ಮೈಸೂರು: ಆಯುರ್ವೇದ ವೈದ್ಯರಿಗೆ ಕೆಲ ಶಸ್ತ್ರ ಚಿಕಿತ್ಸೆಗಳನ್ನು ನಡೆಸಲು ಅವಕಾಶ ನೀಡಿರುವ ಕೇಂದ್ರದ ಕ್ರಮವನ್ನು ಖಂಡಿಸಿ ಖಾಸಗಿ ಆಸ್ಪತ್ರೆಗಳ ಅಲೋಪಥಿ ವೈದ್ಯರು ಶುಕ್ರವಾರ ಒಪಿಡಿ ಬಂದ್ ಮಾಡಿ ಮುಷ್ಕರ ನಡೆಸಿದರೆ, ಸರ್ಕಾರಿ ವೈದ್ಯರು ಮುಷ್ಕರ ನಡೆಸದೆ ಪ್ರತಿಭಟನೆಯಲ್ಲಷ್ಟೇ ಭಾಗವಹಿಸಿದರು.
ಆಯುರ್ವೇದ ದಲ್ಲಿ ಶಾಲ್ಯ ಮತ್ತು ಶಾಲಕ್ಯ ವಿಷಯದಲ್ಲಿ ವ್ಯಾಸಂಗ ಮಾಡಿದವರಿಗೂ 15 ರೀತಿಯ ಶಸ್ತ್ರಚಿಕಿತ್ಸಾ ವಿಧಾನಗಳನ್ನು ನಡೆಸಲು ಭಾರತೀಯ ಔಷಧ ಪರಿಷತ್ತು ಅನುಮತಿ ನೀಡಿದ್ದನ್ನು ವಿರೋಧಿಸಿ ಭಾರತೀಯ ವೈದ್ಯಕೀಯಸಂಘವು ಶುಕ್ರವಾರ ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ತುರ್ತು ಸೇವೆ ಹೊರತುಪಡಿಸಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಮಾಡಲಾಗುವುದೆಂದು ತಿಳಿಸಿತ್ತು. ಆದರೆ, ಶುಕ್ರವಾರ ಮೈಸೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಒಪಿಡಿಬಂದ್ ಮಾಡಿ ಉಳಿದ ತುರ್ತು ಸೇವೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಅಷ್ಟೇನೂ ಪರಿಣಾಮ ಬೀರಲಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಸೇವೆಹೊರತು ಪಡಿಸಿ ಉಳಿದ ಸೇವೆಗಳನ್ನು ಬಂದ್ ಮಾಡಿ ಮುಷ್ಕರ ನಡೆಸುತ್ತೇವೆ ಎಂದು ಹೇಳಿದ್ದ ವೈದ್ಯರು ಕೊನೆ ಕ್ಷಣದಲ್ಲಿ ಕರ್ನಾಟಕ ಸರ್ಕಾರಿವೈದ್ಯಕೀಯ ಸಂಘದಿಂದ ಬೆಂಬಲ ಸಿಗದಿದ್ದರಿಂದಐಎಂಎ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಸರ್ಕಾರಿ ಆಸ್ಪತ್ರೆ ಸೇವೆ: ಮುಷ್ಕರದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಆರೋಗ್ಯ ಸೇವೆಯಲ್ಲಿವ್ಯತ್ಯಯವಾಗುವ ನಿರೀಕ್ಷೆ ಇತ್ತು. ಆದರೆ ಅಷ್ಟಾಗಿಮುಷ್ಕರದ ಬಿಸಿ ತಟ್ಟಲಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿಒಪಿಡಿ ಸೇವೆ ಲಭ್ಯವಿರಲಿಲ್ಲ. ತುರ್ತು ಚಿಕಿತ್ಸೆ, ಔಷಧ ಅಂಗಡಿ, ಆ್ಯಂಬುಲೆನ್ಸ್, ಒಳರೋಗಿ ವಿಭಾಗದಸೇವೆ ಎಂದಿನಂತೆಯೇ ಇತ್ತು. ಕೋವಿಡ್ ರೋಗಿಗಳಿಗೆ ಕೂಡ ಚಿಕಿತ್ಸೆ ದೊರೆಯಿತು. ಅಲ್ಲದೇ ದೂರವಾಣಿ ಸಮಾಲೋಚನೆಗೆ ಕೂಡ ವೈದ್ಯರು ಲಭ್ಯವಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ಸೇವೆಗಳೂ ಲಭ್ಯವಿದ್ದವು. ನಗರದ ಕೆ.ಆರ್.ಆಸ್ಪತ್ರೆ, ಚೆಲುವಾಂಬ, ಮಕ್ಕಳ ಆಸ್ಪತ್ರೆ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಮುಷ್ಕರ ಹೆಚ್ಚು ಪರಿಣಾಮಕಾರಿಯಾಗಲಿಲ್ಲ.
ಹೆಚ್ಚು ರೋಗಿಗಳು: ಕೆ.ಆರ್.ಆಸ್ಪತ್ರೆಗೆ ಎಂದಿನಂತೆ ಆಗಮಿಸಿದ ವೈದ್ಯರು ಹೊರ ರೋಗಿಗಳ ವಿಭಾಗದಸೇವೆ ನೀಡಿದರು. ಖಾಸಗಿ ಆಸ್ಪತ್ರೆಗಳಲ್ಲಿ ಒಪಿಡಿಇಲ್ಲದ ಕಾರಣಕ್ಕಾಗಿ ಕೆ.ಆರ್.ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿತ್ತು. ಎಕ್ಸರೇ ಘಟಕ,ಶಸ್ತ್ರ ಚಿಕಿತ್ಸಾ ಘಟಕ, ಒಳ ರೋಗಿಗಳ ವಿಭಾಗದಲ್ಲೂ ವೈದ್ಯರು ಎಂದಿನಂತೆ ಕಾರ್ಯನಿರ್ವಹಿಸಿದರು.ಇದರಿಂದಾಗಿ ಸಾರ್ವಜನಿಕರ ಮೇಲೆ ಮುಷ್ಕರದ ಬಿಸಿ ತಟ್ಟಲಿಲ್ಲ.
ಶಸ್ತ್ರಚಿಕಿತ್ಸೆಅನುಮತಿ ವಾಪಸ್ ಪಡೆಯಿರಿ : ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆ ನಡೆಸಲು ಅವಕಾಶ ಮಾಡಿಕೊಟ್ಟಿರುವ ಸರ್ಕಾರದಕ್ರಮವನ್ನು ಮರು ಪರಿಶೀಲಿಸಬೇಕು ಎಂದು ಐಎಂಎ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಎನ್.ಆನಂದರವಿಒತ್ತಾಯಿಸಿದರು. ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ಸ್ಥಗಿತಗೊಳಿಸಿದ ವೈದ್ಯರು ಸಯ್ನಾಜಿರಾವ್ ರಸ್ತೆಯಲ್ಲಿರುವ ಭಾರತೀಯ ವೈದ್ಯಕೀಯ ಸಂಘದ ಮೈಸೂರು ಶಾಖೆ ಕಚೇರಿ ಎದುರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಅಪೆಂಡಿಕ್ಸ್, ಪಿತ್ತಕೋಶ, ಹಾನಿಕಾರಕವಲ್ಲದ ಗಡ್ಡೆ ತೆಗೆಯುವುದು, ಗ್ಯಾಂಗ್ರಿನ್, ಹಲ್ಲಿನ ರೂಟ್ ಕ್ಯಾನಲ್ ಮುಂತಾದ ಸಾಮಾನ್ಯ ಶಸ್ತ್ರ ಚಿಕಿತ್ಸೆಗಳನ್ನು ನಡೆಸಲು ಆಯುರ್ವೇದ ವೈದ್ಯರಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.ಇದರಿಂದ ಪ್ರಾಯೋಗಿಕವಾಗಿ ತರಬೇತಿ ಪಡೆದ ಸ್ನಾತಕೋತ್ತರ
ಪದವೀಧರ ಆಯುರ್ವೇದ ವೈದ್ಯರು ಶಸ್ತ್ರಕ್ರಿಯೆಗಳನ್ನು ನಡೆಸಬಹುದಾಗಿದೆ.ಇದು ಕೇಂದ್ರ ಸರ್ಕಾರದ ತಪ್ಪು ನಿರ್ಧಾರವಾಗಿದ್ದು, ಜನಸಾಮಾನ್ಯರು ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಿಸಬೇಕಾಗಲಿದೆ ಎಂದರು. ಅನುಭವಿ ವೈದ್ಯರು ಶಸ್ತ್ರ ಚಿಕಿತ್ಸೆ ನಡೆಸುವಾಗಲೇ ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ. ಇಷ್ಟಾಗಿಯೂ ಕೆಲವು ವೇಳೆ ಎಡವಟ್ಟು ಆಗುವ ಸಾಧ್ಯತೆ ಇರುತ್ತದೆ. ಹೀಗಿರುವಾಗ ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆ ನಡೆಸಲು ಅವಕಾಶ ನೀಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.