Advertisement

ಉಡುಪಿ ಜಿಲ್ಲೆಯಲ್ಲಿ ನಾಳೆಯಿಂದ ಬಸ್ಸು ಸಂಚಾರ ಆರಂಭ ;ರಸ್ತೆಗಿಳಿಯಲಿವೆ ಶೇ.30ರಷ್ಟು ಬಸ್ಸುಗಳು

07:43 PM Jun 30, 2021 | Team Udayavani |

ಉಡುಪಿ : ಉಡುಪಿ ಜಿಲ್ಲೆಯಾದ್ಯಂತ ನಾಳೆಯಿಂದ (ಜು.1ರಿಂದ) ಖಾಸಗಿ ಬಸ್ಸುಗಳ ಸಂಚಾರ ಆರಂಭವಾಗಲಿದೆ. ಕೆಎಸ್ಸಾರ್ಟಿಸಿ ಬಸ್ಸುಗಳು ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಓಡಾಟ ಮಾಡುತ್ತಿವೆ. ಜು.1ರಿಂದ ಸಿಟಿ, ಸರ್ವಿಸ್‌ ಹಾಗೂ ಎಕ್ಸ್‌ಪ್ರೆಸ್‌ ಬಸ್ಸುಗಳು ಶೇ.30ರಷ್ಟು ಓಡಾಟ ಮಾಡಲಿವೆ.

Advertisement

ಈಗಾಗಲೇ ನರ್ಮ್ ಬಸ್ಸುಗಳು ನಗರದ ಶಿರ್ವ-ಮಂಚಕಲ್ಲು, ಕಾಪು, ಪಡುಕೆರೆ, ತೆಂಕನಿಡಿಯೂರು, ಹೆಬ್ರಿ, ಹಿರಿಯಡ್ಕ, ಬ್ರಹ್ಮಾವರ ಭಾಗಗಳಿಗೆ ಸಂಚಾರ ಮಾಡುತ್ತಿವೆ. ಖಾಸಗಿ ಬಸ್ಸುಗಳೂ ಸಂಚಾರ ಮಾಡುವುದರಿಂದ ಜನರಿಗೆ ಮತ್ತಷ್ಟು ಅನುಕೂಲವಾಗಲಿದೆ.

ಕೆಎಸ್ಸಾರ್ಟಿಸಿ ಬಸ್ಸು ದರ ಏರಿಕೆ ಇಲ್ಲ
ಡೀಸೆಲ್‌ ದರ ಹೆಚ್ಚಳವಾಗುತ್ತಿರುವ ಕಾರಣಕ್ಕೆ ಖಾಸಗಿ ಬಸ್ಸು ಮಾಲಕರು ಟಿಕೆಟ್‌ ದರ ಹೆಚ್ಚಿಸುವಂತೆ ಬೇಡಿಕೆ ಸಲ್ಲಿಸುತ್ತಿದ್ದಾರೆ. ಆದರೆ ಈ ಬಗ್ಗೆ ಜಿಲ್ಲಾಡಳಿತವಾಗಲಿ, ಆರ್‌ಟಿಒ ಅವರಾಗಲಿ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ಈ ಹಿಂದಿನಂತೆಯೇ ಟಿಕೆಟ್‌ ದರ ಇರಲಿದೆ. ಖಾಸಗಿ ಎಕೆಎಂಎಸ್‌ ಬಸ್ಸುಗಳಲ್ಲಿಯೂ ಈ ಹಿಂದಿನಂತೆಯೇ ಟಿಕೆಟ್‌ ದರ ಇರಲಿದೆ. ಉಳಿದ ಖಾಸಗಿ ಬಸ್ಸುಗಳು ದರ ಹೆಚ್ಚಳ ಮಾಡುವ ಸಾಧ್ಯತೆಗಳಿವೆ.

2020ರ ದರಪಟ್ಟಿಯೇ ಅನ್ವಯ?
ಎಲ್ಲ ಖಾಸಗಿ ಬಸ್ಸುಗಳು ಪರಿಷ್ಕೃತ ದರಪಟ್ಟಿಯನ್ನು 2020ರ ಅ.13ರಿಂದ ಅನ್ವಯವಾಗುವಂತೆ ಆದೇಶಿಸಿ ನಡಾವಳಿ ನೀಡಿದ್ದರೂ ಸಹ ಅಂದಿನಿಂದ ಇಂದಿನವರೆಗೆ ಡೀಸೆಲ್‌, ಆಯಿಲ್‌, ಚಾಲಕರು,ನಿರ್ವಹಕರ ಭತ್ತೆ ಹಾಗೂ ಬಿಡಿಭಾಗಗಳ ದರ ಶೇ.150ರಷ್ಟು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಶಾಸಕ ಕೆ.ರಘುಪತಿ ಭಟ್‌ ಅವರಲ್ಲಿ ಬಸ್ಸು ಮಾಲಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕೋರಿಕೊಂಡಿರುವ ನಿಮಿತ್ತ ವ್ಯತ್ಯಯ ಪರಿಷ್ಕೃತ ದರವನ್ನು ನೀಡಬಹುದಾಗಿದೆ ಎಂದು ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬಸ್ಸು ನಿರ್ವಹಣೆಗೆ ಲಕ್ಷಾಂತರ ರೂ.ವ್ಯಯ
ಕಳೆದ 2-3 ತಿಂಗಳಿನಿಂದ ಬಸ್ಸುಗಳನ್ನು ನಿಲ್ಲಿಸಿರುವುದರಿಂದ ಬಸ್ಸುಗಳಲ್ಲಿ ಗಿಡಗಂಟಿಗಳು, ಪಾಚಿಗಳು ಬೆಳೆದುನಿಂತಿವೆ. ಬ್ಯಾಟರಿಗಳು ಸಂಪೂರ್ಣ ಹದಗೆಟ್ಟು ಹೋಗಿವೆ. ವಾಹನದ ಚಕ್ರಗಳನ್ನೂ ಬದಲಾಯಿಸುವ ಅಗತ್ಯವಿದೆ. ಸರ್ವಿಸು, ಶುಚಿತ್ವ ಸಹಿತ ಹಲವಾರು ದುರಸ್ತಿ ಕಾರ್ಯಗಳನ್ನು ಮಾಡಬೇಕಿರುವುದರಿಂದ ಕನಿಷ್ಠ 1 ಬಸ್ಸುಗಳನ್ನು ಹೊರತೆಗೆಯಲು 1ರಿಂದ 1.5 ಲ.ರೂ.ಗಳವರೆಗೆ ಬಸ್ಸು ಮಾಲಕರು ವ್ಯಯಮಾಡಬೇಕಾಗುತ್ತದೆ.

Advertisement

ಕೋವಿಡ್‌ ಮಾರ್ಗಸೂಚಿ ಪಾಲನೆ ಕಡ್ಡಾಯ
ಬಸ್ಸುಗಳಲ್ಲಿ ಕೋವಿಡ್‌ ನಿಯಮಾವಳಿಗಳನ್ನು ತಪ್ಪದೆ ಪಾಲಿಸುವಂತೆ ಬಸ್ಸು ಮಾಲಕರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ. ಪ್ರಯಾಣಿಕರಂತೆ ಬಸ್ಸು ಚಾಲಕರು, ನಿರ್ವಹಕರೂ ಮಾಸ್ಕ್ ಧರಿಸಿಕೊಳ್ಳಬೇಕು. ಅಲ್ಲದೆ ಶೇ.50ಕ್ಕಿಂತ ಅಧಿಕ ಮಂದಿ ಪ್ರಯಾಣಿಕರನ್ನು ಹಾಕಬಾರದು. ಯಾರು ಕೂಡ ನಿಂತುಕೊಂಡು ಪ್ರಯಾಣ ಮಾಡಬಾರದು. ಈ ಎಲ್ಲ ನಿಯಮಾವಳಿಗಳನ್ನು ಉಲ್ಲಂ ಸುವ ಬಸ್ಸುಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ.

ಯಾವ ವಾಹನಕ್ಕೆ ಎಷ್ಟು ತೆರಿಗೆ?

ಆಸನ ಸಾಮರ್ಥ್ಯ ತೆರಿಗೆ ಮೊತ್ತ (ರೂ.ಗಳಲ್ಲಿ)
50 47,952
35 32,967
43+2 42,957
28+2 27,972

ಸರೆಂಡರ್‌ ಮಾಡಲಾಗಿರುವ ವಾಹನಗಳು

ವಾಹನ ಸಂಖ್ಯೆ
ಕಾಂಟ್ರಾಕ್ಟ್ ಕ್ಯಾರಿಯೇಜ್‌ 116
ಸ್ಟೇಜ್‌ ಕ್ಯಾರಿಯೇಜ್‌ 830
ಗೂಡ್ಸ್‌ ವಾಹನ 74
ಟೂರಿಸ್ಟ್‌ ಟ್ಯಾಕ್ಸಿ 04
ಖಾಸಗಿ ಸೇವಾ ವಾಹನ 23
ಆ್ಯಂಬುಲೆನ್ಸ್‌ 01
ಮ್ಯಾಕ್ಸಿಕ್ಯಾಬ್‌ 86
ಶೈಕ್ಷಣಿಕ ಸಂಸ್ಥೆಯ ಬಸ್ಸುಗಳು 27
ಒಟ್ಟು 116

ತೆರಿಗೆ ಪಾವತಿಸದಿದ್ದರೆ ವಾಹನ ಮುಟ್ಟುಗೋಲು
ಕೊರೊನಾ ಲಾಕ್‌ಡೌನ್‌ನಿಂದಾಗಿ ಹಲವಾರು ವಾಹನಗಳ ಮಾಲಕರು ತಮ್ಮ ವಾಹನಗಳನ್ನು ಆರ್‌ಟಿಒ ಕಚೇರಿಗೆ ಸರೆಂಡರ್‌ ಮಾಡಿದ್ದರು. ಇದನ್ನು ಬಿಡಿಸಿಕೊಳ್ಳಲು 3 ತಿಂಗಳ ತೆರಿಗೆಯನ್ನು ಮುಂಗಡವಾಗಿ ಪಾವತಿಸಬೇಕಾಗುತ್ತದೆ. ತೆರಿಗೆ ಪಾವತಿಸದೆ ವಾಹನಗಳು ಓಡಾಟ ಮಾಡುತ್ತಿರುವುದು ಕಂಡುಬಂದರೆ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಲಾಗುವುದು.
-ಜೆ.ಪಿ.ಗಂಗಾಧರ್‌, ಪ್ರಾದೇಶಿಕ ಸಾರಿಗೆ ಅಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next