Advertisement

ಜೂನ್‌ 1ರಿಂದ ಖಾಸಗಿ ಬಸ್‌ ಓಡಾಟ? ದ.ಕ. 150, ಉಡುಪಿ 20 ಸಿಟಿ ಬಸ್‌ಗಳ ಸಂಚಾರ

10:02 AM May 28, 2020 | sudhir |

ಮಂಗಳೂರು/ಉಡುಪಿ: ಕೋವಿಡ್ ಲಾಕ್‌ಡೌನ್‌ನಿಂದಾಗಿ ಕಳೆದ ಎರಡು ತಿಂಗಳಿನಿಂದ ಸ್ತಬ್ಧಗೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಮತ್ತು ಸಿಟಿ ಬಸ್‌ಗಳ ಪೈಕಿ ಶೇ.50ರಷ್ಟು ಬಸ್‌ಗಳು ಜೂನ್‌ 1ರಿಂದ ರಸ್ತೆಗಿಳಿಯುವುದು ಬಹುತೇಕ ಖಚಿತವಾಗಿದೆ. ಉಡುಪಿಯಲ್ಲಿ 20 ಸಿಟಿ ಬಸ್ಸುಗಳು ಕಾರ್ಯಾಚರಿಸಲಿವೆ.

Advertisement

ಮಂಗಳೂರಿನಲ್ಲಿ ಬುಧವಾರ ನಡೆದ ಬಸ್‌ ಮಾಲಕರ ಸಂಘದ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದ್ದು, ರಾಜ್ಯ ಸರಕಾರದ ಮಾರ್ಗಸೂಚಿಯಂತೆ ಖಾಸಗಿ ಬಸ್‌ ಕಾರ್ಯಾಚರಣೆ ಮಾಡಲು ನಿರ್ಧರಿಸಲಾಗಿದೆ. ಜಿಲ್ಲೆಯಲ್ಲಿ ತಲಾ 150 ಸಿಟಿ ಮತ್ತು ಖಾಸಗಿ ಬಸ್‌ಗಳು ರಸ್ತೆಗಿಳಿಯುವ ಸಾಧ್ಯತೆ ಇದೆ.

ಮಂಗಳೂರು ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿ “ಬಸ್‌ ಕಾರ್ಯಾಚರಣೆ ಸಂಬಂಧ ಬುಧವಾರದಂದು ಆರ್‌ಟಿಒ ಮತ್ತು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ್ದೇವೆ. ರಾಜ್ಯ ಸರಕಾರದ ಮಾರ್ಗಸೂಚಿಯಂತೆಯೇ ಕಾರ್ಯಾಚರಣೆ ಮಾಡುತ್ತೇವೆ. ಆದರೆ, ಪ್ರತಿಯೊಬ್ಬ ಪ್ರಯಾಣಿಕರ ದೇಹದ ಉಷ್ಣಾಂಶ ಪರಿಶೀಲಿಸುವುದು ಮತ್ತು ಪ್ರತೀ ಪ್ರಯಾಣಿಕರ ಮಾಹಿತಿಯನ್ನು ಪಡೆಯುವುದು ಕಷ್ಟವಾಗಬಹುದು ಎಂಬುವುದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆೆ’ ಎಂದು ತಿಳಿಸಿದ್ದಾರೆ.

ಮೇ 29ರಂದು ಸಿಟಿ ಬಸ್‌ ಮಾಲಕರ ಸಂಘದ ಸಭೆ ಇದೆ. ಒಂದು ಬಸ್‌ನಲ್ಲಿ 25-30 ಜನರನ್ನು ಕರೆದೊಯ್ಯುವುದಾದರೆ ಕೋವಿಡ್ ಸಂಕಷ್ಟ ಮುಗಿಯುವವರೆಗಾದರೂ ಕನಿಷ್ಠ ಅರ್ಧಾಂಶ ದರ ಹೆಚ್ಚಿಸಬೇಕೆಂದು ಮೇ 28ರಂದು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಮನವಿ ಮಾಡುತ್ತೇನೆ’ ಎಂದು ಉಡುಪಿ ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ಕೆ.ಸುರೇಶ ನಾಯಕ್‌ ತಿಳಿಸಿದ್ದಾರೆ.

ದರ ಹೆಚ್ಚಳ ಸಾಧ್ಯತೆ
ಜೂನ್‌ 1ರಿಂದ ಬಸ್‌ ಸಂಚಾರ ಆರಂಭವಾಗಲಿದ್ದು, ಆ ವೇಳೆ ದರ ಹೆಚ್ಚಳ ಬಹುತೇಕ ಖಚಿತ ಎನ್ನಲಾಗಿದೆ. ಖಾಸಗಿ ಬಸ್‌ಗಳಲ್ಲಿ ಶೇ.15ರಷ್ಟು ದರ ಹೆಚ್ಚಳ ಮಾಡಲಾಗುತ್ತದೆ ಎಂದು ಸಾರಿಗೆ ಸಚಿವರು ಈಗಾಗಲೇ ಮಾಹಿತಿ ನೀಡಿದ್ದು, ಇನ್ನೇನು ಕೆಲದಿನಗಳಲ್ಲಿ ಈ ಬಗ್ಗೆ ಅಧಿಕೃತ ಅಧಿಸೂಚನೆ ಹೊರ ಬೀಳಲಿದೆ. ಬಳಿಕ ಮಂಗಳೂರು ನಗರದಲ್ಲಿ ಸದ್ಯ ಸ್ಟೇಜ್‌ ಒಂದಕ್ಕೆ 8 ರೂ. ಇದ್ದ ದರ ಪರಿಷ್ಕೃತವಾಗಿ 10 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

ಉಡುಪಿಯಲ್ಲಿ ಈಗಾಗಲೇ ಬಸ್‌ ಮಾಲಕರ ಸಭೆಯನ್ನು ಕರೆದು ಬಸ್‌ ಆರಂಭಿಸಲು ಸೂಚಿಸಿದ್ದೇವೆ. ಪಾಲಿಸಬೇಕಾದ ನಿಯಮಗಳ ಕುರಿತೂ ತಿಳಿಸಿದ್ದೇವೆ. ಬಸ್‌ ಮಾಲಕರ ಸಂಘದಿಂದ ಸರಕಾರಕ್ಕೆ ಬೇಡಿಕೆಗಳನ್ನು ಈಡೇರಿಸಲು ಮನವಿ ಮಾಡಿದ್ದೇವೆ. ಆರ್‌ಟಿಒ ಜತೆ ಮಾತನಾಡಿ ಮತ್ತೂಮ್ಮೆ ಸಭೆ ಕರೆಯುವ ಅಗತ್ಯವಿದ್ದರೆ ಕರೆಯುತ್ತೇನೆ.
– ಜಿ. ಜಗದೀಶ್‌,  ಜಿಲ್ಲಾಧಿಕಾರಿಗಳು, ಉಡುಪಿ.

ಬಸ್‌ ಓಡಾಟಕ್ಕೆ ಅನುಮತಿ
ದ.ಕ. ಜಿಲ್ಲೆಯಲ್ಲಿ ಜೂನ್‌ 1ರಿಂದ ಖಾಸಗಿ ಬಸ್‌ ಓಡಾಟ ನಡೆಸುವ ಬಗ್ಗೆ ಬಸ್‌ ಮಾಲಕರು ಜಿಲ್ಲಾಡಳಿತದ ಜತೆ ಸಭೆ ನಡೆಸಿದ್ದು, ನಿರ್ದೇಶನಗಳನ್ನು ನೀಡಲಾಗಿದೆ. ಪ್ರಯಾಣಿಕರು ಮತ್ತು ಬಸ್‌ ನಿರ್ವಾಹಕರು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಬಳಕೆ ಮಾಡುವಂತೆ ಸೂಚಿಸಲಾಗಿದೆ. ಬಸ್‌ ದರ ಹೆಚ್ಚಳದ ಬಗ್ಗೆ ರಾಜ್ಯ ಸರಕಾರದ ಅಧಿಕೃತ ಆದೇಶ ಬಂದ ಬಳಿಕ ತೀರ್ಮಾನಿಸಲಾಗುವುದು.
-ಸಿಂಧೂ ಬಿ. ರೂಪೇಶ್‌, ದ.ಕ. ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next