Advertisement

ಖಾಸಗಿ ಬಸ್‌ಗಳ “ಅಂಧಾ ದರ್ಬಾರ್‌’; ಮಿತಿ ಮೀರಿದ ಟಿಕೆಟ್‌ ದರ, ದಂಡ ಪ್ರಯೋಗಕ್ಕೂ ಬಗ್ಗದ ಲಾಬಿ

10:25 PM Oct 23, 2022 | Team Udayavani |

ಬೆಂಗಳೂರು: ಸಾರಿಗೆ ಅಧಿಕಾರಿಗಳ “ದಂಡ ಪ್ರಯೋಗ’ಕ್ಕೂ ಬಗ್ಗದ ಖಾಸಗಿ ಬಸ್‌ ಟ್ರಾವೆಲ್‌ ಏಜೆನ್ಸಿಗಳು ಬೇಕಾಬಿಟ್ಟಿ ವಸೂಲಿ ಮುಂದುವರಿಸಿವೆ. ಪರಿಣಾಮ ಹಬ್ಬಕ್ಕೆ ತೆರಳಿ ವಾಪಸ್‌ ಬೆಂಗಳೂರಿಗೆ ಬರುವವರಿಗೂ ದುಬಾರಿ ಪ್ರಯಾಣ ಬರೆ ಬೀಳಲಿದೆ.

Advertisement

ಪ್ರಸ್ತುತ ಬೆಂಗಳೂರಿನಿಂದ ರಾಜ್ಯ ಮತ್ತು ನೆರೆಯ ರಾಜ್ಯಗಳ ನಾನಾ ಊರುಗಳಿಗೆ 3-4 ಪಟ್ಟು ಹಣ ಸುರಿದು ಜನ ಹಬ್ಬಕ್ಕೆ ತೆರಳುತ್ತಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತವಾದ ಕೂಡಲೇ ಎಚ್ಚೆತ್ತ ಸಾರಿಗೆ ಇಲಾಖೆ ಅಧಿಕಾರಿಗಳು ತಂಡಗಳನ್ನು ರಚಿಸಿ ಕಾರ್ಯಾಚರಣೆ ಆರಂಭಿಸಿದರು. ಮೂರು ದಿನಗಳಲ್ಲಿ 700ಕ್ಕೂ ಅಧಿಕ ಪ್ರಕರಣ ದಾಖಲಿಸಿ 25ರಿಂದ 30 ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ. ಆದರೂ ಬಸ್‌ ಏಜೆನ್ಸಿಗಳು ಟಿಕೆಟ್‌ ದರ ಇಳಿಕೆ ಮಾಡಿಲ್ಲ.

ಹೆಚ್ಚು ಬೇಡಿಕೆ ಇರುವ ಆಯ್ದ ಮಾರ್ಗಗಳಲ್ಲಿ ವಿಮಾನ ದರಕ್ಕೆ ಸರಿಸಮಾನವಾಗಿ ಟಿಕೆಟ್‌ ದರ ವಸೂಲು ಮಾಡಲಾಗುತ್ತಿದೆ. ಉದಾಹರಣೆಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಎಸಿ ಸ್ಲಿàಪರ್‌ ಅಥವಾ ಮಲ್ಟಿಎಕ್ಸೆಲ್‌ ಒಂದು ಟಿಕೆಟ್‌ಗೆ 4,000- 5,000 ರೂ. ಇದೆ. ಬೆಳಗಾವಿಯಿಂದ ಬೆಂಗಳೂರಿಗೆ ಎಸಿ ಸ್ಲಿàಪರ್‌ 4,000- 6,000 ರೂ., ವಿಜಯಪುರ- ಬೆಂಗಳೂರು, ಚೆನ್ನೈ- ಬೆಂಗಳೂರು 2,000- 2,300 ರೂ. ವಸೂಲು ಮಾಡಲಾಗುತ್ತಿದ್ದು, ಪ್ರಯಾಣಿಕರು ಕಂಗಾಲಾಗಿದ್ದಾರೆ.

ಹಬ್ಬದ ಹಿನ್ನೆಲೆಯಲ್ಲಿ ಬಸ್‌ಗಳ ಟಿಕೆಟ್‌ ಬುಕಿಂಗ್‌ ಪ್ರಕ್ರಿಯೆ ತಿಂಗಳು ಮುಂಚಿತವಾಗಿಯೇ ಆರಂಭವಾಗಿರುತ್ತದೆ. ಬಹುತೇಕ ಎಲ್ಲವೂ ಆನ್‌ಲೈನ್‌ ಮೂಲಕವೇ ನಡೆಯುತ್ತದೆ. ಯಾರು ಎಷ್ಟು ವಸೂಲು ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಿದೆ. ಹೀಗಿರುವಾಗ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದು ಯಾಕೆ? ಬರೀ ಪರವಾನಿಗೆ ನಿಯಮ ಉಲ್ಲಂಘನೆಗೆ 5 ಸಾವಿರ ರೂ. ದಂಡ ವಿಧಿಸಿದರೆ ಮುಗಿಯಿತೇ? ಪರವಾನಿಗೆ ಅಮಾನತುಗೊಳಿಸುವುದು ಮುಂತಾದ ಕಠಿನ ಕ್ರಮಕ್ಕೆ ಯಾಕೆ ಮುಂದಾಗುತ್ತಿಲ್ಲ ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ.

ಎಲ್ಲಿಗೆ ಎಷ್ಟು ವಸೂಲು? (ಅ. 26ಕ್ಕೆ)
ಎಲ್ಲಿಂದ ಎಲ್ಲಿಗೆ ಪ್ರಯಾಣ ದರ ರೂ.ಗಳಲ್ಲಿ (ಎಲ್ಲವೂ ಪ್ರೀಮಿಯಂ ಸೇವೆಗಳು)
ಹುಬ್ಬಳ್ಳಿ-ಬೆಂಗಳೂರು 4,000- 5,000
ಬೆಳಗಾವಿ-ಬೆಂಗಳೂರು 4,000- 6,000
ಮಂಗಳೂರು-ಬೆಂಗಳೂರು 1,800- 2,000
ವಿಜಯಪುರ-ಬೆಂಗಳೂರು 2,100- 2,200
ಚೆನ್ನೈ-ಬೆಂಗಳೂರು 2,000- 2,280

Advertisement

3 ದಿನಗಳಲ್ಲಿ 704 ಕೇಸು; 30 ಲಕ್ಷ ರೂ. ದಂಡ ವಸೂಲು
ಬೇಕಾಬಿಟ್ಟಿ ವಸೂಲು ಮಾಡುವ ಖಾಸಗಿ ವಾಹನಗಳ ವಿರುದ್ಧ ನಗರಾದ್ಯಂತ ಪ್ರವರ್ತನ ಚಟುವಟಿಕೆಗಳನ್ನು ತೀವ್ರಗೊಳಿಸಿರುವ ಸಾರಿಗೆ ಇಲಾಖೆ ಕಳೆದ ಮೂರು ದಿನಗಳಲ್ಲಿ ಸುಮಾರು 704 ಪ್ರಕರಣಗಳನ್ನು ದಾಖಲಿಸಿದ್ದು, 25-30 ಲಕ್ಷ ರೂ. ವಸೂಲು ಮಾಡಿದೆ.

ಈ ಸಂಬಂಧ ಒಟ್ಟಾರೆ 8ರಿಂದ 10 ತಂಡಗಳನ್ನು ರಚಿಸಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಮೊದಲ ದಿನ 198 ಪ್ರಕರಣಗಳನ್ನು ದಾಖಲಿಸಲಾಗಿತ್ತು. ಕಳೆದೆರಡು ದಿನಗಳಲ್ಲಿ ಮತ್ತಷ್ಟು ಚುರುಕುಗೊಳಿಸಿ 500ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಅವರೆಲ್ಲರ ವಿರುದ್ಧ ಪರವಾನಿಗೆ ನಿಯಮಗಳ ಉಲ್ಲಂಘನೆ ಅಡಿ ಕೇಸು ದಾಖಲಾಗಿದ್ದು, ಪರವಾನಿಗೆ ಅಮಾನತಿನಂತಹ ಕ್ರಮಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಒಂದೆಡೆ ಸಹಾಯವಾಣಿ (9449863426/ 9449863429)ಗೆ ಬರುವ ದೂರುಗಳನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಮತ್ತೂಂದೆಡೆ ಸ್ವಯಂಪ್ರೇರಿತವಾಗಿ ಪ್ರವರ್ತನ ಚಟುವಟಿಕೆಗಳನ್ನು ಚುರುಕುಗೊಳಿಸಿ ತಪಾಸಣೆ ನಡೆಸಲಾಗುತ್ತಿದೆ. ಅದರಡಿ 704 ಕೇಸು ದಾಖಲಿಸಿಕೊಂಡು, 25-30 ಲಕ್ಷ ರೂ. ದಂಡ ವಸೂಲು ಮಾಡಲಾಗಿದೆ. ಜಿಲ್ಲಾ ಮಟ್ಟದಲ್ಲೂ 1ರಿಂದ 2 ತನಿಖಾ ತಂಡಗಳನ್ನು ರಚಿಸಲಾಗಿದೆ. ಮುಂಬರುವ ದಿನಗಳಲ್ಲಿ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮತ್ತಷ್ಟು ಕಠಿನ ಕ್ರಮ ಕೈಗೊಳ್ಳಲು ಯೋಜನೆ ರೂಪಿಸಲಾಗುವುದು ಎಂದು ಹೆಚ್ಚುವರಿ ಆಯುಕ್ತ (ಪ್ರವರ್ತನ) ಮಲ್ಲಿಕಾರ್ಜುನ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next