Advertisement
ಆ ಹಿನ್ನೆಲೆಯಲ್ಲಿಯೇ ರಾಜ್ಯದ ಹಲವು ಜೈಲುಗಳಲ್ಲಿರುವ ಕೈದಿಗಳು ಇದೀಗ ಸ್ವಾತಂತ್ರ್ಯ ಹೋರಾಟಗಾರರ, ಚಿಂತಕರ ಬದುಕು ಬರಹದ ಪುಸ್ತಕಗಳು, ಜ್ಞಾನಪೀಠ ಪುರಸ್ಕೃತ ಸಾಹಿತಿಗಳ ಕೃತಿಗಳನ್ನು ನೀಡುವಂತೆ ಕನ್ನಡ ಪುಸ್ತಕ ಪ್ರಾಧಿಕಾರದಲ್ಲಿ ಕೋರಿಕೆ ಸಲ್ಲಿಸಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಡಾ.ರಾಮ್ ಮನೋಹರ್ ಲೋಹಿಯಾ, ಜ್ಞಾನಪೀಠ ಪುರಸ್ಕೃತ ರಾಷ್ಟ್ರಕವಿ ಕುವೆಂಪು, ಯು.ಆರ್.ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಕಾದಂಬರಿಕಾರ ಎಸ್.ಎಲ್.ಭೈರಪ್ಪ , ಕವಿ ಸಿದ್ಧಲಿಂಗಯ್ಯ ಸೇರಿ ಹಲವು ಹೆಸರಾಂತ ಸಾಹಿತಿಗಳ ಕೃತಿಗಳು ಕಾರಾಗೃಹಗಳ ಗ್ರಂಥ ಭಂಡಾರದಲ್ಲಿಲ್ಲ. ಆ ಹಿನ್ನೆಲೆಯಲ್ಲಿ ಅವುಗಳನ್ನು ಕಾರಾಗೃಹದ ಗ್ರಂಥಾಲಯಕ್ಕೆ ನೀಡಿ ಎಂದು ಪ್ರಾಧಿಕಾರಕ್ಕೆ ಮೌಖೀಕವಾಗಿ ಮನವಿ ಮಾಡಿದ್ದಾರೆ. ಜೈಲು ಕೈದಿಗಳಲ್ಲಿರುವ ಪುಸ್ತಕ ಓದಿನ ಆಸಕ್ತಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೈದಿಗಳು ಇಟ್ಟಿರುವ ಬೇಡಿಕೆ ಪೂರೈಸಲು ಮುಂದಾಗಿದೆ.
Related Articles
Advertisement
ಜೈಲು ಕೈದಿಗಳಲ್ಲಿರುವ ಅಕ್ಷರಾಸಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ, ಈಗಾಗಲೇ ಕೈದಿಗಳು ಕೇಳಿರುವ ಹಲವು ಪುಸ್ತಕಗಳು ಕನ್ನಡ ಪುಸ್ತಕ ಪ್ರಾಧಿಕಾರದಲ್ಲಿವೆ. ಆದರೆ ಕೆಲವೇ ಕೆಲವು ಪುಸ್ತಕಗಳು ಪ್ರಾಧಿಕಾರದಲ್ಲಿಲ್ಲ. ಅಂತಹ ಪುಸ್ತಕಗಳನ್ನು ಖರೀದಿಸಿ ಆಯಾ ಕಾರಾಗೃಹದ ಗ್ರಂಥಾಲಯಗಳಿಗೆ ಸದ್ಯದಲ್ಲೆ ತಲುಪಿಸಲಾಗುವುದು ಎಂದು ಹೇಳಿದ್ದಾರೆ. ‘ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ಕೈದಿಗಳಲ್ಲಿರುವ ಪುಸ್ತಕ ಓದುವ ಆಸಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೈಲು ಕೈದಿಗಳಲ್ಲಿ ಮತ್ತಷ್ಟು ಓದಿನ ಅಭಿರುಚಿ ಬೆಳೆಸಲು ರಾಜ್ಯದ ಹಲವು ಕೇಂದ್ರ ಕಾರಾಗೃಹಗಳಲ್ಲಿ ‘ನಿಮ್ಮ ಮನೆಗೆ ನಮ್ಮ ಪುಸ್ತಕ’ ಕಾರ್ಯಕ್ರಮವನ್ನು ಪ್ರಾಧಿಕಾರ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.
ದೇವೇಶ ಸೂರಗುಪ್ಪ