ಮಂಗಳೂರು: ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ ನಡೆಯುತ್ತಿದ್ದು, ಸರ್ಕಾರಿ ಬಸ್ ಗಳು ರಸ್ತೆಗಿಳಿದಿಲ್ಲ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಬಸ್ ಬಂದ್ ಅಷ್ಟಾಗಿ ತಟ್ಟಿಲ್ಲ.
ಉಭಯ ಜಿಲ್ಲೆಗಳಲ್ಲಿ ಪ್ರಯಾಣಿಕರು ಸರ್ಕಾರಿ ಬಸ್ ಗಳಿಗಿಂತ, ಖಾಸಗಿ ಬಸ್ ಗಳನ್ನೇ ಹೆಚ್ಚಾಗಿ ಅವಲಂಭಿಸಿರುವ ಕಾರಣ ಜಿಲ್ಲೆಯಲ್ಲಿ ಓಡಾಡುವವರಿಗೆ ಬಸ್ ಬಂದ್ ಹೆಚ್ಚಿನ ಪರಿಣಾಮ ಬೀರಿಲ್ಲ.
ಆದರೆ ಸರ್ಕಾರಿ ಬಸ್ ಗಳು ಮಂಗಳೂರಿನಲ್ಲಿ ರಸ್ತೆಗಿಳಿದಿಲ್ಲ. ಸರ್ಕಾರಿ ಬಸ್ ಚಾಲಕ ನಿರ್ವಾಹಕರು ಕರ್ತವ್ಯಕ್ಕೆ ಗೈರು ಹಾಜರಾಗಿರುವ ಹಿನ್ನೆಲೆಯಲ್ಲಿ ಬಸ್ ಗಳು ಇಲ್ಲದೆ ಮಂಗಳೂರು ಬಸ್ ನಿಲ್ದಾಣ ಖಾಲಿ ಖಾಲಿಯಾಗಿ ಬಿಕೋ ಎನ್ನುತ್ತಿದೆ.
ಜಿಲ್ಲೆಯಿಂದ ಕಾಸರಗೋಡು ಸೇರಿದಂತೆ ಹೊರ ಜಿಲ್ಲೆಗೆ ಹೋಗುವ ಪ್ರಯಾಣಿಕರು ಬಸ್ ಗಾಗಿ ಬಸ್ ಸ್ಟ್ಯಾಂಡ್ ನಲ್ಲಿ ಪ್ರಯಾಣಿಕರು ಕಾದು ಕುಳಿತಿರುವುದು ಕಂಡು ಬಂತು. ಇವರಿಗಾಗಿ ಖಾಸಗಿ ಬಸ್ ವ್ಯವಸ್ಥೆ ಮಾಡಲಾಗಿದೆ. ಮಂಗಳೂರು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದೊಳಗೆ ಖಾಸಗಿ ಬಸ್ ಗಳಿಗೆ ಅವಕಾಶ ನೀಡಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಕೆಎಸ್ ಆರ್ ಟಿಸಿ ಬಸ್ ಬಸ್ ನಿಲ್ದಾಣದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.