Advertisement

ಜೇವರ್ಗಿಯಲ್ಲಿ ಸರ್ಕಾರಿ ವೈದ್ಯರ ಖಾಸಗಿ ದರ್ಬಾರ್‌

12:25 PM Jul 19, 2017 | Team Udayavani |

ಜೇವರ್ಗಿ: ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆ ವೈದ್ಯರು ಸರಕಾರ ನೀಡುವ ಲಕ್ಷಾಂತರ ರೂ. ವೇತನ ಪಡೆದುಕೊಂಡು ಖಾಸಗಿ ಆಸ್ಪತ್ರೆ ನಡೆಸುತ್ತಿರುವ ಪ್ರಕರಣ ಮಂಗಳವಾರ ಬೆಳಕಿಗೆ ಬಂದಿದೆ.

Advertisement

ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ನಾಲ್ವರು ವೈದ್ಯರಾದ ಮಕ್ಕಳ ತಜ್ಞ ಡಾ| ರಾಘವೇಂದ್ರ ಕುಲಕರ್ಣಿ, ಎಲುಬು ತಜ್ಞ ಡಾ| ಚಂದ್ರಶೇಖರ, ಸ್ಕ್ಯಾನಿಂಗ್‌ (ರೇಡಿಯೋಲೋಜಿಸ್ಟ್‌) ತಜ್ಞೆ ಡಾ| ಶರಣಮ್ಮ ಪಾಟೀಲ, ಡಾ| ಮರೆಪ್ಪ ಕಟ್ಟಿಮನಿ ಎನ್ನುವರು ಪಟ್ಟಣದ ವಿವಿಧ ಕಡೆ ಖಾಸಗಿ ಆಸ್ಪತ್ರೆ ತೆರೆದು ರೋಗಿಗಳ ತಪಾಸಣೆ ನಡೆಸುತ್ತಿರುವುದು ಕೆಲ ಹಿಂದೂಪರ ಸಂಘಟನೆಗಳಿಂದ ಬೆಳಕಿಗೆ ಬಂದಿದೆ. ಕಳೆದ ಹಲವಾರು ತಿಂಗಳಿಂದ ಸರಕಾರಿ ಆಸ್ಪತ್ರೆಯಲ್ಲಿ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ ತಮ್ಮ ಖಾಸಗಿ ಆಸ್ಪತ್ರೆಗೆ ತೆರಳಿ ರೋಗಿಗಳ ತಪಾಸಣೆ ನಡೆಸುತ್ತಿದ್ದಾರೆ. ಕಾಟಾಚಾರಕ್ಕೆ ಸರಕಾರಿ ಉದ್ಯೋಗ ಮಾಡುವ ಈ ವೈದ್ಯರ ನಡೆಗೆ ಸಾರ್ವಜನಿಕರು ತೀವ್ರ ಆಕ್ರೋಶವ್ಯಕ್ತಪಡಿಸಿದ್ದಾರೆ.

ಖಾಸಗಿ ಆಸ್ಪತ್ರೆ ನಡೆಸುತ್ತಿರುವ ಈ ನಾಲ್ವರು ವೈದ್ಯರು ಸರಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ತಮ್ಮನ್ನು ಖಾಸಗಿ ಆಸ್ಪತ್ರೆಗೆ ಬಂದು ನೋಡಲು ಸೂಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕಳೆದ ಅನೇಕ ದಿನಗಳಿಂದ ಈ ವ್ಯವಹಾರ ನಡೆಸುತ್ತಿರುವ ವೈದ್ಯರಿಗೆ ಪಟ್ಟಣದ ಕೆಲ ಖಾಸಗಿಮೆಡಿಕಲ್‌ ಮಾಲೀಕರ ಬೆಂಬಲ ಕೂಡ ಇದೆ ಎಂದು ಹೇಳಲಾಗುತ್ತಿದೆ. ಇದೇ ವೈದ್ಯರು ತಮ್ಮ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದರೇ ಸಾವಿರಾರು ರೂ. ತೆರಬೇಕಾದ ಪರಿಸ್ಥಿತಿ ಬಡ ರೋಗಿಗಳದ್ದಾಗಿದೆ. ಈ ಬಗ್ಗೆ ಸಂಬಂಧಪಟ್ಟ ತಾಲೂಕು ವೈದ್ಯಾಧಿ ಕಾರಿಗಳು ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮಕೈಗೊಳ್ಳದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕಳೆದ ಕೆಲ ದಿನಗಳ ಹಿಂದೆ ಈ ವೈದ್ಯರ ಕರ್ತವ್ಯ ನಿರ್ಲಕ್ಷದ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ| ಸಿದ್ಧು ಪಾಟೀಲ ತರಾಟೆಗೆ ತೆಗೆದುಕೊಂಡು ಎಚ್ಚರಿಸಿದ್ದಾರೆ ಎನ್ನಲಾಗಿದೆ. ಆದರೂ ಮಂಗಳವಾರ ಮಕ್ಕಳ ತಜ್ಞ ಡಾ| ರಾಘವೇಂದ್ರ ಕುಲಕರ್ಣಿ ಬೆಳಗ್ಗೆ ಸರಕಾರಿ ಆಸ್ಪತ್ರೆಗೆ ಬಂದು ಹಾಜರಾತಿ ಪುಸ್ತಕದಲ್ಲಿ
ಸಹಿ ಮಾಡಿ 11:00 ಗಂಟೆಗೆ ಪಕ್ಕದಲ್ಲಿಯೇ ಇರುವ ತಮ್ಮ ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ. ಈ ವಿಷಯ ಅರಿತ ಶ್ರೀರಾಮಸೇನೆ ಕಾರ್ಯಕರ್ತರು ಡಾ| ರಾಘವೇಂದ್ರ ಕುಲಕರ್ಣಿ ರೋಗಿಗಳ ತಪಾಸಣೆ ನಡೆಸುವ ವೇಳೆಯಲ್ಲಿಯೇ ದಿಡೀರ್‌ ದಾಳಿ ನಡೆಸಿ ವೈದ್ಯರನ್ನು ಕೂಡಿ ಹಾಕಿದ್ದಾರೆ.

ವಿಷಯ ತಿಳಿದು ತಕ್ಷಣ ತಹಶೀಲ್ದಾರ್‌ ಯಲ್ಲಪ್ಪ ಸುಬೇದಾರ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ| ಸಿದ್ದು ಪಾಟೀಲ ಆಗಮಿಸಿ ಡಾ| ರಾಘವೇಂದ್ರ ಕುಲಕರ್ಣಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕರ್ತವ್ಯ ನಿರ್ಲಕ್ಷ ವಹಿಸುತ್ತಿರುವ ಹಾಗೂ ಬಡ ರೋಗಿಗಳ ರಕ್ತ ಹಿಂಡುತ್ತಿರುವ ಈ ನಾಲ್ವರು ವೈದ್ಯರನ್ನು ಕೂಡಲೇ ಅಮಾನತುಗೊಳಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಶ್ರೀರಾಮಸೇನೆ ಅಧ್ಯಕ್ಷ
ಶರಣು ಕೋಳಕೂರ ಆಗ್ರಹಿಸಿದ್ದಾರೆ.

ಮೇಲಧಿಕಾರಿಗೆ ವರದಿ ಸಲ್ಲಿಕೆ
ಸರಕಾರಿ ಆಸ್ಪತ್ರೆಯ ನಾಲ್ವರು ವೈದ್ಯರು ಕರ್ತವ್ಯ ನಿರ್ಲಕ್ಷಿಸಿ ಖಾಸಗಿ ಆಸ್ಪತ್ರೆ ತೆರೆದು ರೋಗಿಗಳ ತಪಾಸಣೆ ನಡೆಸುತ್ತಿರುವ ಬಗ್ಗೆ ಮೇಲಿನ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ.
ಯಲ್ಲಪ್ಪ ಸುಬೇದಾರ, ತಹಶೀಲ್ದಾರ್‌ ವಿಜಯಕುಮಾರ ಎಸ್‌.ಕಲಾ

Advertisement
Advertisement

Udayavani is now on Telegram. Click here to join our channel and stay updated with the latest news.

Next