Advertisement

ಖಾಸಗಿ ವೈದ್ಯರ ಮುಷ್ಕರ: ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಸರತಿ ಸಾಲು

10:16 PM Jun 17, 2019 | Team Udayavani |

ಉಡುಪಿ: ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಮತ್ತು ಆರೋಗ್ಯ ಸಂಸ್ಥೆಗಳ ಮೇಲಿನ ದಾಳಿ ತಡೆಯಲು ಕಾಯ್ದೆ ರೂಪಿಸುವಂತೆ ಆಗ್ರಹಿಸಿ ಸೋಮವಾರ ಭಾರತೀಯ ವೈದ್ಯಕೀಯ ಸಂಘ ನೀಡಿರುವ ಮುಷ್ಕರ ಕರೆಗೆ ವೈದ್ಯಕೀಯ ಸಂಘದ ಜಿಲ್ಲಾ ಘಟಕ ಬೆಂಬಲ ಸೂಚಿಸಿದೆ.

ಖಾಸಗಿ ಆಸ್ಪತ್ರೆಗಳ ಹೊರರೋಗಿಗಳ ವಿಭಾಗ ಹಾಗೂ ಕ್ಲಿನಿಕ್‌ ಬಂದ್‌ ಹಿನ್ನೆಲೆಯಲ್ಲಿ ಅಜ್ಜರಕಾಡು ಸರಕಾರಿ ಜಿಲ್ಲಾಸ್ಪತ್ರೆ ರೋಗಿಗಳಿಂದ ತುಂಬಿ ಹೋಗಿತ್ತು. ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆಗೆ ಬಂದಿದ್ದೆವು. ಆದರೆ ಅಲ್ಲಿ ಸೇವೆ ಇಲ್ಲ ಎಂದು ಬೋರ್ಡ್‌ ಹಾಕಲಾಗಿತ್ತು. ಜಿಲ್ಲಾಸ್ಪತ್ರೆಗೆ ಹೋಗುವಂತೆ ಸೂಚಿಸಿದರು ಎಂದು ತಿಳಿಸುತ್ತಾರೆ ಮಂದಾರ್ತಿಯ ನಿವಾಸಿ.

Advertisement

ಸರತಿ ಸಾಲು
ಜಿಲ್ಲಾಸ್ಪತ್ರೆಯಲ್ಲಿ ಎಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಚಿಕಿತ್ಸೆ ಪಡೆಯಲು ಆಗಮಿಸಿದ್ದರು. ರೋಗಿಗಳ ಸಂಖ್ಯೆ ಹೆಚ್ಚಳವಾದ ಕಾರಣ ಹೊರ ರೋಗಿಗಳ ವಿಭಾಗ, ಕೌಂಟರ್‌ನಲ್ಲಿ ಚಿಕಿತ್ಸೆ ಪಡೆಯಲು ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬಂತು.

ರ್‍ಯಾಂಪ್‌ ಇಲ್ಲದೆ ಅಂಗವಿಕಲರಿಗೆ ತೊಂದರೆ
ಜಿಲ್ಲಾಸ್ಪತ್ರೆಯಲ್ಲಿ ಕಚೇರಿ, ಬಿಲ್‌ ಮೊತ್ತದ ಕ್ಲೈಮ್‌ ಮಾಡಲು ಜಿಲ್ಲಾ ಸರ್ಜನ್‌ ಅನ್ನು ಭೇಟಿಯಾಗಲು ಮೊದಲ ಅಂತಸ್ತಿಗೆ ತೆರಳಬೇಕಾಗುತ್ತದೆ. ಆದರೆ ಅಂಗವಿಕಲರಿಗೆ ಇಲ್ಲಿಗೆ ತೆರಳಲು ಯಾವುದೇ ಮೂಲಸೌಲಭ್ಯ ಇಲ್ಲದ ಕಾರಣ ತೆವಳಿಕೊಂಡು, ಅಥವಾ ಇನ್ನೊಬ್ಬರ ಸಹಾಯ ಪಡೆದು ಹೋಗಬೇಕಾಗುತ್ತದೆ. ಸೋಮವಾರವೂ ಅಂಗವಿಕಲ ರೋಗಿಗಳು ಮೊದಲ ಅಂತಸ್ತಿಗೆ ಬರಲು ಪ್ರಯಾಸಪಡುವ ದೃಶ್ಯ ಕಂಡುಬಂತು.

ಎಂದಿನಂತೆ ಚಿಕಿತ್ಸೆ
ಕೂಸಮ್ಮ ಶಂಭು ಶೆಟ್ಟಿ ಮೆಮೋರಿಯಲ್‌ ಹಾಜಿ ಅಬ್ದುಲ್ಲ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿಯೂ ಎಂದಿನಂತೆ ಚಿಕಿತ್ಸೆ ನೀಡಲಾಗಿತ್ತು. ಸೋಮವಾರ ಸಹಜವಾಗಿಯೇ ರೋಗಿಗಳ ಸಂಖ್ಯೆ ಅಧಿಕವಿರುತ್ತದೆ. ಇಂದು ಕೂಡ ಎಂದಿನಂತೆ ಸೇವೆ ನೀಡುತ್ತಿದ್ದೇವೆ ಎಂದು ತಿಳಿಸುತ್ತಾರೆ ಇಲ್ಲಿನ ಸಿಬಂದಿ.

ಹೆಚ್ಚುವರಿ ಕಾರ್ಯ
ನಿರ್ವಹಿಸಲು ಸೂಚನೆ
ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಲಭ್ಯ ಇರದ ಕಾರಣ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೇವೆ ಒದಗಿಸುವಂತೆ ಸರಕಾರ ಶನಿವಾರವೇ ಸುತ್ತೋಲೆ ಹೊರಡಿಸಿದೆ. ಆಸ್ಪತ್ರೆಯ ಯಾವುದೇ ಸಿಬಂದಿಗೂ ರಜೆ ನೀಡಿಲ್ಲ. ಅಗತ್ಯ ಬಿದ್ದರೆ ಹೆಚ್ಚುವರಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಲಾಗಿದೆ.
-ಡಾ| ಮಧುಸೂದನ್‌ ನಾಯಕ್‌, ಜಿಲ್ಲಾ ಸರ್ಜನ್‌

Advertisement

15 ನಿಮಿಷ ಕ್ಯೂ
ಚಿಕಿತ್ಸೆ ಪಡೆಯಲೆಂದು ಬೆಳಗ್ಗೆ 10 ಗಂಟೆಗೆ ಬಂದಿದ್ದೇನೆ. ಆದರೆ ತುಂಬಾ ಸರತಿ ಸಾಲು ಇದ್ದ ಕಾರಣ 15 ನಿಮಿಷ ಕಾಯಬೇಕಾಯಿತು. ಸಿಬಂದಿ ಉತ್ತಮವಾಗಿ ಸಹಕರಿಸಿದರು.
-ಪುಷ್ಪಾ, ಚಿಕಿತ್ಸೆಗೆ ಬಂದವರು

Advertisement

Udayavani is now on Telegram. Click here to join our channel and stay updated with the latest news.

Next