Advertisement
ರಾಜಸ್ಥಾನ ಮೂಲದ ಭರತ್‌ಶರ್ಮಾ (34), ಹರಜೀರಾಮ್ ಅಲಿಯಾಸ್ ಹರೀಶ್ (23), ಶರವಣ ಸಿಂಗ್ (25), ಈಶ್ವರ್ ಲಾಲ್ (26) ಹಾಗೂ ಪ್ರವೀಣ್ ಕುಮಾರ್ (27) ಬಂಧಿತರು. ಇವರಿಂದ 22 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಕೊಂಡಿದ್ದು, ಮತ್ತೂಬ್ಬ ಆರೋಪಿ ಮುಂಬೈ ಮೂಲದ ಜಿತೇಂದರ್ ಅಲಿಯಾಸ್ ಲಲಿತ್‌ಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
Related Articles
Advertisement
ಈ ಪೈಕಿ ಶರವಣ್ ಸಿಂಗ್ ಮಾತ್ರ ಇಲ್ಲಿಯೇ ಇದ್ದು ಎಂದಿನಂತೆ ಕೆಲಸ ಕಾರ್ಯದಲ್ಲಿ ತೊಡಗಿದ್ದ ಎಂದು ಅವರು ವಿವರಿಸಿದರು. ದರೋಡೆ ನಡೆದ ಕೆಲ ದಿನಗಳ ಬಳಿಕವೂ ನಗರದಲ್ಲೇ ಇದ್ದ ಶರವಣ್ ಸಿಂಗ್, ನಂತರ ಕಾರ್ಯ ನಿಮಿತ್ತ ರಾಜಸ್ಥಾನಕ್ಕೆ ಹೋಗಿದ್ದ. ಅಲ್ಲಿ ಆರೋಪಿಗಳೆಲ್ಲರೂ ಒಂದೆಡೆ ಸೇರಿ ಮುಂಬೈನ ಪರಿಚಯಸ್ಥ ಚಿನ್ನಾಭರಣ ಮಳಿಗೆ ಮಾಲೀಕನಿಗೆ ಚಿನ್ನಾಭರಣ ಮಾರಾಟ ಮಾಡಲು ಮಾತುಕತೆ ನಡೆಸಿದ್ದರು.
ಅನುಮಾನಸ್ಪದವಾಗಿ ಓಡಾಟ: ಕೆಲವು ದಿನಗಳ ಹಿಂದೆ ಶರವಣ್‌ಸಿಂಗ್ ವಿವೇಕನಗರದ ಬಿಡಿಎ ಕಾಂಪ್ಲೆಕ್ಸ್ ಬಳಿ ಅಪರಿಚಿತ ವ್ಯಕ್ತಿಯ ಜತೆ ಅನುಮಾನಸ್ಪದವಾಗಿ ಮಾತನಾಡುತ್ತ ನಿಂತಿದ್ದ. ಇದನ್ನು ಗಮನಿಸಿದ ಪೇದೆಯೊಬ್ಬರು, ಆತನನ್ನು ಹಿಡಿದು ವಿಚಾರಣೆ ನಡೆಸಿದಾಗ ದರೋಡೆ ಪ್ರಕರಣ ಬಾಯಿಬಿಟ್ಟಿದ್ದಾನೆ. ಅಲ್ಲದೇ ಆರೋಪಿಯ ಸಿಡಿಆರ್(ಕಾಲ್ ಡಿಟೆಲ್ಸ್) ಪರಿಶೀಲಿಸಿದಾಗ ದರೋಡೆ ನಡೆಯುವ ಕೆಲ ದಿನಗಳ ಹಿಂದೆ ಹರೀಶ್ ಹಾಗೂ ಇತರೆ ಆರೋಪಿಗಳಿಗೆ ಕರೆ ಮಾಡಿರುವುದು ಪತ್ತೆಯಾಗಿತ್ತು ಎಂದು ಮೂಲಗಳು ತಿಳಿಸಿವೆ.
ಈ ಹಿಂದೆಯೂ ವಿಚಾರಣೆ: ದೇವಾಲಯದಲ್ಲಿ ಸುಮಾರು 30 ಮಂದಿ ಟೈಲ್ಸ್ ಕೆಲಸ ಮಾಡುತ್ತಿದ್ದು, ದರೋಡೆ ನಡೆದ ಬಳಿಕ ಭಾರತೀನಗರ ಠಾಣೆ ಪೊಲೀಸರು ಶರವಣ್ ಸಿಂಗ್ ಸೇರಿದಂತೆ ಎಲ್ಲ ಕಾರ್ಮಿಕರನ್ನು ಒಂದು ಸುತ್ತು ವಿಚಾರಣೆ ನಡೆಸಿದ್ದರು. ಆಗ ಶರವಣ್ ಸಿಂಗ್ ಯಾವುದೇ ಮಾಹಿತಿ ನೀಡಿರಲಿಲ್ಲ. ಜತೆಗೆ ಅನುಮಾನ ಬಾರದಂತೆ ವರ್ತಿಸಿದ್ದ. ದೇವಾಲಯದಲ್ಲೂ ಅದೇ ರೀತಿ ನಡೆದುಕೊಳ್ಳುತ್ತಿದ್ದ. ಆದ್ದರಿಂದ ಆರೋಪಿಯನ್ನು ವಶಕ್ಕೆ ಪಡೆದಿರಲಿಲ್ಲ ಎಂದು ಪೊಲೀಸರು ಹೇಳಿದರು.
ಕೀ ಹುಡುಕಿ ಕೊಟ್ಟ ಆರೋಪಿ: ಪ್ರಕರಣದ ಮಾಸ್ಟರ್ ಮೈಂಡ್ ಶರವಣ್ ಸಿಂಗ್ ದರೋಡೆ ಮಾಡಲು ನಿರ್ಧರಿಸುತ್ತಿದ್ದಂತೆ, ಹರೀಶ್‌ನ ಸಲಹೆಯಂತೆ ದೇವಾಲಯದ ಮುಖ್ಯದ್ವಾರ ಹಾಗೂ ಗರ್ಭಗುಡಿ ಸೇರಿದಂತೆ ಎಲ್ಲ ಕೀಗಳನ್ನು ಕಳವು ಮಾಡಿದ್ದ. ಈ ಬಗ್ಗೆ ದೇವಾಲಯದ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾಗ, ತಾನೂ ಕೂಡ ಹುಡುಕಾಟಕ್ಕೆ ಸಹಕಾರ ನೀಡಿದ್ದ. ಒಂದು ದಿನ ಬಳಿಕ ದೇವಾಲಯದ ಟೈಲ್ಸ್ ಜೋಡಿಸಿಟ್ಟಿದ್ದ ಸ್ಥಳದಲ್ಲಿ ಕೀ ಸಿಕ್ಕಿದೆ ಎಂದು ತಾನೇ ಆಡಳಿತಾಧಿಕಾರಿಗಳಿಗೆ ತಂದುಕೊಟ್ಟಿದ್ದ. ಈ ಮಧ್ಯೆ ನಕಲಿ ಕೀ ಮಾಡಿಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಮಧು ಮಗ: ಮೊದಲೇ ಸಂಚು ರೂಪಿಸಿದ್ದಂತೆ ಶರವಣ್ ಸಿಂಗ್ ದರೋಡೆಯಾದ ಬಳಿಕ ದೇವಾಲಯದಲ್ಲೇ ಉಳಿದುಕೊಂಡಿದ್ದ. ಕೃತ್ಯ ಎಸಗಿದ ಹತ್ತು ದಿನಗಳ ಬಳಿಕ, ದೇವಾಲಯದ ಆಡಳಿತ ಮಂಡಳಿ ಸದಸ್ಯರಿಗೆ ತನ್ನ ಮದುವೆಯ ಆಹ್ವಾನ ಪತ್ರಿಕೆ ನೀಡಿ, ಮದುವೆಗಾಗಿ ರಜೆ ಹಾಕುತ್ತಿದ್ದೇನೆ. ಮದುವೆಗೆ ಹಣದ ಸಹಾಯ ಮಾಡುವಂತೆ ಕೇಳಿಕೊಂಡಿದ್ದು, ಈ ಹಣವನ್ನು ಸಂಬಳದಲ್ಲಿ ಕಡಿತ ಮಾಡಿಕೊಳ್ಳುವಂತೆ ಮನವಿ ಮಾಡಿದ್ದ. ಇದಕ್ಕೆ ಸ್ಪಂದಿಸಿದ ಆಡಳಿತ ಮಂಡಳಿಯವರು ಆತನಿಗೆ ಸುಮಾರು 30 ಸಾವಿರ ರೂಪಾಯಿ ಕೊಟ್ಟು ಸಹಾಯ ಮಾಡಿದ್ದರು ಎಂದು ಪೊಲೀಸ್ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
ಜೈಲು ಸೇರಿದ್ದ ಆರೋಪಿಗಳು: ಬಂಧಿತ ಐವರ ಪೈಕಿ ಭರತ್ ಶರ್ಮಾ, ಪ್ರವೀಣ್ ಕುಮಾರ್, ಜಿತೇಂದರ್(ನಾಪತ್ತೆಯಾಗಿದ್ದಾನೆ) ಮತ್ತು ಈಶ್ವರ್ ಲಾಲ್, ರಾಜಸ್ಥಾನದ ಬಲೋತ್ರಾ ನಗರದ ಮೋತಿ ಮಾರ್ಕೆಟ್‌ನ ಎಂ.ಜಿ.ಗೋಲ್ಡ್ ಅಂಗಡಿಗೆ ಗ್ರಾಹಕರಂತೆ ನುಗ್ಗಿ ಮಾರಕಾಸ್ತ್ರಗಳನ್ನು ತೋರಿಸಿ ದರೋಡೆ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬಲೋತ್ರಾ ಠಾಣೆ ಪೊಲೀಸರು, ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು. ನಂತರ ಜಾಮೀನು ಪಡೆದು ಹೊರ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.