ಬೆಂಗಳೂರು: ಅನಾರೋಗ್ಯ ಕಾರಣದಿಂದ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದ ಅತ್ಯಾಚಾರ ಪ್ರಕರಣದ ಕೈದಿ ತಪ್ಪಿಸಿಕೊಂಡ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಆತ ಜಯದೇವ ಆಸ್ಪತ್ರೆ ಬಳಿಯಿಂದ ತಪ್ಪಿಸಿಕೊಂಡಿದ್ದ ಎಂದು ಹೇಳಿದ್ದ ಪೊಲೀಸರು ಈಗ ಎಂ.ಎಸ್. ಬಿಲ್ಡಿಂಗ್ ಬಳಿಯಿಂದ ತಪ್ಪಿಸಿಕೊಂಡಿರುವುದಾಗಿ ವರದಿ ನೀಡಿದ್ದಾರೆ. ಸೆ.4ರಂದು ತಪ್ಪಿಸಿಕೊಂಡಿರುವ ಕೈದಿ ಬಸವರಾಜ ಕಳಕಯ್ಯ ಕರಡಗಿ ಮಠ, ಬೆಂಗಾವಲಿಗೆ ಇದ್ದ ಪೊಲೀಸರಿಗೆ ಕಟ್ಟು ಕತೆ ಹೇಳಿ ಎಂ.ಎಸ್ ಬಿಲ್ಡಿಂಗ್‌ನಿಂದ ಪರಾರಿಯಾಗಿದ್ದಾನೆ ಎಂಬುದು ಪೊಲೀಸರ ತನಿಖೆಯಿಂದ ಪತ್ತೆಯಾಗಿದೆ.
ಹೃದಯ ಶಸ್ತ್ರಚಿಕಿತ್ಸೆಗೆ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದ ಕೈದಿ ಬಸವರಾಜನನ್ನು ಸೆ.4ರಂದು ಡಿಸಾcರ್ಜ್ ಮಾಡಲಾಗಿತ್ತು. ಬಳಿಕ ಜೈಲಿಗೆ ಕರೆದೊಯ್ಯುವಾಗ ತಮ್ಮನ್ನು ತಳ್ಳಿ ಪರಾರಿಯಾಗಿದ್ದ ಎಂದು ಬೆಂಗಾವಲು ಕರ್ತವ್ಯದಲ್ಲಿದ್ದ ಸಶಸ್ತ್ರ ಮೀಸಲು ಪಡೆ ಎಎಸ್‌ಐ ಶಿವಮೂರ್ತಿ, ತಿಲಕ್‌ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ದ್ದರು. ಆದರೆ, ಕೈದಿ ಪರಾರಿಯಾಗಿದ್ದು ಜಯದೇವ ಆಸ್ಪತ್ರೆಯಿಂದ ಅಲ್ಲ, ಎಂ. ಎಸ್.ಬಿಲ್ಡಿಂಗ್‌ನಿಂದ ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ. ಆಸ್ಪತ್ರೆಯಿಂದ ಡಿಸಾcರ್ಜ್ ಆದ ಕೈದಿ ಬಸವರಾಜ, ನನಗೆ ಔಷಧ ಮತ್ತಿತರ ಖರ್ಚಿಗೆ ಹಣ ಬೇಕು ಹೀಗಾಗಿ ಎಂ.ಎಸ್.ಬಿಲ್ಡಿಂಗ್‌ನಲ್ಲಿರುವ ಬ್ಯಾಂಕ್‌ಗೆ ತೆರಳಿ ಹಣ
ಬಿಡಿಸಿಕೊಳ್ಳುತ್ತೇನೆ ಎಂದು ಬೆಂಗಾವಲು ಕರ್ತವ್ಯಕ್ಕಿದ್ದ ಎಎಸ್‌ಐ ಶಿವಮೂರ್ತಿ ಹಾಗೂ ಪೇದೆಯನ್ನು ನಂಬಿಸಿದ್ದ. ಆತನ ಮಾತು ನಂಬಿದ ಎಎಸ್‌ಐ ಹಾಗೂ ಪೇದೆ, ಆತನನ್ನು ಎಂ.ಎಸ್ ಬಿಲ್ಡಿಂಗ್ ಬಳಿ ಕರೆತಂದಿದ್ದಾರೆ. ಈ ವೇಳೆ ಕೈಯಲ್ಲಿದ್ದ ಕೊಳ ತೆಗೆಸಿಕೊಳ್ಳಲು ಮತ್ತೂಂದು ನಾಟಕ ಶುರು ಮಾಡಿದ ಬಸವರಾಜ, ಕೈಯಲ್ಲಿ ಕೋಳವಿದ್ದರೆ ಬ್ಯಾಂಕ್ ಒಳಗೆ ಬಿಡುವುದಿಲ್ಲ. ಕೋಳ ತೆಗೆಯಿರಿ ಎಂದು ಹೇಳಿ ಕೇಳಿಕೊಂಡಿದ್ದಾನೆ. ಕೋಳ ತೆಗೆಯುತ್ತಿದ್ದಂತೆ ಬ್ಯಾಂಕ್‌ಗೆ ಹೋದಂತೆ ನಟಿಸಿ, ಕೆಲವೇ ಕ್ಷಣಗಳಲ್ಲಿ ಪರಾರಿಯಾಗಿದ್ದ ಎಂದು ಹಿರಿಯ ಅಧಿಕಾರಿ ವಿವರಿಸಿದರು.
ಘಟನೆ ಎಂ.ಎಸ್.ಬಿಲ್ಡಿಂಗ್‌ನಲ್ಲಿ ನಡೆದಿರುವುದರಿಂದ ಅ ಪ್ರದೇಶ ವ್ಯಾಪ್ತಿಗೆ ಸೇರುವ ವಿಧಾನಸೌಧ ಠಾಣೆ ಪೊಲೀಸರಿಗೆ ಪ್ರಕರಣ ವರ್ಗಾಯಿಸಲಾಗಿದೆ. 2018ರಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಬಸವರಾಜ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಎಂದು ಅಧಿಕಾರಿ ಹೇಳಿದರು.
● ಮಂಜುನಾಥ ಲಘುಮೇನಹಳ್ಳಿ