ಮೆಜೆಸ್ಟಿಕ್ ಸುತ್ತ ಸಂಚಾರದಟ್ಟಣೆಗೆ ಪ್ರಮುಖ ಕಾರಣವಾಗಿರುವ ಖಾಸಗಿ ಬಸ್‌ಗಳ ಕಾರ್ಯಾಚರಣೆಯನ್ನು ನಗರದಿಂದ ಹೊರಗೆಹಾಕಲು ಹಲವು ಬಾರಿ ಕೈಹಾಕಿ ವಿಫಲವಾಗಿದ್ದ ಸರ್ಕಾರ, ಮತ್ತೂಮ್ಮೆ ಈ ನಿಟ್ಟಿನಲ್ಲಿ ಮುಂದಾಗಿದೆ. ಆದರೆ, ಮೂಲಸೌಕರ್ಯ ಸಿಗದ ಹೊರತು, ಹೋಗುವ ಪ್ರಶ್ನೆಯೇ ಇಲ್ಲ ಎಂದು ಖಾಸಗಿ ಬಸ್ ಮಾಲಿಕರು ಪಟ್ಟುಹಿಡಿದಿದ್ದಾರೆ.
Advertisement
ನಗರದ ಪೀಣ್ಯ ಬಸವೇಶ್ವರ ಬಸ್ ನಿಲ್ದಾಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ಸಚಿವ ಎಚ್.ಎಂ. ರೇವಣ್ಣ, ಇತ್ತೀಚೆಗೆ ನಗರದಲ್ಲಿ ವಾಯುಮಾಲಿನ್ಯ ವಿಪರೀತ ಆಗುತ್ತಿದೆ. ಬೆಂಗಳೂರನ್ನು ಮಾಲಿನ್ಯರಹಿತ ನಗರವಾಗಿ ನಿರ್ಮಿಸಲು ಸರ್ಕಾರ ನಿರ್ಧರಿಸಿದ್ದು, ಈಗಾಗಲೇ ಪೀಕ್ ಅವರ್‌ನಲ್ಲಿ ಭಾರೀ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ. ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಖಾಸಗಿ ಬಸ್ ನಿಲ್ದಾಣ ಸ್ಥಳಾಂತರಿಸಲು ಉದ್ದೇಶಿಸಲಾಗಿದೆ ಎಂದರು.
Related Articles
Advertisement
ಖಾಸಗಿ ಬಸ್‌ಗಳಿಂದಲೇ ಸಂಚಾರ ದಟ್ಟಣೆ: ಮೆಜೆಸ್ಟಿಕ್‌ನ ಆನಂದರಾವ್ ವೃತ್ತದಲ್ಲಿ ಸುಮಾರು 468 ಹಾಗೂ ಧನ್ವಂತರಿ ಆಯುರ್ವೇದಿಕ್ ಕಾಲೇಜಿನಿಂದ 240ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ಕಾರ್ಯಾಚರಣೆ ಮಾಡುತ್ತಿವೆ. ವಾಸ್ತವವಾಗಿ ಇವರಿಂದಲೇ ಮೆಜೆಸ್ಟಿಕ್ ಸುತ್ತ ಸಂಚಾರದಟ್ಟಣೆ ಆಗಿದೆ.
ಆದರೆ, ಹೊರಹಾಕಿರುವುದು ಕೆಎಸ್‌ಆರ್‌ಟಿಸಿ ಬಸ್‌ಗಳನ್ನು! ಇದರಿಂದ ಪ್ರತಿ ದಿನ ಮೂರೂ ಸಾರಿಗೆ ನಿಗಮಕ್ಕೆ ನಿತ್ಯ 3ರಿಂದ 3.50 ಲಕ್ಷ ರೂ. ನಷ್ಟವಾಗುತ್ತಿದೆ. ಖಾಸಗಿ ಬಸ್‌ಗಳನ್ನು ಹೊರಹಾಕುವಂತೆ ಹಲವು ಬಾರಿ ಕೆಎಸ್‌ಆರ್‌ಟಿಸಿ ಕೂಡ ಮನವಿ ಮಾಡಿತ್ತು. ಆದರೆ, ಪ್ರಯೋಜನವಾಗಿರಲಿಲ್ಲ ಎಂದು ಕೆಎಸ್‌ಆರ್‌ಟಿಸಿಯ ಸಂಚಾರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ) ಪ್ರಕಾರ ಕೆಎಸ್‌ಆರ್‌ಟಿಸಿಯ ಎರಡು ಕಿ.ಮೀ. ಸುತ್ತಲಿನ ಪ್ರದೇಶದಲ್ಲಿ ಯಾವುದೇ ಖಾಸಗಿ ಬಸ್ ನಿಲ್ದಾಣಗಳನ್ನು ನಿರ್ಮಿಸುವಂತಿಲ್ಲ. ಆದರೆ, ಇಲ್ಲಿ ಆ ನಿಯಮ ಉಲ್ಲಂಘನೆಯಾಗುತ್ತಿದೆ ಎಂದೂ ಅವರು ಹೇಳುತ್ತಾರೆ. ಈ ಹಿಂದೆ ಕೂಡ ಹಲವು ಬಾರಿ ಖಾಸಗಿ ಬಸ್ ನಿಲ್ದಾಣ ಸ್ಥಳಾಂತರದ ಕೂಗು ಕೇಳಿಬಂದಿತ್ತು. ಆದರೆ, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ನಂತರ ಈ ಪ್ರಸ್ತಾವವನ್ನು ಕೈಬಿಡಲಾಗಿತ್ತು. ಈಗ ಮತ್ತೆ ಸಾರಿಗೆ ಇಲಾಖೆ ಸ್ಥಳಾಂತರಕ್ಕೆ ಮುಂದಾಗಿದೆ.
ಉದಯವಾಣಿ ಕಾಳಜಿಗೆ ಮೆಚ್ಚುಗೆ: ನಗರದಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ಸಚಿವ ಎಚ್.ಎಂ. ರೇವಣ್ಣ, “ಉದಯವಾಣಿ’ಯಲ್ಲಿ ಪ್ರಕಟವಾದ “ಧೂಳಾಗಿದೆ ಬೆಂದಕಾಳೂರು ಗಾಳಿ’ ವರದಿಯನ್ನು ಪ್ರಸ್ತಾಪಿಸಿದರು.
ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿದ್ದು, ಈ ಬಗ್ಗೆ ಒಂದೆರಡು ದಿನಗಳ ಹಿಂದೆ “ಉದಯವಾಣಿ’ಯಲ್ಲಿ ವಿವರವಾದ ವರದಿ ಪ್ರಕಟವಾಗಿದೆ ಎಂದರು. ಮಾಲಿನ್ಯರಹಿತ ನಗರವನ್ನಾಗಿ ನಿರ್ಮಿಸುವುದು ನಮ್ಮ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.