Advertisement

ಪಠ್ಯಪುಸ್ತಕ ವಿತರಣೆಯಲ್ಲಿ ‘ಖಾಸಗಿ’ತಾರತಮ್ಯ

11:01 AM Jul 23, 2018 | Team Udayavani |

ಉಪ್ಪಿನಂಗಡಿ : ಶಾಲೆ ಪ್ರಾರಂಭವಾಗಿ ತಿಂಗಳೆರಡು ಕಳೆಯುತ್ತ ಬಂದರೂ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ಸರಬರಾಜು ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ. ಖಾಸಗಿ ಶಾಲೆಗಳಿಗೆ ಸರಿಯಾದ ಪ್ರಮಾಣದಲ್ಲಿ ಪಠ್ಯಪುಸ್ತಕ ವಿತರಿಸದೆ ಸರಕಾರ, ಶಿಕ್ಷಣ ಇಲಾಖೆ ತಾರತಮ್ಯ ನೀತಿ ಅನುಸರಿಸುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.

Advertisement

ದುಡ್ಡು ತೆತ್ತರೂ ಪಠ್ಯ ಪುಸ್ತಕಗಳಿಲ್ಲ!
ಇಲಾಖೆಯ ಈ ತಾರತಮ್ಯ ನೀತಿಯಿಂದಾಗಿ ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಸರಕಾರಿ ಶಾಲೆಯ ಮಕ್ಕಳಿಗೆ ಸಕಾಲಕ್ಕೆ ಪಠ್ಯ ಪುಸ್ತಕ ಉಚಿತವಾಗಿ ಪೂರೈಕೆಯಾಗಿದೆ. ಖಾಸಗಿ ಶಾಲೆಗಳಿಗೂ ಈ ಬಾರಿ ಸರಕಾರವೇ ಪಠ್ಯ ಪುಸ್ತಕಗಳನ್ನು ಶುಲ್ಕ ಪಡೆದು ಪೂರೈಸುವುದಾಗಿ ತಿಳಿಸಿದ್ದು, ಅದಕ್ಕಾಗಿ ತಗಲುವ ಮೊತ್ತವನ್ನು ಸರಕಾರಕ್ಕೆ ಮುಂಚಿತವಾಗಿ ಪಾವತಿ ಮಾಡಲು ನಿರ್ದೇಶನ ಕೊಟ್ಟಿತ್ತು. ಖಾಸಗಿ ಶಾಲೆಗಳು ತಮ್ಮ ಶಾಲಾ ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಪುಸ್ತಕಗಳ ಬೇಡಿಕೆ ಪಟ್ಟಿಯನ್ನು ಸಲ್ಲಿಸಿ, ಅದಕ್ಕೆ ತಗಲುವ ಮೊತ್ತವನ್ನು ಶಿಕ್ಷಣ ಇಲಾಖೆಗೆ ಜಮೆ ಮಾಡಿದೆ. ತಿಂಗಳೆರಡು ಕಳೆದರೂ, ಬಹಳಷ್ಟು ಪಠ್ಯಗಳು ಇನ್ನೂ ಸರಬರಾಜಾಗಿಲ್ಲ. ಈ ಬಾರಿಯ ಶೈಕ್ಷಣಿಕ ವರ್ಷದ ಮೊದಲ ಯೂನಿಟ್‌ ಪರೀಕ್ಷೆಗಳು ಮುಗಿದಿವೆ. ಮಕ್ಕಳು ಪಠ್ಯ ಪುಸ್ತಕಗಳಿಲ್ಲದೆಯೇ ಪರೀಕ್ಷೆ ಬರೆಯುವ ದುಸ್ತಿ ತಿಗೆ ಸಿಲುಕಿದ್ದಾರೆ.

ಹೆತ್ತವರ ಆಕ್ರೋಶ
ಪಠ್ಯ ಪುಸ್ತಕಗಳನ್ನು ಸಕಾಲದಲ್ಲಿ ಸರಬರಾಜು ಮಾಡದ ಕಾರಣ ಖಾಸಗಿ ಶಾಲೆಗಳ ಮಕ್ಕಳ ಹೆತ್ತವರು ಶಾಲೆಗಳ ವಿರುದ್ಧ ಆಕ್ರೋಶಿತರಾಗಿದ್ದಾರೆ. ಮೇ ತಿಂಗಳಲ್ಲಿ ಹಣ ಪಾವತಿಸಿದರೂ ತಮ್ಮ ಮಕ್ಕಳಿಗೆ ಇನ್ನೂ ಪಠ್ಯಪುಸ್ತಕಗಳು ಲಭಿಸಿಲ್ಲವೆಂದರೆ ಏನು ಕಥೆ ಎಂದು ಖಾಸಗಿ ಶಾಲೆಗಳ ಮುಖ್ಯಸ್ಥರು, ಶಿಕ್ಷಕರನ್ನು ಮಕ್ಕಳ ಹೆತ್ತವರು ಪ್ರಶ್ನಿಸುವ ಹಂತಕ್ಕೆ ಬಂದಿದೆ.

ಪಠ್ಯ ಪುಸ್ತಕಗಳು ಮಾರಾಟಕ್ಕಿಲ್ಲ!
ಈ ಬಾರಿ ಸರಕಾರ ಮುದ್ರಿಸಿದ ಎಲ್ಲ ಪಠ್ಯ ಪುಸ್ತಕಗಳಲ್ಲಿಯೂ ಮಾರಾಟಕ್ಕಿಲ್ಲ ಎಂದು ಮುದ್ರಿಸಲಾಗಿದೆ. ಸರಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ನೀಡುವ ಉದ್ದೇಶದಿಂದ ಹಾಗೂ ಅಕ್ರಮವಾಗಿ ಮಾರಾಟವಾಗದಂತೆ ಪುಸ್ತಕಗಳ ಮೇಲೆ ಮಾರಾಟಕ್ಕಿಲ್ಲ ಎನ್ನುವ ವಿಷಯವನ್ನು ಮುದ್ರಿಸಲಾಗಿದೆ. ಇದರಿಂದಾಗಿ ಹಣ ತೆತ್ತು ಅಂಗಡಿಗಳಲ್ಲಿ ಪಠ್ಯ ಪುಸ್ತಕಗಳನ್ನು ಖರೀದಿಸುತ್ತಿದ್ದ ಖಾಸಗಿ ಶಾಲಾ ಮಕ್ಕಳಿಗೆ ಅಲ್ಲೂ ಪುಸ್ತಕ ಸಿಗುತ್ತಿಲ್ಲವೆನ್ನುವ ಕೊರಗು ಬಂದಿದೆ.

ಆನ್‌ಲೈನ್‌ ಬೇಡಿಕೆಯಲ್ಲಿ ಎಡವಟ್ಟು
ಸೃಷ್ಟಿಯಾಗಿರುವ ಸಮಸ್ಯೆಗೆ ಶಿಕ್ಷಣ ಇಲಾಖೆ ಕಾರಣವಲ್ಲ. ಸಂಬಂಧಿ ತ ಶಾಲೆಗಳು ಆನ್‌ಲೈನ್‌ನಲ್ಲಿ ಬೇಡಿಕೆ ಪಟ್ಟಿ ಸಲ್ಲಿಸುವಾಗ ಮಾಡಿರುವ ಲೋಪಗಳಿಂದ ಕೆಲವೊಂದು ಖಾಸಗಿ ಶಾಲೆಗಳಿಗೆ ಪಠ್ಯ ಪುಸ್ತಕಗಳ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಪಕ್ಕದ ತಾಲೂಕಿನಲ್ಲಿ ಹೆಚ್ಚುವರಿಯಾಗಿರುವ ಪಠ್ಯ ಪುಸ್ತಕಗಳನ್ನು ಸಂಗ್ರಹಿಸಿ ಕೊರತೆಯಲ್ಲಿರುವ ಶಾಲೆಗಳಿಗೆ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸಮಸ್ಯೆ ಕಂಡುಬಂದಲ್ಲಿ ಅಗತ್ಯ ಕ್ರಮ ಜರುಗಿಸಲಾಗುವುದು.
– ಸುಕನ್ಯಾ ಡಿ.ಎನ್‌., ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ

Advertisement

ಜೆರಾಕ್ಸ್‌ ಮಾಡಿ ಪಾಠ
ಪಠ್ಯಪುಸ್ತಕಗಳು ಇನ್ನೂ ಸರಬರಾಜು ಗೊಳ್ಳದ ಕಾರಣ, ತರಗತಿಗಳಲ್ಲಿ ಪಾಠ ಮಾಡಲು ಶಾಲೆಗಳಲ್ಲಿ ಪಠ್ಯಪುಸ್ತಕದ ಪಾಠಗಳನ್ನು ಶಿಕ್ಷಕರು ಜೆರಾಕ್ಸ್‌ ಮಾಡಿಕೊಂಡು ಪಾಠ ಮಾಡುತ್ತಿದ್ದಾ ರೆ. ಇಲಾಖೆಗೆ ಹಣವನ್ನು ಸಕಾಲದಲ್ಲಿ ಸಲ್ಲಿಸಿದ್ದರೂ, ಪಠ್ಯ ಪುಸ್ತಕಗಳು ಸರಬರಾಜುಗೊಳ್ಳದಿರುವುದು ಬೇಸರ ತಂದಿದೆ. ಪಠ್ಯಪುಸ್ತಕದಲ್ಲಿ ಮಾರಾಟಕ್ಕಿಲ್ಲ ಎನ್ನುವುದು ಮುದ್ರಿತವಾಗಿದ್ದರ ಬಗ್ಗೆ ಆಕ್ಷೇಪವಿಲ್ಲ. ನಾವು ಹೆತ್ತವರಿಗೆ ಮನವರಿಕೆ ಮಾಡುತ್ತೇವೆ. ಲಭ್ಯವಿರುವ ಪುಸ್ತಕಗಳನ್ನು ಸರಬರಾಜು ಮಾಡಿ ಎಂದು ವಿನಂತಿಸಿದರೂ, ಈ ತನಕ ಸಕಾರಾತ್ಮಕ ಸ್ಪಂದನ ದೊರೆತಿಲ್ಲ.
– ಯು.ಜಿ. ರಾಧಾ,
ಖಾಸಗಿ ಶಾಲೆ ಸಂಚಾಲಕ

 ಎಂ.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next