ಹಾವೇರಿ: ಮೈಸೂರು ಮಹಾರಾಜರ ಖಾಸಗಿ ದರ್ಬಾರ್ ಮಾದರಿಯಲ್ಲಿ ತಾಲೂಕಿನ ಹಂದಿಗನೂರ ಗ್ರಾಮದ ವಾಡೆಯಲ್ಲಿಯೂ ದೇಸಾಯಿ ಮನೆತನದವರು ಖಾಸಗಿ ದರ್ಬಾರ್ ಸಂಪ್ರದಾಯ ಮುಂದುವರಿಸಿಕೊಂಡು ಬಂದು ಗಮನ ಸೆಳೆದಿದ್ದಾರೆ.
ಮೈಸೂರು ದಸರಾ ಆರಂಭವಾದ ಒಂದು ವರ್ಷದ ಬಳಿಕ ಹಂದಿಗನೂರ ಗ್ರಾಮದ ವಾಡೆಯಲ್ಲಿಯೂ ದೇಸಾಯಿ ಮನೆತನದವರು ಖಾಸಗಿ ದರ್ಬಾರ್ ಆರಂಭಿಸಿದರು. ಅಂದಿನಿಂದ ಇಂದಿನ ವರೆಗೂ ಕಳೆದ ನಾಲ್ಕು ಶತಮಾನಗಳಿಂದ ಹಂದಿಗನೂರು ಗ್ರಾಮದ ದೇಸಾಯಿ ಮನೆತನದವರು ನವರಾತ್ರಿ ಸಂದರ್ಭದಲ್ಲಿ ಪ್ರತಿವರ್ಷ ಖಾಸಗಿ ದರ್ಬಾರ್ ಹಾಗೂ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಸುತ್ತ ಬಂದಿದ್ದಾರೆ. ಮೈಸೂರಿನ ಅರಸರು ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಸಿದರೆ, ಹಂದಿಗನೂರ ದೇಸಾಯಿ ಮನೆತನದವರು ವಾಡೆಯಲ್ಲಿ ಖಾಸಗಿ ದರ್ಬಾರ್ ನಡೆಸುತ್ತಾರೆ. ಹಂದಿಗನೂರ ಮಾಮಲೆ ದೇಸಾಯಿ ಸಂಸ್ಥಾನದ ವಂಶಸ್ಥರು ನಡೆಸುತ್ತಿರುವ ಖಾಸಗಿ ದರ್ಬಾರ್‌ಗೆ ನಾಲ್ಕು ಶತಮಾನಗಳ ಇತಿಹಾಸವಿದೆ. ಇದು ಈಗ ಸಾಂಕೇತಿಕ ಆಚರಣೆ ಸೀಮಿತವಾಗಿರಬಹುದು. ಆದರೆ, ಇಂದಿಗೂ ಅದರ ಹೊಳಪು ಮಾತ್ರ ಹಾಗೆಯೇ ಇದೆ.
ಖಾಸಗಿ ದರ್ಬಾರ್: ಹಂದಿಗನೂರ ಮಾಮಲೆದೇಸಾಯಿ ಅವರು ಬಿಳಿ ಬಣ್ಣದ ರೇಷ್ಮೆ ವಸ್ತ್ರ ಹಾಕಿಕೊಂಡು ವಾಡೆಯಲ್ಲಿ ಕುಳಿತು ಖಾಸಗಿ ದರ್ಬಾರ್ ನಡೆಸುತ್ತಾರೆ. ಇದಕ್ಕೂ ಮುನ್ನ ವಾಡೆ ಪುರೋಹಿತರೊಂದಿಗೆ ಆಯುದ ಪ್ರಜೆ ನೆರವೇರಿಸುತ್ತಾರೆ. ನಂತರ ಗ್ರಾಮಸ್ಥರಿಂದ ಒಪ್ಪಿಗೆ ಪತ್ರ ಪಡೆದು ವಾಡೆ ಮಾಲೀಕರ ಸಂಪ್ರದಾಯದಂತೆ ಸೇವಕರಿಗೆ ಆಯುಧಗಳನ್ನು ನೀಡಿ ಖಾಸಗಿ ದರ್ಬಾರ್ ಆರಂಭಿಸುತ್ತಾರೆ.
ಬನ್ನಿ ಮುಡಿಯುವುದು: ಖಾಸಗಿ ದರ್ಬಾರ್ ಮುಗಿಸಿದ ನಂತರ ಗ್ರಾಮಸ್ಥರೊಂದಿಗೆ ಮೆರವಣಿಗೆ ಮೂಲಕ ತೆರಳುವ ಮಾಮಲೇದೇಸಾಯಿ ಅವರನ್ನು ಸೇರಿ ಗ್ರಾಮದ ದ್ಯಾಮವ್ವ ದೇವಿ ಪಲ್ಲಕ್ಕಿ, ಗಾಳೆವ್ವ ದೇವಿ ಪಲ್ಲಕ್ಕಿ , ದುರ್ಗಾದೇವಿ ಪಲ್ಲಕ್ಕಿ, ಬಸವೇಶ್ವರ ದೇವರ ಪಲ್ಲಕ್ಕಿ, ಆಮಜನೇಯ ದೇವರ ಪಲ್ಲಕ್ಕಿ, ಗ್ರಾಮದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಬನ್ನಿಮಂಟಪಕ್ಕೆ ತೆರಳಿ ಬನ್ನಿ ಗಿಡಕ್ಕೆ ವಿಶೇ‚ಷ ಪೂಜೆಸಲ್ಲಿಸುವ ಮೂಲಕ ಬನ್ನಿ ಮುಡಿಯುವ ಕಾರ್ಯಕ್ಕೆ ಚಾಲನೆ ನೀಡುತ್ತಾರೆ. ಬನ್ನಿ ಮುಡಿದು ಮೆರವಣಿಗೆ ಮೂಲಕ ವಾಪಸ್ಸಾಗುವ ಸಂದರ್ಭದಲ್ಲಿ ಮಾಮಲೇದೇಸಾಯಿ ಅವರಿಗೆ ಗ್ರಾಮದ ಮಹಿಳೆಯರು ಆರತಿ ಬೆಳಗಿ ಹರಸುತ್ತಾರೆ. ಮೆರವಣಿಗೆ ವಾಡೆಗೆವಾಪಸ್ಸಾದನಂತರ ಗ್ರಾಮಸ್ಥರು ಮಾಮಲೆದೇಸಾಯಿ ಅವರಿಗೆ ಬನ್ನಿ ನೀಡಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ನಂತರವೇ ಗ್ರಾಮದಲ್ಲಿ ಬನ್ನಿ ವಿನಿಮಯ ಕಾರ್ಯ ಆರಂಭವಾಗುತ್ತದೆ.
-ಎಚ್.ಕೆ. ನಟರಾಜ