Advertisement

ಖಾಸಗೀಕರಣಕ್ಕೆ ರಹದಾರಿಯಾದ ಮುಷ್ಕರ

11:34 AM Apr 12, 2021 | Team Udayavani |

ಬೆಂಗಳೂರು: ಮುಷ್ಕರದ ಹಿನ್ನೆಲೆಯಲ್ಲಿ “ಪ್ರಯಾಣಿಕರ ಅನುಕೂಲ’ (?)ಕ್ಕಾಗಿ ಶುರುವಾದ ಖಾಸಗಿ ವಾಹನಗಳ ದರ್ಬಾರು ಭವಿಷ್ಯದಲ್ಲಿ ನಿಗಮಗಳ ಖಾಸಗೀಕರಣಕ್ಕೆ “ರಹದಾರಿ’ ಆಗುವ ಸ್ಪಷ್ಟ ಸೂಚನೆಗಳು ಗೋಚರಿಸುತ್ತಿವೆ.

Advertisement

ಕೇವಲ ಮೂರು ತಿಂಗಳ ಅಂತರದಲ್ಲಿ ಸರ್ಕಾರಕ್ಕೆ ಅತಿಹೆಚ್ಚು ತಲೆನೋವಾಗಿ ಪರಿಣಮಿಸಿದ ಎರಡನೇಸಾರಿಗೆ ಮುಷ್ಕರ ಇದಾಗಿದೆ. ಈ ಬಾರಿ ಸರ್ಕಾರನೇರವಾಗಿ ಮೊದಲ ದಿನದಿಂದಲೇ ಖಾಸಗಿ ವಾಹನಗಳಿಗೆ ಮೊರೆಹೋಯಿತು. ಜತೆಗೆ ಪರ್ಮಿಟ್‌ಗಳಿಗೆ ಇದ್ದ ನಿರ್ಬಂಧವನ್ನೂ ಸಡಿಲಗೊಳಿಸಿತು. ಜತೆಗೆತರಬೇತಿ ಮತ್ತು ಪ್ರೊಬೇಷನರಿ ನೌಕರರಿಗೆ ಗೇಟ್‌ಪಾಸ್‌ನೀಡುತ್ತಿರುವುದು, ಕೇಂದ್ರದ ಫೇಮ್‌-2 ಅಡಿ ಈಗಾಗಲೇ ಹೊರಗುತ್ತಿಗೆಗೆ ಟೆಂಡರ್‌ ಆಹ್ವಾನ ಸೇರಿದಂತೆ ಇತ್ತೀಚಿನ ಬೆಳವಣಿಗೆಗಳೆಲ್ಲವೂ ಸರ್ಕಾರಿ ಬಸ್‌ ಅನ್ನು “ಖಾಸಗೀಕರಣದ ಮಾರ್ಗ’ಕ್ಕೆ ತೆಗೆದುಕೊಂಡು ಹೋಗುವ ಮುನ್ಸೂಚನೆಗಳಾಗಿ ಕಾಣುತ್ತಿವೆ.

“ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಹಾಗೂ ಎನ್‌ಇಕೆಆರ್‌ಟಿಸಿಯಲ್ಲಿ ಖಾಸಗೀಕರಣಕ್ಕೆ ತುಸು ಸಮಯ ಹಿಡಿಯಬಹುದು. ಆದರೆ, ಬಿಎಂಟಿಸಿಯಲ್ಲಿ ಇದಕ್ಕೆ ಹೆಚ್ಚು ಸಮಯ ಆಗುವುದಿಲ್ಲ. ಈಗಾಗಲೇ ಇಲ್ಲಿ ಅದರ ಸುಳಿವುಗಳು ಸುಳಿಯುತ್ತಿವೆ. ಸುಮಾರು 20 ಸಾವಿರ ಬಸ್‌ಗಳು ಹಾಗೂ 1.30 ಲಕ್ಷ ಸಿಬ್ಬಂದಿಅನುಪಸ್ಥಿತಿಯಲ್ಲೂ ಪ್ರಯಾಣಿಕರಿಗೆ ಸಾರಿಗೆ ಸೇವೆ ದೊರೆಯುತ್ತಿದೆ. ಮತ್ತೂಂದೆಡೆ ನಿಗಮಗಳೂ ನಷ್ಟದಲ್ಲಿವೆ. ಇದೇ ನೆಪ ಇಟ್ಟುಕೊಂಡು ಮುಂದಿನ ದಿನಗಳಲ್ಲಿಖಾಸಗೀಕರಣದ ಯೋಚನೆಗಂತೂ ಹಚ್ಚುವುದು ಸ್ಪಷ್ಟ’ ಎಂದು ಹೆಸರು ಹೇಳಲಿಚ್ಛಿಸದ ನಿಗಮಗಳ ಕೆಲ ಅಧಿಕಾರಿಗಳು ಕಳವಳ ವ್ಯಕ್ತಪಡಿಸುತ್ತಾರೆ.

ಬೆಂಗಳೂರು ನಗರ ಸೇರಿದಂತೆ ಕೆಲವು ನಿರ್ದಿಷ್ಟ ಮಾರ್ಗಗಳಲ್ಲಿ ಸಾರಿಗೆ ನಿಗಮಗಳು ಏಕಸ್ವಾಮ್ಯ ಹೊಂದಿದ್ದವು. ಅಲ್ಲಿ ಪ್ರಯಾಣಿಕರಿಗೆ ಉತ್ತಮ ಸೇವೆ ಜತೆಗೆ ಆದಾಯವೂ ಬರುತ್ತಿತ್ತು. ಉದಾಹರಣೆಗೆ ಮೆಜೆಸ್ಟಿಕ್‌ನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಎಲೆಕ್ಟ್ರಾನಿಕ್‌ ಸಿಟಿ, ವೈಟ್‌ಫೀಲ್ಡ್‌ ಮತ್ತಿತರ ಮಾರ್ಗಗಳಲ್ಲಿ ನಿಯಮಿತವಾಗಿ ಹೆಚ್ಚು ಪ್ರಯಾಣಿಕರ ದಟ್ಟಣೆ ಇರುತ್ತದೆ. ಅದರಲ್ಲೂ ಹವಾ ನಿಯಂತ್ರಿತ ಬಸ್‌ಗಳೂ ಅಧಿಕವಾಗಿವೆ. ಇದು ರಾಜ್ಯದ ಬಹುತೇಕ ಮಾರ್ಗಗಳಲ್ಲಿ ಕಾಣಬಹುದು.ಈಗ ಅಲ್ಲಿ ಖಾಸಗಿ ಕಣ್ಣು ಬಿದ್ದಿದೆ. ಇದಕ್ಕೆ ಸ್ವತಃ ಸರ್ಕಾರ ಅವಕಾಶವನ್ನೂ ಮಾಡಿಕೊಟ್ಟಿದೆ.

ಎಲೆಕ್ಟ್ರಾನಿಕ್‌ ಸಿಟಿ, ಏರ್‌ಪೋರ್ಟ್‌ಗೆ ಅತ್ಯಧಿಕ ಅರ್ಜಿ!: ಇದಕ್ಕೆ ಪೂರಕವಾಗಿ ಹೇಳುವುದಾದರೆ, ಮುಷ್ಕರಕ್ಕೂ ಮುನ್ನ ಖಾಸಗಿ ವಾಹನಗಳಕಾರ್ಯಾಚರಣೆಗೆ ಸಾರಿಗೆ ಇಲಾಖೆಯಿಂದ ತಾತ್ಕಾಲಿಕ ಪರ್ಮಿಟ್‌ ಪಡೆಯಲು ಅರ್ಜಿ ಆಹ್ವಾನಿಸಲಾಗಿತ್ತು.ಈ ಸಂದರ್ಭದಲ್ಲಿ ಅತಿ ಹೆಚ್ಚು ಅರ್ಜಿಗಳು ಮೆಜೆಸ್ಟಿಕ್‌ -ಎಲೆಕ್ಟ್ರಾನಿಕ್‌ ಸಿಟಿ, ಮೆಜೆಸ್ಟಿಕ್‌-ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಜೆಸ್ಟಿಕ್‌-ವೈಟ್‌ ಫೀಲ್ಡ್‌ ಸೇರಿದಂತೆ ಕೆಲವೇ ಕೆಲವು ಮಾರ್ಗಗಳಲ್ಲಿ ಕಾರ್ಯಾಚರಣೆಗೆ ಪರ್ಮಿಟ್‌ ಕೋರಿದ್ದವು. ಅಷ್ಟೇ ಅಲ್ಲ, ಸರ್ಕಾರದ ಕೋರಿಕೆ ಮೇರೆಗೆ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ(ಎಪಿಎಸ್‌ಆರ್‌ಟಿಸಿ)ವು ಚಿಕ್ಕಬಳ್ಳಾಪುರ, ಕೋಲಾರ,ಚಿಂತಾಮಣಿ ಸೇರಿದಂತೆ ರಾಜ್ಯದ ಗಡಿ ಪ್ರದೇಶಗಳಲ್ಲಿ ಹೆಚ್ಚುವರಿ ಬಸ್‌ಗಳನ್ನು ರಸ್ತೆಗಿಳಿಸಿದೆ. ಏ.8(ಗುರುವಾರ) ಆ ಭಾಗಗಳಲ್ಲಿ ಎಪಿಎಸ್‌ಆರ್‌ಟಿಸಿ ಬಸ್‌ ಚಾಲಕರೊಂದಿಗೆ ಖಾಸಗಿ ವಾಹನಗಳ ಸಿಬ್ಬಂದಿವಾಗ್ವಾದ ನಡೆಸಿ, ಕೆಲವರನ್ನು ವಾಪಸ್‌ ಕಳುಹಿಸಿದ ಘಟನೆಗಳೂ ವರದಿಯಾಗಿವೆ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

Advertisement

ಇನ್ನು ಸಾರಿಗೆ ಇಲಾಖೆ ಕೆಲ ಅಧಿಕಾರಿಗಳೂ ಖಾಸಗಿ ವಾಹನಗಳ ಕಾರ್ಯಾಚರಣೆಗೆ ಪೂರಕವಾಗಿದ್ದಾರೆ.ನಿಗಮಗಳ ಬಸ್‌ಗಳು ಏಕಸ್ವಾಮ್ಯ ಹೊಂದಿದ್ದಮಾರ್ಗಗಳಲ್ಲಿ ಖಾಸಗಿಯವರು ಪ್ರವೇಶಿಸಿದಾಗ,ಅದು ಸಾರಿಗೆ ಇಲಾಖೆ ಅಧಿಕಾರಿಗಳ ಹಿಡಿತಕ್ಕೆ ಬರುತ್ತದೆ. ಹೆಚ್ಚು ಆದಾಯ ಬರುವ ಮಾರ್ಗಗಳಲ್ಲಿ ಪರ್ಮಿಟ್‌ಗೆ ಬೇಡಿಕೆ ಇರುವುದರಿಂದ ಪರ್ಮಿಟ್‌ವಿತರಣೆ ಹಾಗೂ ಅದರಿಂದ ತಮಗೆ ಬರುವ”ಆದಾಯ’ ನಿರೀಕ್ಷೆಯಲ್ಲಿ ಅಧಿಕಾರಿಗಳು ಇದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಹಿನ್ನೆಲೆಯಲ್ಲಿ “ತಾತ್ಕಾಲಿಕ ರಹದಾರಿ'(ಪರ್ಮಿಟ್‌)ಯು ಕಾಯಂ ಕಾರ್ಯಾಚರಣೆಗೆಅನುವು ಮಾಡಿಕೊಡುವ ಸಾಧ್ಯತೆ ಇದೆ. ಇದುನಿಗಮಗಳಿಗೆ ಮುಂದೆಂದೂ ತುಂಬಲಾರದ ನಷ್ಟವಾಗಿಕೂಡ ಪರಿಣಮಿಸಲಿದೆ. ಅಷ್ಟಕ್ಕೂ ಈ ಮೊದಲು ಕೂಡನಗರದಲ್ಲಿ ಖಾಸಗಿ ವಾಹನಗಳು ಕಾರ್ಯಾಚರಣೆ ಮಾಡುತ್ತಿದ್ದವು. ಆದರೆ, ಕಳೆದ ಮೂರು ದಿನಗಳಿಗೆ ಹೋಲಿಸಿದರೆ, ಶೇ.20ರಷ್ಟು ಮಾತ್ರ ನಿರ್ದಿಷ್ಟಮಾರ್ಗಗಳಲ್ಲಿ ಎಂದು ಹೇಳಬಹುದು. ಅದರಲ್ಲೂಅರ್ಧದಷ್ಟು ನಿಯಮಬಾಹಿರವಾಗಿ ಕಾರ್ಯಾಚರಣೆಮಾಡುತ್ತಿದ್ದವು ಎಂದು ಬಿಎಂಟಿಸಿ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಖಾಸಗಿಯತ್ತ ಪ್ರಯಾಣಿಕರ ಚಿತ್ತ? :

ಪ್ರಯಾಣಿಕರೂ ಸರ್ಕಾರಿ ಬಸ್‌ಗಳಿಂದ ಖಾಸಗಿ ಬಸ್‌ಗಳಿಗೆ “ಶಿಫ್ಟ್’ ಆಗುವ ಸಾಧ್ಯತೆಯೂ ಇದೆ. ಹೇಗೆಂದರೆ, ಮುಂದಿನ ದಿನಗಳಲ್ಲಿ ಏಕಸ್ವಾಮ್ಯ ಹೊಂದಿರುವ ನಿಗಮಗಳ ಮಾರ್ಗಗಳಲ್ಲಿ ಖಾಸಗಿವಾಹನಗಳು ಸರ್ಕಾರಿ ಬಸ್‌ಗಳ ಪ್ರಯಾಣ ದರಕ್ಕಿಂತ ಕಡಿಮೆದರದಲ್ಲಿ ಸೇವೆ ಒದಗಿಸುವ ಮೂಲಕ ಆಕರ್ಷಿಸಲಿವೆ. ಆಗಾಗ್ಗೆನಡೆಯುವ ಮುಷ್ಕರಗಳೂ ಪ್ರಯಾಣಿಕರ ಮನಸ್ಥಿತಿ ಬದಲಾವಣೆಗೆ ಪೂರಕ ಕಾರಣವಾಗುವ ಸಾಧ್ಯತೆ ಇದೆ.

ಸಾರ್ವಜನಿಕ ಸೇವೆ ಅನಿವಾರ್ಯತೆಯಿಂದ ಖಾಸಗಿವಾಹನಗಳ ಮೊರೆಹೋಗಿದ್ದೇವೆ. ನೌಕರರ ಧೋರಣೆಗಳುಇದೇ ರೀತಿ ಮುಂದು ವರಿದರೆ, ಖಾಸಗೀಕರಣದ ಆತಂಕ ಖಂಡಿತಸಾರಿಗೆ ನಿಗಮಗಳನ್ನು ಕಾಡುವ ಸಾಧ್ಯತೆ ಇದೆ. ಹಾಗಂತ, 52ವರ್ಷಗಳ ಹಳೆಯದಾದ ಸಂಸ್ಥೆಯನ್ನು ಏಕಾಏಕಿ ಹಾಗೆ ಮಾಡಲುಬರುವುದಿಲ್ಲ. ಆದರೆ ನೌಕರರ ನಡೆಗಳು ಆ ನಿಟ್ಟಿನಲ್ಲಿ ಚಿಂತನೆಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಇದೆ. – ಶಿವಯೋಗಿ ಕಳಸದ, ವ್ಯವಸ್ಥಾಪಕ ನಿರ್ದೇಶಕರು, ಕೆಎಸ್‌ಆರ್‌ಟಿಸಿ

 

-ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next