Advertisement

ಡೀಸೆಲ್‌ ಕದಿಯುತ್ತಿದ್ದ ಆರೋಪಿಗಳ ಸೆರೆ

11:00 AM Nov 04, 2017 | |

ಬೆಂಗಳೂರು: ಇಂಧನ ಟ್ಯಾಂಕರ್‌ಗಳಿಂದ ಡಿಸೇಲ್‌ ಮತ್ತು ಪೆಟ್ರೋಲ್‌ ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿಯ ವಂಚನೆ ಮತ್ತು ದುರುಪಯೋಗ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

Advertisement

ಹೊಸಕೋಟೆಯ ವೆಂಕಟನಾದಯ್ಯ (30), ಹಾಸನದ ಗುರುರಾಜ್‌ (36), ಮಲ್ಲೇಶ್‌ (35), ಭವಾನಿನಗರದ ಗೋವಿಂದರಾಜು (41) ಬಂಧಿತರು. ಮತ್ತೂಬ್ಬ ಆರೋಪಿ ಹೊಸಕೋಟೆಯ ಮಂಜುನಾಥ್‌ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ. ಆರೋಪಿಗಳಿಂದ 60 ಸಾವಿರ ಲೀಟರ್‌ ಡಿಸೇಲ್‌, 3 ಟ್ಯಾಂಕರ್‌ಗಳು ಸೇರಿದಂತೆ 40.80 ಲಕ್ಷ ಮೌಲ್ಯದ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಲೆಮರೆಸಿಕೊಂಡಿರುವ ಮಂಜುನಾಥ್‌ ಅಲಿಯಾಸ್‌ ಓಲೆ ಮಂಜ, ಕೆ.ಆರ್‌.ಪುರದ ಮೆಡಹಳ್ಳಿ ಗಾಯಿತ್ರಿ ಟಿಂಬರ್‌ ಯಾರ್ಡ್‌ ಹಿಂಭಾಗ ವಾಹನಗಳ ಪಾರ್ಕಿಂಗ್‌ ಸ್ಥಳ ಮಾಡಿಕೊಂಡಿದ್ದಾನೆ. ನಾಲ್ಕಾರು ಯುವಕರ ಮೂಲಕ ಟ್ಯಾಂಕರ್‌ಗಳ ಚಾಲಕರಿಗೆ ಹಣದ ಆಮಿಷವೊಡ್ಡಿ ದಂಧೆ ನಡೆಸುತ್ತಿದ್ದಾನೆ. ಆದರೆ, ದಾಳಿ ಸಂದರ್ಭದಲ್ಲಿ ಆರೋಪಿ ಸ್ಥಳದಲ್ಲಿ ಇರಲಿಲ್ಲ.

ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುತ್ತಿದ್ದ ಟ್ಯಾಂಕರ್‌ಗಳನ್ನು ತನ್ನ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿಕೊಂಡು ಪ್ರತಿ ಲಾರಿಯಿಂದ 40ರಿಂದ 50 ಲೀಟರ್‌ ತೈಲ ಕಳವು ಮಾಡುತ್ತಿದ್ದ. ನಂತರ ಬೇರೆ ಮಾರ್ಗದಲ್ಲಿ ಮತ್ತೂಂದು ಟ್ಯಾಂಕರ್‌ ಮೂಲಕ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಡಿಪೋಗೆ ಸರಬರಾಜು: ಆರೋಪಿಗಳು ದೇವನಗೊಂದಿಯ ಐಒಸಿಎಲ್‌ ಪೆಟ್ರೋಲಿಯಂ ಕೇಂದ್ರದಿಂದ ಟ್ಯಾಂಕರ್‌ಗಳಿಗೆ ಪೆಟ್ರೋಲ್‌ ಮತ್ತು ಡಿಸೇಲ್‌ ತುಂಬಿಸಿಕೊಂಡು ನಗರದ ಇತರೆ ಪೆಟ್ರೋಲ್‌ ಬಂಕ್‌ಗಳು ಮತ್ತು ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಡಿಪೋಗಳಿಗೆ ಸರಬರಾಜು ಮಾಡುತ್ತಿದ್ದರು.

Advertisement

ಸಾರಿಗೆ ಡಿಪೋ ಸಿಬ್ಬಂದಿ, ತೈಲ ಪ್ರಮಾಣದಲ್ಲಿ ಏರುಪೇರು ಆಗುತ್ತಿದ್ದುದನ್ನು ಅಷ್ಟಾಗಿ ಗಮನಿಸುತ್ತಿರಲಿಲ್ಲ. ಜತೆಗೆ ಪ್ರತಿ ಟ್ಯಾಂಕರ್‌ಗಳಲ್ಲಿ ನಾಲ್ಕು ಭಾಗಗಗಳಲ್ಲಿ ಐದು ಸಾವಿರ ಲೀಟರ್‌ನಂತೆ 20 ಸಾವಿರ ಲೀಟರ್‌ ಪೆಟ್ರೋಲಿಯಂ ತೈಲ ಕೊಂಡೊಯ್ಯುತ್ತಿದ್ದರು.

ಟ್ಯಾಂಕರ್‌ಗಳು ಪೆಟ್ರೋಲಿಯಂ ಕೇಂದ್ರದಿಂದ ಡಿಪೋ ಅಥವಾ ಪೆಟ್ರೋಲ್‌ ಬಂಕ್‌ಗೆ ಹೋಗುವಷ್ಟರಲ್ಲಿ ಬಿಲಿಸಿನ ತಾಪಕ್ಕೆ 20-25 ಲೀ. ಇಂಧನ ಆವಿಯಾಗುವುದು ಸಾಮಾನ್ಯ. ಇದರ ಲಾಭ ಪಡೆಯಲು ಮುಂದಾದ ಆರೋಪಿಗಳು, ಮಂಜುನಾಥ್‌ ಜತೆ ಸೇರಿ ಕಮಿಷನ್‌ ಆಸೆಗಾಗಿ ನಗರಕ್ಕೆ ಪ್ರವೇಶಿಸುವ ಮೊದಲೇ ಟ್ಯಾಂಕರ್‌ಗಳಲ್ಲಿನ ಇಂಧನ ಕಳವು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಳವಿಗೆ ನಕಲೀ ಕೀ ಬಳಕೆ: ಸಾಮಾನ್ಯವಾಗಿ ಪೆಟ್ರೋಲ್‌ ತುಂಬಿದ ಟ್ಯಾಂಕರ್‌ಗಳ ಒಂದು ಕೀ ಪೆಟ್ರೋಲಿಯಂ ಕೇಂದ್ರದ ಸಿಬ್ಬಂದಿ ಮತ್ತೂಂದು ಕೀ ಪೆಟ್ರೋಲ್‌ ಬಂಕ್‌ ಮಾಲೀಕರು ಅಥವಾ ಡಿಪೋ ಮೇಲುಸ್ತುವಾರಿಗಳ ಬಳಿ ಇರುತ್ತದೆ. ಆದರೆ, ಆರೋಪಿಗಳು ಕಳವು ಮಾಡಲೆಂದೇ ಟ್ಯಾಂಕ್‌ಗಳ ನಕಲಿ ಕೀಗಳನ್ನು ಮಾಡಿಸಿಕೊಂಡಿದ್ದರು.

ಹೀಗೆ 25-30 ಟ್ಯಾಂಕರ್‌ಗಳು ನಿತ್ಯ ಈ ಮಾರ್ಗದಲ್ಲಿ ಎರಡು ಬಾರಿ ಸಂಚರಿಸುತ್ತಿದ್ದು, ಪ್ರತಿ ಟ್ಯಾಂಕರ್‌ನಿಂದ ಕನಿಷ್ಠ 40 ಲೀಟರ್‌ನಂತೆ ನಿತ್ಯ ಸಾವಿರಾರು ಲೀಟರ್‌ ಇಂಧನ ಕದ್ದು ಬೇರೆ ಟ್ಯಾಂಕರ್‌ ಮೂಲಕ ಅಕ್ರಮವಾಗಿ ಸಾಗಿಸಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next