Advertisement

ಐಸಿಸಿ ಕಿವುಡರ ವಿಶ್ವಕಪ್‌ -2022:ಭಾರತ ತಂಡದಲ್ಲಿ ಕುಂದಾಪುರದ ಪೃಥ್ವಿರಾಜ್‌ ಶೆಟ್ಟಿಗೆ ಸ್ಥಾನ

11:07 PM May 09, 2022 | Team Udayavani |

ಕುಂದಾಪುರ: ಮುಂಬರುವ ಸೆಪ್ಟಂಬರ್‌ನಲ್ಲಿ ಕತಾರ್‌ನ ದೋಹಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕಿವುಡರ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ಭಾರತದ ಅಂತಿಮ 15 ಮಂದಿಯ ತಂಡವನ್ನು ಪ್ರಕಟಿಸಲಾಗಿದ್ದು, ಕುಂದಾಪುರ ಮೂಲದ ಪೃಥ್ವಿರಾಜ್‌ ಶೆಟ್ಟಿ ಹುಂಚನಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಿಶ್ವಕಪ್‌ಗೆ ಆಯ್ಕೆಯಾದ ರಾಜ್ಯದ ಏಕೈಕ ಕ್ರಿಕೆಟಿಗರಾಗಿದ್ದಾರೆ.

Advertisement

ಬೈಂದೂರು ತಾಲೂಕಿನ ಕೊಲ್ಲೂರು ಸಮೀಪದ ಗೋಳಿಹೊಳೆ ಗ್ರಾಮದ ಹುಂಚನಿಯ ದಿ| ಸುಭಾಶ್ಚಂದ್ರ ಶೆಟ್ಟಿ ಹಾಗೂ ಶೀಲಾವತಿ ದಂಪತಿಯ ಪುತ್ರನಾಗಿರುವ ಪೃಥ್ವಿರಾಜ್‌ ಅವರು ವೇಗದ ಬೌಲರ್‌ ಮಾತ್ರವಲ್ಲದೆ, ಕೆಳ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್‌ ಆಗಿ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ. 31 ವರ್ಷ ಪ್ರಾಯದ ಪೃಥ್ವಿರಾಜ್‌ ಆಟವಾಡುವ ಬಳಗದಲ್ಲಿ ಸ್ಥಾನ ಪಡೆಯುವ ವಿಶ್ವಾಸ ಹೊಂದಿದ್ದಾರೆ.

ಏಕೈಕ ಕನ್ನಡಿಗ
ಕಳೆದ ವರ್ಷ ಅಂತಿಮ 41 ಮಂದಿಯ ಸಂಭಾವ್ಯ ತಂಡವನ್ನು ಅಂತಿಮಗೊಳಿಸಲಾಗಿದ್ದು, ಅದರಲ್ಲಿ ಪೃಥ್ವಿರಾಜ್‌ ಅವರೊಂದಿಗೆ ರಾಜ್ಯದ ಇನ್ನಿಬ್ಬರು ಆಟಗಾರರಾದ ಅನ್ಸಿಲ್‌ ಪಿಂಟೋ ಹಾಗೂ ಶೋಯಿಬ್‌ ಮಹಮ್ಮದ್‌ ಸ್ಥಾನ ಪಡೆದಿದ್ದರು. ಆದರೆ ಅಂತಿಮ 15 ಸದಸ್ಯರ ತಂಡದ ಆಯ್ಕೆಯಲ್ಲಿ ಪೃಥ್ವಿರಾಜ್‌ ಅವರಿಗೆ ಮಾತ್ರ ಅದೃಷ್ಟ ಒಲಿದು ಬಂದಿದೆ. ದಿಲ್ಲಿಯಲ್ಲಿ ಕಳೆದ 4 ದಿನಗಳಿಂದ ನಡೆದ ಆಯ್ಕೆ ಶಿಬಿರದ ಮೂಲಕ ತಂಡವನ್ನು ಆಯ್ಕೆ ಮಾಡಲಾಗಿದೆ. ಇನ್ನು 15 ದಿನಗಳ ಕಾಲ ಆಯ್ಕೆಯಾದ 15 ಮಂದಿಗೆ ಅಲ್ಲಿಯೇ ತರಬೇತಿ ನಡೆಯಲಿದೆ.

ಸಾಧನೆಗೆ ಅಡ್ಡಿಯಾಗದ ನ್ಯೂನತೆ
ಪೃಥ್ವಿರಾಜ್‌ ಹುಟ್ಟು ಕಿವುಡರಾಗಿದ್ದರೂ, ಕ್ರಿಕೆಟ್‌ನಲ್ಲಿ ಸಾಧನೆ ಮಾಡಬೇಕು ಎನ್ನುವ ಹಂಬಲಕ್ಕೆ ಈ ನ್ಯೂನತೆ ಅಡ್ಡಿಯಾಗಲೇ ಇಲ್ಲ. ವಿಶೇಷ ಕ್ರಿಕೆಟ್‌ ಟೂರ್ನಿಗಳಲ್ಲಿ ಮಾತ್ರವಲ್ಲದೆ ಎಲ್ಲರಂತೆ ಎಂಪಿಲ್‌ನಲ್ಲಿ ಐಕಾನ್‌ ಆಟಗಾರನಾಗಿ, ಕುಂದಾಪುರದ ಟಾರ್ಪಡೋಸ್‌ ತಂಡದ ಆಟಗಾರರಾಗಿಯೂ ಮಿಂಚಿದ್ದಾರೆ. ಕರ್ನಾಟಕ ಕಿವುಡರ ಕ್ರಿಕೆಟ್‌ ತಂಡದ ಆಟಗಾರನಾಗಿ, ಕರ್ನಾಟಕ ತಂಡದ ನಾಯಕನಾಗಿದ್ದಾರೆ.

ಹೊಸದಿಲ್ಲಿಯ ಆಯ್ಕೆ ಶಿಬಿರದಲ್ಲಿರುವ ಪೃಥ್ವಿರಾಜ್‌ ಶೆಟ್ಟಿಯವರು “ಉದಯವಾಣಿ’ ಜತೆ ಮಾತನಾಡಿದ್ದು, ಆಯ್ಕೆಯಾದ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.

Advertisement

ಅಂತಿಮ 15ರ ತಂಡಕ್ಕೆ ಆಯ್ಕೆಯಾದ ಬಗ್ಗೆ ಹೇಗನ್ನಿಸುತ್ತಿದೆ?
ತುಂಬಾ ಖುಷಿಯಾಗುತ್ತಿದೆ. ಈ ಸಂತಸವನ್ನು ಹೇಗೆ ವ್ಯಕ್ತಪಡಿಸಬೇಕು ಅನ್ನುವುದೇ ತಿಳಿಯುತ್ತಿಲ್ಲ. ಪದಗಳೇ ಇಲ್ಲ.

ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗಲಿದೆಯೇ?
ಆ ನಿಟ್ಟಿನಲ್ಲಿ ಕಠಿನ ಪರಿಶ್ರಮ ಪಡುತ್ತಿದ್ದೇನೆ. ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದೇನೆ. ಖಂಡಿತ ಅವಕಾಶ ಸಿಗುವ ವಿಶ್ವಾಸವಿದೆ.

 ನ್ಯೂನತೆ ಮೆಟ್ಟಿನಿಂತು ಈ ಮಟ್ಟಕ್ಕೆ ಸಾಧನೆ ಮಾಡಿರುವ ಬಗ್ಗೆ ?
ನನಗೆ ಚಿಕ್ಕಂದಿನಿಂದಲೂ ಕ್ರಿಕೆಟ್‌ ಆಟವೆಂದರೆ ಅತೀವ ಇಷ್ಟ. ನನ್ನ ನ್ಯೂನತೆ ಬಗ್ಗೆ ಯಾವತ್ತಿಗೂ ಯೋಚಿಸಿಲ್ಲ. ಕ್ರಿಕೆಟ್‌ನಲ್ಲಿ ಈ ಮಟ್ಟಕ್ಕೆ ಬೆಳೆಯಲು ಪೋಷಕರು, ಮನೆಯವರು, ಸಂಬಂಧಿಕರು, ಸ್ನೇಹಿತರು, ಕೋಚ್‌ಗಳು, ಅವಕಾಶ ನೀಡಿದ ತಂಡಗಳ ಪ್ರೋತ್ಸಾಹ, ಸಹಕಾರವೇ ಕಾರಣ. ಅವರೆಲ್ಲರೂ ನನ್ನೊಂದಿಗಿದ್ದರಿಂದ ಇಂದು ಈ ಸಾಧನೆ ನನ್ನಿಂದ ಸಾಧ್ಯವಾಗಿದೆ.

ಭಾರತ ತಂಡ ಹೇಗಿದೆ? ಬಲಾಡ್ಯ ತಂಡಗಳು ಯಾವುವು?
ಭಾರತ ತಂಡ ಎಲ್ಲ ವಿಭಾಗಗಳಲ್ಲೂ ಸಶಕ್ತವಾಗಿದ್ದು, ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ವಿಶ್ವಕಪ್‌ ಗೆಲ್ಲುವ ದೃಢ ವಿಶ್ವಾಸವಿದೆ.

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next