, ವಿವಿಧ ಸರ್ಕಾರಿ ಕಟ್ಟಡಗಳ ಪರಿಶೀಲನೆಗೆ ಮುಂದಾಗಿತ್ತು. ನವನಗರದ ಶಿಕ್ಷಕರ ತರಬೇತಿ ಕೇಂದ್ರ, ಜಿಪಂನ ಸಂಪನ್ಮೂಲ ಕೇಂದ್ರ ಹೀಗೆ ಹಲವು ಕಟ್ಟಡ ಪರಿಶೀಲಿಸಿ, ಐಸೋಲೇಶನ್ ಆಸ್ಪತ್ರೆಗಳಾಗಿ ಪರಿವರ್ತಿಸಲು ಚಿಂತನೆ ನಡೆಸಿತ್ತು. ಸದ್ಯ ಬಿವಿವಿ ಸಂಘದ ಎಸ್. ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನಿಂದ 400 ಬೆಡ್‌ನ ಆಸ್ಪತ್ರೆ ನೀಡಲು ಮುಂದಾಗಿರುವುದರಿಂದ ಆ ಚಿಂತೆ ಸದ್ಯಕ್ಕೆ ನಿರಾಳವಾಗಿದೆ.